ಲೇಬಲಿಲ್ಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಬಲಿಲ್ಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 7, 2025

ಹುಳಿಮಾವೃಕ್ಷವಂಶ

ಮರ
ಕೋತಿಯಾಡಿಸೂ
ಮನುಜರೆ
ಈ ಹುಳಿ
ಮರ ಬಲ್ಲಿರೆ


ಹುಳಿಗಿಡದ ತಲೆಕಡಿದು
ಅತಿಶಯದ ಕಸಿಹೊಡೆದು
ನೆಲದಿಂದೇ ತಲಿಸಿಗೂಹಾಂಗ
ಬುಡದಿಂದೇ ಹಲಕವಲೊಡೆಸಿ
ಘಲ್ಲೆನಲು ಸಿಹಿ ಗೆಲ್ಲು-ಗೆಲ್ಲಲು 
ಗೆಲು-ಸೋಲ ಸೊಲ್ಲಿಡಿಸಿ
ಜಗಿದುಗಿಯುತ ಜಿಗಿದಾಡಿದ್ದ
ನೆಲಕೋತೀ ಕೋಟಿ ವಂಶ
ವೃಕ್ಷಸ್ಥರೇ

ಈ ಹುಳಿಮರವೇರ ಬಲ್ಲಿರೆ 


ಹೂತ ಹುಣಸಿಗೆ ಜೋತ ಹಳೆ ಭೂತ ಬಾವಲಿಗಳೇ
ಎದ್ದು ಬಿದ್ದು ಬರಬೇಡಿ ಹಳಿ ತಪ್ಪಿಸಿ
--ನಿಮ್ಮ ನೆನಸಿದ್ದಲ್ಲ..
*
ಹಾದಿಬದಿ ಹಾರದಿರಿ 
ಆ ದರದ ಹುಳಿನರಿಗಳೆ,
--ನಿಮಗೆ ನಿಲುಕುವುದಿಲ್ಲ
*
ಕರಿಮಾದಲ ಕೇರಂಬೊಲ 
ಆಡುಂಬೊಲದವರೇ
--ಬಿಡಿ ನಿಮಗರ್ಥವಾಗೊಲ್ಲ.
*
ಸಿಹಿಹಣ್ಣಿಗಾಸೆಗಣ್ಣ ಹಣ ಕಂಡವರೇ 
ಕಾಯ ಹುಳಿ ವಾಟೆ ಹುಳುಕು 
--ನೀವು ಕಾಣಿರೆ.

ಈ ಹುಳಿಮರದೆತ್ತರ ಬಲ್ಲಿರೆ 


ಮಧುವನದ ಋತವಾತದ 
ಕಟುಮಧುರ ವ್ರತದವರೇ
--ನಿಮ್ಮ ಸತಾಯಿಸಲಲ್ಲ.
*
ಬೊಡ್ಡು ಮರ ಮುಟ್ಟು ಮುಪ್ಪಾದರೂ 
--ಹುಳಿಗೆ ಉಪ್ಪೇ ಗತಿಯಲ್ಲ.
*
ಸಿಹಿಮೊಗೆಯ ಕಾಯೆಂದರೊ
--ಹಣ್ಣು ಹುಳಿಯೇ ಆಗೋದೆಲ್ಲ!
*
ಹುಳಿಮಾಮರ ಮುಗಿಲೆತ್ತರ

ಮರ
ಕೋತಿ
ಗಲ್ಲ.


==================================================================
ಪ್ರೇರಣೆಗಳು:
೧) https://www.prajavani.net/art-culture/article-features/snake-conservation-center-ratnapuri-karnataka-2-3515668
೦) ಗುರುರಾಜ ಕುಲಕರ್ಣೆಯವರ "#codeಗನ ಸೈನ್ಸ್ ಫ್ರಿಕ್ಷನ್" ನಲ್ಲಿನ 'ಮರಕೋತಿ ಭಾರತಿ' ಕತಿ
-೧) 'ಹುಳಿಮಾವಿನಮರ' ; "..ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ.." ; 'ಮಾಮರವೆಲ್ಲೋ...'

==================================================================

ಶನಿವಾರ, ಜುಲೈ 8, 2023

ಕಿಮಾಶ್ಚರ್ಯಂ

ಜನಮೇಜಯನನಾದಿ ಕೇಳ್ಮೆಗೂ  
ಅಶ್ವಾತ್ಥಾಮನನಂತ ಬಾಳ್ಮೆಗೂ
ಇಷ್ಟೆಲ್ಲಾ ಮಾಬಾರ್ತ ನೋಡಿಯೂ
ನಮ್ಮ ಮುಂದಿರೋ ಪ್ರಶ್ನೆಯು
ಏನಚ್ಚರಿಯು?!

