ಪದ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪದ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 26, 2026

Hawa Hawa | ಚಕ್ಕರ್ದಂತೆ ಪಾದ | RockStar | Irshad Kamil

ಗೀತೆ:        ಹವ ಹವ
ಗೀತಕಾರ:  ಇರ್ಷಾದ್ ಕಮೀಲ್
ಸಂಗೀತ:   ಎ ಆರ್ ರಹಮಾನ್
ಚಿತ್ರ:         ರಾಕ್‍ಸ್ಟಾರ್ (೨೦೧೧)
ನಿರ್ದೇಶಕ: ಇಂತಿಯಾಜ್ ಅಲಿ

ಅಣುವಾದನ: ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು


---------------------------------------------------------------------------------------
ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ 
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=================================================
 

==============================================

This song is said to be a narration of a version of a popular European folktale: 
https://www.humanpotential.school/class/princess-with-twelve-pairs-of-golden-shoes

... of  which there actually are many versions and variations:
https://en.wikipedia.org/wiki/The_Twelve_Dancing_Princesses

 It also mirrors the Rockstar's heroine's story to some extent...

==============================================
 

ಚಕ್ಕರ್ದಂತೆ ಪಾದ ರೊಂಯ್ಯ ರೊಂಯ್ಯ ಅಯ್ಯಯ್ಯೊ
ಆಗಸ ತಲಿಸುತ್ತ ಸುತ್ತಿತಯ್ಯೊ 
ಮತ್ತ ನಾವು ಕೇಳಿದ್ವಯ್ಯಯ್ಯಯ್ಯಯ್ಯೋ
ರಾಣಿ ತಿರುಗ್ತಾಳ ಬೆಳ್ಳ ಕಾಲ ಬೆಳ್ಳಗ ಹೊಳ್ಳಿಸಿ

ಚಕಚಕಚಕ ಚಮಕೀ ಚುಕ್ಕಿ
ರಾಣೀ ಮತ್ತ ಕಾಲೀಗೆ ಬುದ್ದಿ
ಹೋದವ್ಳು ಸವೆಸ್ಯಾಳ ಹೊಳ್ಳಿ
ಒಂದ ರಾತ್ರಿ ಹನ್ನೆರಡೊ ಚಪ್ಲಿ 

ರಾಜನಿಗೋ ಸ್ಥಿಮಿತ ತಪ್ಪಿ
ಕರೆಸಿದನೊ ಖಬರಿಯಪ್ಪಿ
ಇದೇನ್ ಮಷ್ಕಿರಿಯಪ್ಪಪ್ಪೋ ಹ್ಹೋ..
ಹೋಕ್ಕಾಳೆಲ್ಲಿಗಾ ನೋ..ಡೋ..

ಕದ್ ಬೆನ್ ಬಿದ್ನೋ.. ಅಂವ
ರಾತ್ರಿ ರಾಣೀಯೊ ಭಗದೊಳಗ
ಧಗಧಗನಾ ನಡಿಯೂದ ಕಂಡಾ (ಹ್ಹೋ)

ಹವಾ ಹವಾ ಹವಾ ಹವಾ
ಹವಾ ಹವಾ ಹವಾ ಹವಾ
(ಓಹ್ ಹ್ಹೋ)

ಬೆಂಕೀದೇನ್ ಜ್ವಾಲೆ  (ಓಹ್ ಹ್ಹೋ)
ರಾಣಿದೇನ್ ಜಾಲವೆ (ಓಹ್ ಹ್ಹೋ)
ಕುಣಿಯೋದು ಥಕ ಥಕ (ಓಹ್ ಹ್ಹೋ)
ನಾಗರ ನಶೆ ಪಕ್ಕಾ (ಓಹ್ ಹ್ಹೋ)

ಖಬರೀ ಗಾಬರಿಬಿದ್ದ  (ಓಹ್ ಹ್ಹೋ)
ಹೊಳ್ಳಿಸಿದ ಪಾದ! (ಓಹ್ ಹ್ಹೋ)
ಎದ್ದೂ ಬಿದ್ದೂ ಬಡಬಡಿಸಿದನವ 
ಅವ್ವ ಅವ್ವ
ಹವಾ ಹವಾ! ರಾಣಿ ಹವಾ!!
ಹವಾ ಹವಾ, ಹವಾ!!!

