Tuesday, January 31, 2012

ನಿರ್ಮಿತಿ

ಇನ್ನೂ ಕಟ್ಟಲಾಗುತ್ತಿದೆ...

    ******

 
ಇಟ್ಟಿಗೆಮೇಲಿಟ್ಟಿಗೆಯಿಟ್ಟುಕಟ್ಟಿದೆ
ನಾ ನಿನಗರ್ಥವಾಗೋಲ್ಲ ಬಿಡು ಇದು
ನಡೆಯುತ್ತಿದೆ! ಇದೋ ನಡೆಯುತ್ತಿದೆ, ಇದೂ
ನಡೆಯುತ್ತಿದೆ...
ಆನಂದಾನುಭೂತಿಯದ್ಭುತಕ್ಷಣಾಮೃತಂ!

    ******


ಅನಂತ ಮೆಟ್ಟಿಲುಗಳ ಅನಂತ ಕಂಬಗಳು...
ಕನಸಿನೊಂದು ಹಾದಿ ಹಿಡಿಯುತ್ತ..
ಹಿಡಿದ ಹಾದಿ ಕನಸ ಬದಲಿಸುತ್ತ..
ಒಂದನರ್ಧ ಏರಿ ಇನ್ನೊಂದಕ್ಕೆ ಹಾರಿ,
ಅದರಲೊಂದಿಷ್ಟು ಏರಿ ಮಗದೊಂದಕ್ಕೆ ಹಾರಿ..
ಕನಸು ಹಾದಿ ಬದಲಾಯಿಸುತ್ತ...
ಒಂದು ಏಣಿ ಮತ್ತೊಂದಕ್ಕೆ ದಾರಿ...
ಸುತ್ತಿ ಸುತ್ತಿ ಸುತ್ತಿನೇಣಿಯ ಹತ್ತುತ್ತ...
ಅರ್ಥವೂ ಆಗಲಿಕ್ಕಿಲ್ಲ ಮರಿ,
ಏಣಿಯಾಗಿದ್ದಲ್ಲ, -ಮುಂದೆ ಆಕಾಶಗುರಿ.

    ******


ಏನದು? ಪ್ರೇಮ? ಪ್ರೀತಿ? ಗೊತ್ತಿಲ್ಲ..
ಮಾಡದೇ, ಮಾಡಿದ್ದ ತಿರುಗಿ ನೋಡದೇ,
ತಿರುಗಿ ಮಾಡದೇ, ಮಾಡಿ ತಿರುಗದೇ,
ತಿರುಗುತ್ತ ನೋಡುತ್ತ ಮಾಡುತ್ತ  ಮಾಗುತ್ತ
ನಡೆಯದೇ ಗೊತ್ತಾಗಲಿಕ್ಕೂ ಇಲ್ಲ ಬಿಡು

ಹುಸಿಮಾತು, ತುಸುಮುನಿಸು,
ಅಷ್ಟಿಷ್ಟು ಕುತೂಹಲ ಮತ್ತೆ ಬೆಸೆದೀತು...
ಕೊರಗು ಮರುಗು ಅಗಲು ಅಲುಗು ತುದಿ
ತಿರುಗಿ ಬೆರಗು! ಏನು ಪ್ರೀತಿ ಆಹಾ!
ಗೊತ್ತಾಗುತಿದೆಯಾ..
ಇರಬಹುದು.. ಇರಲೂಬಹುದು.. 
ಯದ್ಭಾವಂ ತದ್ಭವತಿ ಪ್ರೀತಿ :)

    ******


ಏನದು ಏನೇನದು ಏನೋ 
ಅದು ಇದನು ನಡೆಸುತ್ತಿರುವುದು
ಏನಕೋ, ಗೊತ್ತು ಮಾಡದೇ
ನಡೆದಿದ್ದು ಅಂದು, ಗೊತ್ತಲ್ಲವೇ ಅಂತೂ
ನಿತ್ತೀತು ಇಂದು, ಅಂತೇ, ಗೊತ್ತಾಗದೇ..
ಆಕಸ್ಮಿಕಫಲವು - ಆಕಸ್ಮಿಕವಾಗಿ ವಿಫಲವೂ...

    ******


ಹೇಳಿಬಾರದೆಂದೂ ಅಮೃತಕ್ಷಣ
ಅಲ್ಪವೇ ಸಾಕ್ಷಾತ್ಕಾರ ಕ್ಷಣ
ಕವಿತೆಯೊಂದು ಕಣ
ದೊಂದಿಗೊಂದು ಕ್ಷಣ ಅನುಸಂಧಾನ
ಆತ್ಮಾನುಸಂಧಾನ ಜೀವನಾನುಸಂಧಾನ
ಸಂಭವವಾನುಭವಿಸು ಬರಿ
ಹೋಗೆನ್ನದಿರಲೋ ರಂಗ...
      .

---ಅಂದತ್ತ...