ಎಂಬುದಾದಂತೆ
ಉತ್ತರಿಸಲು ಪ್ರಯತ್ನಿಸುವ-
ರ ತಲೆಯೂ ಛಪ್ಪನ್ನೈವತ್ತಾರು
ಚೂರಾದಂತೇ
ಯನ್ನಲಿಕ್ಕೆ ಯಕ್ಷ ಬೇರೇನು
ಬೇತಾಳ ಬೇಕೇನು
ಉತ್ತರದಾಯಿತ್ವವಿಲ್ಲದೋನು
ಮೋಜುಗಾರ ಮಾಯಾಕಾರ ಪ್ರಶ್ನೆಕೋರನು

ಅರ್ಥಹೀನತೆಯ ವಕ್ಕಲು ಪುತ್ರಾಧಿಕರು
ಬಯಲುಬತ್ತಲಲಿ ಮತ್ತೆ ಬಣ್ಣ ತೊಡೆತೊಡಗುವರು  
ಏನಚ್ಚರಿಯು ತೋರಿಕೆಗಾದರೂ ಕೆಲಸಮಾಡೋದು
ಮತ್ತದೇ ಆರೋಪಿತ ಧರ್ಮಪ್ರಜ್ಞೆಯು




========================================
mob + ಆರ್ತ  = ಮಾಬಾರ್ತ




ಭಾನುವಾರ, ಏಪ್ರಿಲ್ 26, 2020

ಕಥಾಶಿರಸ್ಸು


ಐಎಮ್ಮು ಈ ಕಥಾರಸಿಸ್ಸು
ಏವಠಾರ ಸ್ಟೇಟ್ಸು
ಹೊಂದಿ ಹೊಂದಿ ಚಟಕ್ಲೀಷೆಯಾಗಿ
ರಸ್ತೆಮಗ್ಗುಲಗುಂಟ ನಡೆದದ್ದು
ವಾಸ್ತವ್ಯಕ್ಕೆ ಪರ್ಪೆಂಡಿಕ್ಯುಲರಾಗಿ
ಪ್ರೊಕ್ರಾಸ್ಟಿಸುತ್ತ ಸತ್ತು  
ಬಿದ್ದಗತಾ
ಶಿರಸ್ಸು
.




----------------------------------
*ತಿರುಮಲೇಶತ್ರಿಬ್ಯೂಟು   
*Avatar-tLAb ರೆಫರೆನ್ಸು

ಮಂಗಳವಾರ, ಮಾರ್ಚ್ 19, 2019

ಮಿಸ್ತ್ರಾಲ ಮಿಸ್ಕ್ಯಾರಿಯೇಜು | ಸಂಕ್ಷಿಪ್ತಾವೃತ್ತಿ

-:ಮಿಸ್ತ್ರಾಲ ಹವೆಯ ಮಿಸ್ಕ್ಯಾರಿಯೇಜು:-
                   (ಸಂಕ್ಷಿಪ್ತ ಆವೃತ್ತಿ)
(ಹಿಪ್/ಹಾಪ್/ರ್ಯಾಪ್ ಅನುಸರಣದೊಂದೆಸೆತ ಬೇರೆಡೆಯಿದೆ ) 
=========================


ತಂಗಾಳಿ ಬಿರುಗಾಳಿಯಂತೆ ಬೀಸುತ್ತ ಹವೆ
ಬಲು ಮೂಡಿ; ಜನಮನ
ಸಿಗದೇ ಹೋಪ ಹಿರಿದ್ವೀಪ
ಕಿರಿಪಾದ
ಮಾನಸರಾತೋ ಹೊರಗೆ ಸುತ್ತಲೋ
ಮೋಡಗಳು ಕವಿಯುತ್ತವೆ ದೂರದಲ್ಲಿ ಮತ್ತೆ
ಒಳಗೆ ಸುತ್ತಲು
ಕತ್ತಲಲ್ಲಿ ಕಣ್ಣಿಟ್ಟವರಿಗೆ ಹಠಾತ್ತನೆ ಮೂಡಬಲ್ಲ
ನೂರು ತಾರೆಯೂ ಮುಚ್ಚುವಂತ ಮಾಡಿನಾ
ಪಯೋದಗರ್ಭದೊಳದೇನೋ ಮಾಟ
ಅಂತರಪಿಶಾಚಿ ಗುಡುಗಾಟ ಮಿಂಚಿನಕಾಟ
ವಾದರೂ ಇಲ್ಲಿ ಸುರಿಯುವುದಿಲ್ಲ;
ಮಬ್ಬು ಮಬ್ಬಾದ ಸಂಕಲ್ಪನೆಗಳೂ
ಕಪ್ಪಿಟ್ಟರೂ ಬಿಲ್ಲ ಮೂಡಿಸಿದರೂ
ಸ್ಪುರಿಸುವುದಿಲ್ಲ.
ಇಲ್ಲಿ ಒಗ್ಗೂಡಿಸಲ್ಪಟ್ಟ ತೇವ
ಇಲ್ಲೇ ಮಳೆಯಾಗಬೇಕು;
ಗಾಳಿ ಹಾವಳಿ ಬಿಡುವುದಿಲ್ಲ.
ಇಲ್ಲಿ ತಳೆದ ಬಸಿರು
ಯಾವ ಬಿರುಸಿರಿಗೋ
ಇನ್ನೆಲ್ಲೋ ಸಂ ಹೌ
ಹಾರಿದಂತಿದೆಯಲ್ಲ.
ಇಲ್ಲೇ ಮಳೆಯಾಗಿದ್ದಿರಬಹುದಾದರೂ
ನಮ್ಮ ಟೈಮಿಗಿಲ್ಲ.