ಕುಣಿಸ್ಯಾಳ ಆ ಪಾದಾನಾ 
ಬಿಡು ಸಿಪಾಹಿಗಳೇನ ತಾನ  
ಓಹೋ ಬಜಾನ ಗಾನ 
ಕಾಣೆ ನಿಲ್ಲಲ್ಲಾ ಪಾದ 
ವಾಹ ಆ ಹಾವ ಭಾವ! 
ವಾಹ ವಾಹ

ಹವಾ ಹವಾ 
ಎಗ್ಗ್ ಸಿಗ್ಗಿಲ್ಲ 
ಹವಾ ಹವಾ 
ನಿಲ್ಲಲ್ಲ ಮತ್ತ 
ಪಾದ ಪಾದ ಪಾದ

ರಾಜ ಉರಿಬಿದ್ದ
ದಿನಾ ರಾತ್ರೀನು
ಜೋಡು ಹನ್ನೆರ್ಡ ಸವೆಸ್ಯಾಳ ರಾಣಿ
ಕತಿ ಆಗೈತಿ ಹಿಂಗೆಲ್ಲಾ

ಹವಾ ಹವಾ 
ಹವಾ ಹವಾ 
ಪಾದ ನಿಲ್ಲೋಲ್ಲ ಯಾರಪ್ಪಣೆಗೂ
ಇವು ತಿರುಗ್ತಾ..ವೆ 
ಕುಣೀತಾ..ವೆ
ಅತ್ತಾಗಿತ್ತಾ ಎತ್ತ ಎತ್ತ ಮಸ್ತೀ ಲೆ


ಪಿತ್ತ ನೆತ್ತಿಗೇರಿ ರಾಜನಂತೂ ಅಂದ
ಓ ರಾಣಿ, ಯಾಕ್ಹಿಂಗ ಮಕ್ಕುಗಿದೀ 
ಮೂಗು ಮುರಿದೀ ಸ್ವಾಟೆ ತಿರುವಿದೀ
ನನ ಮರ್ಯಾದಿ ಬಜ್ಜಿ ಹುರಿದೀ
ಇವತ್ತಿಂದ ಬಂದ್ ನಿಂದೆಲ್ಲ ಓಡಾಟ 

ಅದ ಕೇಳಿ ರಾಣಿ ನಕ್ಕು ಹಿಂಗಂದಳು
ಓ ರಾಜ, ಚಿನ್ನದಾ ಗೋಡೆ ಗೋಳು 
ಎನ್ನನೆಂದು ಖುಷಿಯಾಗಿಡವು
ಬಿಡುಗಡೆಗೆ ನಡೆಸೆನ್ನನು
ಓ ಯನ್ನ ದೇವಾ..
ತೆಕ್ಕೋ ಯಲ್ಲ ದೌಲತ್ತನು 
ಬಿಟ್ಟುಬಿಡೋ ಯನ್ನನು  
   
ಹವ ಹವ
ಹವ ಹವ

ಹಿಂಜರಿದು ಹಿಂದಕ್ಕ ಮುಚ್ಚು ಮರೇಲಿ
ಮಾಡದಿದ್ದೇನದು ಮಂದೀ ಮಂದೇಲೀ
ಮೈಮನ ಮರೆತು ಸ್ವಚ್ಛಂದ ಛಂದದಿ
ಕುಣಿದಾಳವಳು ತನ್ನಯ ಗುಂಗಲ್ಲಿ

ತನ್ನದೇ ರಂಗು ರಂಗ ಭಂಗಿ
ಹಂಗಿಲ್ಲ ಲಜ್ಜಿ ಒಜ್ಜಿ ಹೆಜ್ಜಿ
ಕುಣಿದಾಳು ಥಕ ಥೈ ಥೈ ಗೆಜ್ಜಿ 
ನರ್ತಿಸುತ್ತ ಸುತ್ತಿ ಸುತ್ತಿ ಸುತ್ತಿ
ಹೋದಳು ಸುಳಿಗಾಳಿ ಹಾಂಗ

ಹವಾ ಹವಾ
ಹ್ಹೊ ರಾಣಿ ಹವಾ 
ಪಾದ ನಿಲ್ಲಲ್ಲ ...
ನಿಲ್ಲೊಲ್ಲ ಯಾರಪ್ಪಣೆಗೂ
ಇವು ಸುತ್ತುತಾವೆ
ಕುಣಿಯುತ್ತಾವೆ
ಅಲ್ಲಿ ಇಲ್ಲಿ ಎಲ್ಲಿ ಎಲ್ಲೆಲ್ಲು ಪಾದ
ಚಕಚಕಚಕ ಚಮಕೀ ಚುಕ್ಕಿ
ಚಮಕೀ ಚುಕ್ಕಿ
ಚಮಕೀ ಚುಕ್ಕಿ