ಅರ್ಥಕ್ಕೊಗ್ಗದ ಪದಗಳ ಮಗ್ಗಲು ಮುರಿ
ಬಗ್ಗಿಸಿ ಬಳುಕಿಸಿ ಮಲಗಿಸಿಯೂ
ದಕ್ಕದ್ದು ಕಾವ್ಯವೆಂದತ್ತ ಹೊರಟ
ದಿಕ್ಕೂ ದಕ್ಕದಾ ಮೇಲದು
ದತ್ತವಾಗಿರಬೇಕಂದಲ್ಲವೇ
ಎಂದದ್ದು ಎಂದರೆ ಅಲ್ಲದ್ದು
ಅಲ್ಲದ್ದೂ ಎಂದರೆ ಅಲ್ಲದು
ಎಲ್ಲದು ಎಲ್ಲದು ಎಂದೆಂದು
ನಾ ಕೇಳಿ ನಾನಾ ನನನ
ನನನನ ನುಡಿದಂದತ್ತನಾದ
ಬರಿಶಬ್ಧವಲ್ಲೆಂದು ಹಿಂದತ್ತ
ಬೆಡಗೀಲೆ ಬಂದಿತ್ತ ಬೆರಗು!


-| ೩೦-೦೧-೧೨ | ೦೫:೦೫ | ಪ್ರಾತ: |-

ಸಖಿಹೀನ

ಇತಿ ಶ್ವೇತಪತ್ರ, ಇತ್ಯನರ್ಥ
ಸಖಿ, ಶ್ವೇತ, ಈತನಪಾತ್ರ 
ಸಸ್ನೇಹಕೂ ಸಹ
ಜೀವನಕು...

ಸಂಬಂಧ-ವಿಬಂಧಗಳೀಗೀಗ
ಎನಗರ್ಥ ಸಖಿ
ಹೀನವಾಗಿಹವು ಬಂಧ..,
ಮಗದೊಮ್ಮೆ ಎನಗರ್ಥ ಸಖಿ
ರಾಹಿತ್ಯದಿ ಅಂತಿಮಾರ್ಥ!

ಹಿಂದಿನದುಕೆನ್ನ ಬೆನ್ನಾ
ವರ್ತನಾ ದೋಷ ಕಾರಣ ಏನೋ
ತಪ್ಪ ಸರಿಪಡಿಸಲಿನ್ನೊಮ್ಮೆ
ಸಖಿ ತಪ್ಪಲೇನು..?

ಉತ್ತರದಾಯಿತ್ವವೆಲ್ಲಿ
ಬಿತ್ತರಾಗಸದಲ್ಲಿ ಬರಿ ಈ
ಪರಿ+ಪ್ರಶ್ನಗಳಾ ಸಖಿ
ಉತ್ತರೋತ್ತರದಲ್ಲಿ...

ಬೆಳ್ಳಿಯಂಚಿನ ಸಂಜೆ
ಗೆಂದಾಗಸಕೆಂದು ಸಖಿ
ರಸವೆಲ್ಲಿಂದ ಸ್ಪುರಿಯಿಸಲಿ
ಬಾಳ+ಆ+ಕಸದಲ್ಲಿ..


ಮಿಥ್ಯಾಸ್ವಯಂಭುಸೃಷ್ಟಿ

ಸತ್ಯಾ - ಮಿಥ್ಯ,
ಸಂಭವಾಸಂಭವ,
ಸಹಜಾ - ಕೃತಕ,
ಕುಣಿದಾವ ಥಕಥಕ..

ಸತ್ಯ ಅಜ,
ಸತ್ಯಜ ಸಹಜ,
ಅಸಹಜ ಕೃತಕ,
ಸತ್ಯಾ ನಜ ಕೃತಕ.

ಅಸತ್ಯ ನಿತ್ಯದಿ
ಕೃತಕಾಸಹಜ;
ಅಸಹಜಾಸತ್ಯದಿ
ಮಿಥ್ಯಾತಥ್ಯ.

ಮಸ್ತಿಷ್ಕ ಸತ್ಯ,
ಮನ ಮಿಥ್ಯ?
ಹೃದಯ ಸಹಜ,
ಮಿಡಿತ ಕೃತಕ?

ಬಿತ್ತದ್ದು ಕೃತಕ?
ಹುಟ್ಟಿದ್ದು ಸಹಜ,
ಸತ್ತಿದ್ದೂ ಸಹಜ..,
ಅತ್ತಿದ್ದು...?
ಮರುಸೃಷ್ಟಿ?

ಯದ್ಭಾವಂ...

ನನಗಿನ್ನು?
ನೆನಪು
ನೀನು
ಕೇಳಿದ್ದು
ಮತ್ತೆ
ಕೇಳದ್ದು
ಎನ್ನ
ಕೇಳಲಾಗದ್ದು
ಇನ್ನು
ನೆನಪು
ದುರದೃಷ್ಟ
ಮರೆವಲ್ಲ
ನಿನಗೆ
ಗೊತ್ತು, ನನಗ್ಗೊತ್ತು...

ನನಗಿನ್ನೂ!