ಗುರುವಾರ, ಜುಲೈ 16, 2015

ತಾರ್ಕಿಕಾಂತ

ಒಬ್ಬ
ತಾರ್ಕಿಕ
ಅಂತ್ಯಕ್ಕೆ
ಹಲಬುವ

ದಿಸ್ ವೇ ಅಥವಾ ದಟ್
ವೇ ಆಗಬೇಕು
ಅಂತ
ಕೂತು
ಬಿಡುವವ
ಹತ್ತು ಸಂಭಾವ್ಯತೆಗಳ
ಪಟ್ಟಿ ಮಾಡೋಕ್
ಅಂತ
ಅನೆಕ್ಸ್'ಪೆಕ್ಟೆಡಂತ
ಯಾವ್ದೂ ಆಗಬಾರದಂತ

ಪ್ರಿಪೇರ್ ಫಾರ್ ದ ಬೆಸ್ಟ್ ಅಂತ
ಯಾಕಂತ?
ಬೆಸ್ಟು ಮಿಸ್ಸು
ಮ್ಯಾನೇಜಾಗಿ ವರಸ್ಟಾಗದಿರಲಂತ

ಮತ್ತ ಬೀ ಗ್ರೇಸಿಯ-
ಸಂತ
ದಿಸ್ಸಾಗದ ದಟ್ವರಸ್ಟಿಗೆ
ಪ್ರಿಪರೇಶನ್ನು ಅಷ್ಟೇ
ಆಗೋದಾಂತ
...

ಹಾಗೆ ಹ್ಯಾಗೂ ಬಂದವರಸ್ಟ
ಸಂಭಾಳಿಕೆ ಕಷ್ಟಸಾಧ್ಯವಾಗಿಬಿಟ್ಟ-
ದಾಂತ

ನೀ-
ರಸದಿ
ರೆಸ್ಟಿಲ್ಲವಾದ ರೋಮರ್ಹೋಮರನೇ

ಪ್ರಿಯ ತಾರ್ಕಿ
ಕಾಂತನೇ
ಸ್ಕೀಮರನೇ

ಮಾತಲ್ಲಿ ನಂಬಿಕೆ ಯಾವತ್ತೋ ಕಳ್ದು
ಹೋಗಿ ಕೊಳ್ಳೋಕ್ಕೆ ಈಹೊತ್ತು ಹಾ ಹಾ
ತೊರೆವವನೇ,

ಸರಿಯಾದ್ಮಾತೇ
ಹೇಳ್ಬೇಕಂತ ಎಣಿಸೋದು

ಸಾಧುವೇ?

'ಹಾಸ್ಯಾಸ್ ಪದ' ಅಲ್ವೆ??

ಹತ್ತೆಣ್ಸಿಕೂತಲ್ಲಿ ಹನ್ನೊಂದು
ಆಗೋದೇ

ಮರೀತಿರುವೆ

ವಾಸ್ತವ

ಚಿತ್ರಿಸಿದ್ದರಿಂದ ವಿಚಿತ್ರಾಂ

.

ಸೋಮವಾರ, ಮಾರ್ಚ್ 3, 2014

ओ माझी रे.. / ಅಂಬಿಗನೇ.. / O majhi re..

ಅಂಬಿಗನೇ,
ಎನ್ನಯ ತೀರ
ನದಿಯ ಈ ಧಾರೆಯು

ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಕಾಗದದ ದೋಣಿಗಳಿಗೆ
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..

ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು




ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.."   ಗೀತೆ :

O Maanjhi Re
Apna Kinara
Nadiya Ki Dhara Hai

Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai

Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...

------------------------------------------------------------------------------------------------------------

ಇನ್ನೊಂದು ಪ್ರಯತ್ನ:

ಓ ಅಂಬಿಗನೇ,
ಎನ್ನಯಾ ದಡವು 
ನದಿಯ ಈ ಹರಿವು

ಪಾತ್ರಗಳಲಿ  ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಪತ್ರಗಳಾ ದೋಣಿಗಳಿಗೆ
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..

ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು  ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ 
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ  ಸಿಕ್ಕರೆ
ಅದು, ಎನ್ನಯಾ ಆಸರೆಯು