ಹವಾ ಹವಾ
ಹವಾ ಹವಾ
ಹವಾ ಹವಾ

=====================================
ಇಲ್ಲಿ ಪ್ರಸ್ತುತಿಯಾಗಿರುವ ಯೂರೋಪಿನ ಹಳೇ ಜನಪದ ಕಥೆ: 
 ಒಂದಾನೊಂದು ದೇಶಕಾಲದಲ್ಲಿ ಓರ್ವ ರಾಜ ಚಿಂತಾಕ್ರಾಂತನಾಗಿದ್ದಾನೆ. ಅವನ ಮಗಳು ಯುವರಾಣಿಯ ಡಜನ್ ಚಿನ್ನದ ಬೂಟುಗಳು ಅದು ಹೇಗೋ ಪ್ರತೀ ರಾತ್ರಿ ಸವೆಯುತ್ತಿವೆ. ಏನು ಮಾಟಮಂತ್ರವೋ ಏನೋ.. ರಾತ್ರಿ ಅವಳು ಡಜನ್ ಬೂಟುಗಳನ್ನು ಕೊಳಾಯಿಸಿ ಹಾಗೆ ಗುಟ್ಟಾಗಿ ಎಲ್ಲಿಗೋ ಹೋಗುತ್ತಿದ್ದಾಳೋ ಏನೋ.. ಯಾರನ್ನೋ ಕೂಡುತ್ತಿದ್ದಾಳೋ ಮತ್ತಿನ್ನೇನೋ.. ಅದೇನು ಕಥೆ ಎಂಬುದನ್ನು ಪತ್ತೆಮಾಡಲು ಅದ್ಯಾಕೋ ಬಂದ ಯಾವ ಜಾಸೂಸಿ-ಖಬರಿಗಳಿಂದಲೂ ಸಾಧ್ಯವಾಗುತ್ತಿಲ್ಲ.... 
ಕೊನೆಗೆ ನಮ್ಮ ಹೀರೋ--ಒಬ್ಬ ಹದಿಹರೆಯದ ಹೊಸ ಸೈನಿಕ--ಎಂಟ್ರಿ ಕೊಡುತ್ತಾನೆ. ಅವನ ಬಳಿ ಯಾವುದೋ ಜಕ್ಕಿಣಿ ಇನ್ನೊಂದಾವುದೋ ಕಥೆಯ ಕೊನೆಗೆ ಮೆಚ್ಚಿ ಹರಸಿ ಕೊಟ್ಟ ಕೆಲವು ಮಾಂತ್ರಿಕ ಕೊಡುಗೆಗಳಿವೆ. ಅದರಲ್ಲಿ ಅವನನ್ನು ಅದೃಶ್ಯ ಮಾಡಬಲ್ಲ ಒಂದು ಮಾಯಾಟೋಪಿಯೂ, ಯಾವುದೇ ಲೋಕದಲ್ಲಿಯೂ ದಾರಿ ತೋರಿಸಬಲ್ಲ ಒಂದು ಮಾಯಾದಂಡವೂ, ಮತ್ತಿನ್ನೇನೇನೋ ಎಲ್ಲ ಇವೆ... 
ಹಾಗೊಂದು ರಾತ್ರಿ ಕಾವಲಿಗಿದ್ದ ಇವನಿಗೆ ಮತ್ತು ಬರಿಸುವ ವೈನ್ ಕೊಟ್ಟು ಅವಳು ಒಂದು ಗುಪ್ತ ಭೂಗತ ಲೋಕಕ್ಕೆ ತೆರಳುತ್ತಾಳೆ. ಅದನ್ನು ಕುಡಿದು ಬಿದ್ದಂತೆ ಹುಸಿ ನಟಿಸಿದ ಅವನು, ಜಾಗರೂಕತೆಯಿಂದ ಅದೃಶ್ಯರೂಪದಲ್ಲಿ ರಾಜಕುಮಾರಿಯನ್ನು ಹಿಂಬಾಲಿಸುತ್ತಾನೆ. ಆ ಹಾದಿಯಲ್ಲಿ ಅವನು ಕ್ರಮವಾಗಿ ಬೆಳ್ಳಿ, ಬಂಗಾರ, ಮತ್ತು ವಜ್ರಗಳ ಮೂರು ಕಾಡುಗಳನ್ನು ನೋಡುತ್ತಾನೆ.. ಹುಶಾರಾಗಿ ಕೆಲವು ಸಾಕ್ಷ್ಯಗಳನ್ನೂ ಸಂಗ್ರಹಿಸುತ್ತಾನೆ. ಆ ಕೊನೆಯಲ್ಲಿ ಅವಳು ತನ್ನ ಹನ್ನೆರಡು ಜೋಡಿ ಬೂಟುಗಳು ನಜ್ಜುಗಜ್ಜಾಗುವವರೆಗೆ ಒಂದು ದಯ್ಯದೊಂದಿಗೆ ಅಗ್ಗಿಷ್ಟಿಕೆಯ ಸುತ್ತ ನರ್ತಿಸುವ ಭಯಂಕರ ದೃಶ್ಯ ನೋಡುತ್ತಾನೆ. ಜಾಗರೂಕತೆಯಿಂದ ಸಾಕ್ಷ್ಯಗಳೊಂದಿಗೆ ಅಲ್ಲಿಂದ ಸುರಕ್ಷಿತವಾಗಿ ಮರಳಿ, ರಾಜನಿಗೆ ಇದನ್ನೆಲ್ಲಾ ವರದಿ ಮಾಡುತ್ತಾನೆ. 
ಶಿಕ್ಷೆಯಾಗಿ ರಾಜನು ಆ ರಾಜಕುಮಾರಿಯನ್ನು ಅರಮನೆಯಲ್ಲೇ ಗೃಹಬಂಧನದಲ್ಲಿರಿಸಲು ಬಯಸುತ್ತಾನೆ. ಆದರೆ ರಾಜಕುಮಾರಿ ರಾಜನಿಗೆ ತಾನು ಅರಮನೆಯನ್ನೇ--ಅಂದರೆ ಸಿಂಹಾಸನದ ಮೇಲಿನ ತನ್ನ ಹಕ್ಕನ್ನೇ ತ್ಯಜಿಸುತ್ತೇನೆ ಎನ್ನುತ್ತಾಳೆ. ಬದಲಿಗೆ ನೃತ್ಯ ಮಾಡುವ ತನ್ನ ಸ್ವಾತಂತ್ರ್ಯವನ್ನ ಬೇಡುತ್ತಾಳೆ. ನೋಡುನೋಡುತ್ತಿದ್ದಂತೆಯೇ ಅವಳು ನರ್ತಿಸುತ್ತ ಹೊಗೆಸುರುಳಿಯಂತೆ ಗಾಳಿಯಲ್ಲಿ ಕರಗಿ ಮಾಯ!


----------------------------------------------------------

ಕೊಸರು:  ನೆನಪುಗಳು ಬಲು ಖತರ್ನಾಕು ಕಣ್ರೀ! ಹಿಂದಿನ ದಶಕದಲ್ಲಿ ನಾವುಗಳೂ ಮತ್ತು ನಮ್ಮ ಶ್ರೀಮಾನ್ ಪುರೋಹಿತರೂ ಒಂದು ಸಮ್ಮೇಳನದ ನೈಮಿತ್ಯದಲ್ಲಿ ಒಟ್ಟೊಟ್ಟಿಗೆ ಪ್ರಾಹದಲ್ಲೆಲ್ಲಾ ನೋಡಾಡಿಕೊಂಡು ಬಂದವರು, ಅದರದೆಲ್ಲಾ ಫೋಟೋ-ವೀಡಿಯೋ ಕೇಳಿದವರಿಗೆ ಮಾತ್ರ ಉಲ್ಟಾ ನಕರಾ ಹೊಡೀತಿದ್ದೆವು. "ಹೋಗಿಬಂದ ನಮ್ಮ ಶಿಫಾರಸಿನ ಮೇರೆಗೇ ಪ್ರಾಹದಲ್ಲಿಯೇ ಈ 'ಕಲ್ಲತಾರೆ'ಯ ಗಾಥೆಗಳ ಚಿತ್ರೀಕರಣವಾಗಿದೆ.. ಈ ಗೀತಗಳನ್ನು ಯೂಟ್ಯೂಬಿನಲಿ ನೋಡಿದರೆ ಸಾಕು! -- ನಮ್ಮನ್ನು ಫೋಟೊ ವೀಡಿಯೋ ಎಂದು ಕೇಳದಿರಿ.." -- ಎಂದು ಒಂದಿಷ್ಟು ಕಾಲ ಪುಂಗಿದ್ದೆವಂತ ನೆನಪು. ಈಗ ನೋಡಿದರೆ, ಅರೆ ಆ ಸಿನಿಮಾ ಬಂದದ್ದು ನಮ್ಮ ಪ್ರಾಹ ಭೇಟಿಗೂ ೩ ವರ್ಷ ಮುಂಚೆಯೇ! ಹಾಡುಗಳು ಬಿಡುಗಡೆಯಾದಾಗಲೇ ಒಂದೇಟಿಗೇ ಅಭಿಮಾನಿಗಳಾಗಿದ್ದು ಸ್ಪಷ್ಟ ನೆನಪು. ಆದರೂ ಹೀಗೇಕೆ ಕರ್ರಪ್ಟಾಗಿದೆಯಲ್ಲ ನಮ್ಮ ಮೆಮೊರಿ ಕಾರ್ಡು...!



ಮಂಗಳವಾರ, ನವೆಂಬರ್ 25, 2025

Pal Pal Dil ke Paas | ಪ್ರತೀ ಕ್ಷಣ ಎದಿ ಸನಿಹಾ | Dharam Tribute

ಕ್ಷಣ ಕ್ಷಣ ಎದಿ ಸನಿಹಾ
ನೀನಿರತೀಯ
ಬದುಕಲ್ಲಿದs ದಾಹ
ಹೀಂಗನತೀಯ


ಪ್ರತಿ ಸಂಜಿ ಕಣ್ ಎದುರು
ನಿನ್ನ ಸೆರಗು ಹಾರತೈತಿ
ಪ್ರತಿ ರಾತ್ರಿ ನೆನಪುಗಳ
ಮೆರವಣಿಗಿ ತರತೈತಿ
ನಾ ಉಸಿರು ತಕ್ಕೋತೀನಿ
ನಿನ ಪರಿಮಳ ಬರತೈತಿ
ಒಂದ ಸುಗಂಧ ತುಂಬಿದಂತ
ಸಿಹಿಗಾಳಿ ತರತೈತಿ
ನನ ಹೃದಯದ ಬಡಿತ ಕೂಡ
ನಿನ ಗೀತಿ ಹಾಡೈತಿ ...

ಪ್ರತೀ ಕ್ಷಣ ಎದಿ ಸನಿಹಾ
ನೀನಿರತೀಯ
ಬದುಕಲ್ಲಿತ್ತು ದಾಹ
ಅಂತನತೀಯ


ನಿನ್ನೆ ನಿನ್ನನ ನೋಡಿದ್ದೆ
ನಾನೆನ್ನಾ ಅಂಗಳದೀ
ಬಂಧಿಸು ಅನುತಿದ್ದೀ
ನೀ ಬಾಹುಬಂಧನದೀ
ಇದು ಎಂಥಾ ಸಂಬಂಧವೊ
ಇವು ಎಂಥ ಕನಸುಗಳೊ
ದೂರವಿದ್ದರು ಕೂಡಾ
ನಮ್ಮವರಾ ಅನಿಸೋದು
ನಾ ಯೋಚಿಸ್ತಾ ಇರತೀನಿ
ನಡು ನಡುಗುತ್ತ ಅನತೇನಿ

ಕ್ಷಣ ಕ್ಷಣ ಎದಿ ಸನಿಹಾ
ನೀನಿರತೀಯ
ಬದುಕಲ್ಲಿದs ದಾಹ
ಹೀಂಗನತೀಯ


ನೀ ಯೋಚಿಸ್ತೀ ಯಾಕ
ನಾನಿಷ್ಟ ಪ್ರೀತಿಸತೀನಿ
ನೀ ತಿಳಿದಿದೀ ನಾ ಹುಚ್ಚ
ಅದ ನಾನೂ ಒಪ್ಪತೀನಿ
ಹುಚ್ಚರ ಈ ಮಾತ
ಹುಚ್ಚರೇ ತಿಳಿತಾರ
ಉರಕೊಳೋದರ ಮಜಾ
ಪರವಶರೇ ತಿಳಿದಾರ
ನೀ ಕಿಚ್ಚ ಹಚ್ಚುತನಾ ಇರು
ಬಂದ ಬಂದ ಎದಿಯಾಗ!

ಭಾನುವಾರ, ಸೆಪ್ಟೆಂಬರ್ 7, 2025

ಹುಳಿಮಾವೃಕ್ಷವಂಶ

ಮರ
ಕೋತಿಯಾಡಿಸೂ
ಮನುಜರೆ
ಈ ಹುಳಿ
ಮರ ಬಲ್ಲಿರೆ


ಹುಳಿಗಿಡದ ತಲೆಕಡಿದು
ಅತಿಶಯದ ಕಸಿಹೊಡೆದು
ನೆಲದಿಂದೇ ತಲಿಸಿಗೂಹಾಂಗ
ಬುಡದಿಂದೇ ಹಲಕವಲೊಡೆಸಿ
ಘಲ್ಲೆನಲು ಸಿಹಿ ಗೆಲ್ಲು-ಗೆಲ್ಲಲು 
ಗೆಲು-ಸೋಲ ಸೊಲ್ಲಿಡಿಸಿ
ಜಗಿದುಗಿಯುತ ಜಿಗಿದಾಡಿದ್ದ
ನೆಲಕೋತೀ ಕೋಟಿ ವಂಶ
ವೃಕ್ಷಸ್ಥರೇ

ಈ ಹುಳಿಮರವೇರ ಬಲ್ಲಿರೆ 


ಮಧುವನದ ಋತವಾತದ 
ಕಟುಮಧುರ ವ್ರತದವರೇ
--ನಿಮ್ಮ ಸತಾಯಿಸಲಲ್ಲ.
*
ಹೂತ ಹುಣಸಿಗೆ ಜೋತ ಹಳೆ ಭೂತ ಬಾವಲಿಗಳೇ
ಎದ್ದು ಬಿದ್ದು ಬರಬೇಡಿ ಹಳಿ ತಪ್ಪಿಸಿ
--ನಿಮ್ಮ ನೆನಸಿದ್ದಲ್ಲ..
*
ಹಾದಿಬದಿ ಹಾರದಿರಿ 
ಆ ದರದ ಹುಳಿನರಿಗಳೆ,
--ನಿಮಗೆ ನಿಲುಕುವುದಿಲ್ಲ
*
ಕರಿಮಾದಲ ಕೇರಂಬೊಲ 
ಆಡುಂಬೊಲದವರೇ
--ಬಿಡಿ ನಿಮಗರ್ಥವಾಗೊಲ್ಲ.
*
ಸಿಹಿಹಣ್ಣಿಗಾಸೆಗಣ್ಣ ಹಣ ಕಂಡವರೇ 
ಕಾಯ ಹುಳಿ ವಾಟೆ ಹುಳುಕು 
--ನೀವು ಕಾಣಿರೆ.

ಈ ಹುಳಿಮರದೆತ್ತರ ಬಲ್ಲಿರೆ 



ಬೊಡ್ಡು ಮರ ಮುಟ್ಟು ಮುಪ್ಪಾದರೂ 
--ಹುಳಿಗೆ ಉಪ್ಪೇ ಗತಿಯಲ್ಲ.
*
ಸಿಹಿಮೊಗೆಯ ಕಾಯೆಂದರೊ
--ಹಣ್ಣು ಹುಳಿಯೇ ಆಗೋದೆಲ್ಲ!
*
ಹುಳಿಮಾಮರ ಮುಗಿಲೆತ್ತರ

ಮರ
ಕೋತಿ
ಗಲ್ಲ.


==================================================================
ಪ್ರೇರಣೆಗಳು:
೧) https://www.prajavani.net/art-culture/article-features/snake-conservation-center-ratnapuri-karnataka-2-3515668
೦) ಗುರುರಾಜ ಕುಲಕರ್ಣಿಯವರ "#codeಗನ ಸೈನ್ಸ್ ಫ್ರಿಕ್ಷನ್" ನಲ್ಲಿನ 'ಮರಕೋತಿ ಭಾರತಿ' ಕತಿ
-೧) 'ಹುಳಿಮಾವಿನಮರ' ; "..ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ.." ; 'ಮಾಮರವೆಲ್ಲೋ...'

==================================================================

ಶುಕ್ರವಾರ, ಜೂನ್ 13, 2025

Humpty Dumpty in Kannada | ಅಂಡಾಗುಂಡ | AndaaGunda

:Humpty Dumpty Royally Challenged and Bengalured:
| ಅಂಡಾಗುಂಡ |
(All the kings men...)


ಅಂಡಾ ಗುಂಡ ಕಲ್ಲು ಬಂಡೆ ಹಾಂಗಿದ್ದ
ಅಂಡಾ ಗುಂಡ ಅಡ್ಡ ಗೋಡೆ ಹತ್ತಿದ್ದ
ಕಪ್ಪವ ಪಡೆದ ರಾಯಲ ಕಿಂಗ
ಮರೆವಣಿಗೇಲಿ ಬಂದಾರೆಂದು ಹೀಂಗ
ಉಮ್ಮೇದಿಯಲಿ ಕುಣಿಯಲು ಹಂಗಾ
ಬಿದ್ದನೊ ಇವನು ಪುಡಿಪುಡಿ ಹ್ಯಾಂಗ
ಹದಿನೆಂಟು ಪೋಲೀಸರು ಹನ್ನೆರಡು ಡಾಕ್ಟರರು
ಜಪ್ಪಯ್ಯ ಅಂದರೂ ಪುನಃ ಕೂಡಿಸದಾದರು
ಅಂಡಾ ಗುಂಡ ಮುನ್ನಾ ಹ್ಯಾಂಗಿದ್ದನೋ ಹಾಂಗ

-----------------------------------------------------------------
:Humpty Dumpty ಮೂಲ ಆವೃತ್ತಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಬಹುದು:
 https://en.wikipedia.org/wiki/Humpty_Dumpty
-----------------------------------------------------------------

source: https://commons.wikimedia.org/wiki/File:Denslow%27s_Humpty_Dumpty_pg_4.jpg
ನಮ್ಮ ಜಂಬದ ಕೋಳಿ  ಕಾವಿಗೆ ಹೆಮ್ಮೆಯಿಂದ ಉಬ್ಬುತ್ತಿರುವ ನಮ್ಮ ಅಂಡಾಗುಂಡ
(ಚಿತ್ರಮೂಲ: wikimedia commons )
-----------------------------------------------------------------


-:ಸಂಕ್ಷಿಪ್ತ ಆವೃತ್ತಿ:-


ಅಂಡಾ ಗುಂಡ ತಡೆ ಗೋಡೆ ಹತ್ತಿ ಕೂಂತ
ಅಂಡಾ ಗುಂಡ ಹೋತ್ಗಂಡು ಬಿದ್ದ
ಹನ್ನೆರಡು ಪೋಲೀಸರು ಹದಿನೆಂಟು ಡಾಕ್ಟರರು  
ಪುನಾಃ ಇವನ ಒಟ್ಟ ಕೂಡ್ರಿಸದಾದರು
ಮುನ್ನಾ ಗುಂಡಗೆ ಹೆಂಗಿದ್ದನೋ ಹಾಂಗ

------------------------------------------------------------


source: https://commons.wikimedia.org/wiki/File:Humpty_Dumpty_cup_Chodzie%C5%BC.jpg
"अब की बार it's my cup of  royal tea!"
"ಎಲ್ಲೆಲ್ಲೂ ನನ್ನ ಚಾಯ್ ಕಪ್'ಪೇ ಚರ್ಚಾ!!"
"ಮುಗಿಲುಗಪ್ಪಾದರೂ ವ್ಯವಸ್ಥೆ ತಪ್ಪಾದರೂ 
ಆಡಳಿತ ಕೆಪ್ಪಾದರೂ ಜನತೆ ಬೆಪ್ಪಾದರೂ
ಕಪ್ಪು ಕಪ್ಪೇ!!!"
..ಎಂದು ಮಕಾಡೆ ಬಿದ್ದರೂ ಗಡ್ಡ ಮಣ್ಣಾಗಲಿಲ್ಲ
 ಎಂಬಂತೆ ಬೀಗುತ್ತಿರುವ ಅಂಡಾಗುಂಡ
(ಚಿತ್ರಮೂಲ: wikimedia commons )
======================================

ಸೋಮವಾರ, ಮೇ 3, 2021

ಬಳಿಬಂದರಾರೋ ಬೆಳ್ಳಂಬೆಳಗ್ಗೆ | Jagjith Singh / Saeed Rahi | koi paas aaya sawEre sawEre



---------------------------------------------------------

ಗೀತ ರಚನಾಕಾರ:  ಸಯೀದ್ ರಾಹಿ
ಮೂಲ ಸಂಯೋಜಕ /ಗಾಯಕ: ಜಗಜಿತ್ ಸಿಂಗ್
(Come Alive LP  / ೧೯೭೯)

ರಾಗ: ಲಲಿತ / ಲಲತ್ / ಲಲಾಟ
ತಾಳ :  ೫ ಮಾತ್ರೆಗಳ ಜಾಝ್ ತಾಳ / ಸೂಲಫಾಕ ತಾಳ
/ ೫x೨=೧೦ ಮಾತ್ರೆಗಳ ಮಾರ್ಪು-ಝಾಪ್ ತಾಳ


(ನೋಡಿ:  A 'wild' improvisation:
https://www.youtube.com/watch?v=ariXkdS7heY
ಪಂ . ಝಾಕಿರ್ ಹುಸೇನ್ - ಹರಿಪ್ರಸಾದ್ ಚೌರಾಸಿಯಾ ಅವರೊಂದಿಗಿನ ಕಚೇರಿ :
https://www.youtube.com/watch?v=TxF8qAFUrTQ )

-------------------------------------------------------

 

ಬಳಿ ಬಂದರಾರೋ

ಬೆಳ್ಳಂಬೆಳಗ್ಗೆ

ಯನ್ನ ಮೈದಡವಿದರು

ಬೆಳ್ಳಂಬೆಳಗ್ಗೆ


ಎನ್ನದೇ ಕಥೆಯ

ತುಸುವೇ ತಿರುಗಿಸಿ

ಯನಗೇ ಅರುಹಿದರು

ಬೆಳಗ್ಗೆ ಬೆಳಗ್ಗೆ


ನಿನ್ನೆಯಿರುಳಲಂತಿದ್ದಿದು 

ಸಂಭಾಳಿಸು ಸಂಭಾಳಿಸು

ಅಲ್ಲೇ ತಡಂಬಡಿಸಿದ್ದು

ಬೆಳಗ್ಗೆ ಬೆಳಗ್ಗೆ


ಕಳೆದಿತೆನ್ನ ರಾತ್ರಿ 

ಪೂರ ಪಾನಗೃಹದಿ

ದೈವ ನೆನಪಾಯಿತು

ಬೆಳಗ್ಗೆ ಬೆಳಗ್ಗೆ


ಇರುಳಿಡೀ ಬೆಳಗಿತ್ತು

ಯಾವೊಂದು ಬತ್ತಿ

ಅದನೇ ಸುಟ್ಟೆವು    

ಬೆಳಗ್ಗೆ ಬೆಳಗ್ಗೆ. 

 


 

 

koī paas aayā savere savere

mujhe āzmāyā savere savere


merī dāstāñ ko zarā sā badal kar

mujhe hī sunāyā savere savere


jo kahtā thā kal shab sambhalnā sambhalnā

vahī laḌkhaḌāyā savere savere


kaTī raat saarī merī mai-kade meñ

ḳhudā yaad aayā savere savere


jaleethī shamā raaT bhar jis ke khāTir

ushee ko jalāya savere savere

ಇರುಳಿಡೀ ಬೆಳಗಿತ್ತು ಯಾವೊಂದು ಜ್ಯೋತಿ 

ಬೂದಿಯಾಯಿತದುವೆ ಬೆಳ್ಳಂಬೆಳಗೆ 

ಭಾನುವಾರ, ಫೆಬ್ರವರಿ 25, 2018

ದೂರ ಮೀರು; ದಾಹ ತೀರು

ದೇಹದೂರ ಮನಸುಭಾರ
ಋಣವು ತೀರಿ ಹೋಯಿತೇ
ಒಲುಮೆ ತೆರೆಯು ಇಳಿಯಿತೇ

ದಿನದಿ ನೆನಪು ರಾತ್ರಿ ಕನಸು
ನಿನದೆ ಸುತ್ತ ಹರಿದಿದೆ
ಮನದ ಪರದೆ ಹರಿದಿದೆ

ಪಾರತೊರೆವ ತೊರೆಯ ತೀರ
ತೆರೆತೆರೆಯೂ ಚೀರಿದೆ
ದಾಹ ತೀರದಾಗಿದೆ

ತೆವಳು-ಬುದ್ಧಿ ತೆವಲು-ತೀವ್ರ
ಇಹಪರಗಳ ಮೀರಿದೆ
ಹೃದಯ ಕಿವಿಗೆ ಬಡಿಯದೇ

ಫಳಫಳ ನಿನ್ನೆದೆಹೊಳೆಯಲಿ ನಾ
ನೊಳಸುಳಿಯಲೀ ಸಿಲುಕಿಹೆ
ಸೆಳಕೊಳ್ಳಬಾರದೇ
                    ಎನ್ನ ನೀ
                          ನೆಳಕೊಳ್ಳಬಾರದೇ


                                                         ~~ಪೃಥ್ವಿರಂ

==========================
ದಶಕವೊಂದರಷ್ಟು ಹಿಂದೆ 
ಗೆಳೆಯರೊಬ್ಬರ ಹನಿಗವಿತೆಯೊಂದರ ಮೇಲೆ
ಇಂಪ್ರೋವೈಸಿದ್ದು.  ಅವರು ಬರೆದ್ಮುಗಿಸಿದ ಮೊದಲ ಸಾಲುಗಳಲ್ಲೇ ತೆರೆ ಬಿದ್ದಿದ್ದರೂ ನಂಥರ
ತೆರೆದ ಸಾಲುಗಳು ಏನೋ ತದ್ವಿರುದ್ದವಾಗಿ ಬಿದ್ದ ಹೆದ್ದರೆಯನ್ನು ಮತ್ತೆಬ್ಬಿಸುವಂತೆ ಕಾಣುತ್ತಿದೆ
-ಯೆಂದರೆ, ಅದೂ ಸರಿಯೇ 
ಅಲ್ಲವೇ..!  
ಇದೆಲ್ಲ ಡಿಸ್ಸೊನೆನ್ಸು ಇಂಕೋಹರೆನ್ಸುಗಳನ್ನು ಇ
-ಸ್ತ್ರೀ ಹೊಡೆಯ
ಲೆತ್ನಿಸುವವರಿದ್ದರವರಿಗೆಂದಿನಂತೆ ಈ ಬ್ಲಾಗಿಲಿನಗಸಿಯ 
                                                                      ಸರ್ಜನೀಯ-ಸಾಮಾನ್ಯ
                                                                          -ಸ್ವಾಗತವು  ಅಂಡರ್ಸ್ಟುಡ್ಗತವು!

ಬುಧವಾರ, ಫೆಬ್ರವರಿ 23, 2011

ಮಳೆ ಮಳೆ ಮಳೆ ಮಳೆ...

ಮಾರುತ ಪೀಡಿತ
ಸಾಗರನೊಡಲು
ಕದಡಲು ಮೂಡಿತು
ಮೋಡದ ಕಡಲು


ನೀರವ ತಾಳದೆ
ನಿರ್ವಾತದೀss
ನೀರಂವss ತಾ
ತಂದ! ನೀರ ವಾತ.
 
ವರ್ಷಳ ಬಗೆಯಲಿ
ರವಿ ಎದೆ ಬಗೆದ
ಬಗೆ ಬಗೆ ಬಣ್ಣದಿ
ಬಗೆದುದ ಒಗೆದ.
 
ಬಾನಲಿ ಭಾನು
ತೋರಿದ ತೂರಿದ
ತೀಡಿದ ತಿದ್ದಿದ
ಕಾಮದ ಬಿಲ್ಲ!


ಹನಿಹನಿ ಇನಿಯಲಿ
ಇನಿಯನ ಇಂಚರ
ಮಿಲನದ ಮುಂಚಿನ
ಕಾತರ ದಾತುರ


ಗಿರಿ-ವನ-ಗಹ್ವರ
ಮೇಘಳ ಮರ್ಮರ
ಅವಳೆದೆ ಗುಡಗುಡಿ
ಗುಡುಗುಡುಗುಡುಗುಡು..
 
ವಾತನ ಬಡಿತ
ಗಿರಿಗಳ ತಡೆತ
ತಪ್ಪಿತೋ ಹಿಡಿತ!
ಮೇಘಳ ತುಡಿತ
 
ಒಡನೆಯೆ ಒಡೆಯಲು
ಮೋಡದ ಮಾಡು
ಸಿಡಿ ಸಿಡಿ ಸಿಡಿಲು
ಸಿಡಿಲೋ ಸಿಡಿಲು
ಮಳೆ ಮಳೆ ಮಳೆ ಮಳೆ...


ಅಂಜಿಕೆಯಂಚು
ಮೀರಲು ಮಿಂಚು
ವರ್ಷಳ ಸ್ಪರ್ಶ
ವರ್ಷದ ಹರ್ಷ.