ಗುಲ್ಜಾರಿಶ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗುಲ್ಜಾರಿಶ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಡಿಸೆಂಬರ್ 7, 2014

ಈ ತಿರುವಿನಿಂದ ಹೊರಡುವವು / Is Mod Se Jaate Hain

ಈ ತಿರುವಿನಿಂದ ಹೊರಡುವುದು 
ತುಸು ಭಾರನಡೆ ರಸ್ತೆಗಳು 
ತುಸು ತೀವ್ರನಡೆ ಹಾದಿಗಳು

ಕಲ್ಲಿನ ಹವೇಲಿಗಳಿಗೆ
ಗಾಜಿನ ಮನೆಗಳಲಿ
ತುಣುಕುಗಳ ಗೂಡಿನವರೆಗೆ
ಈ ತಿರುವಿನಿಂದ ಹೊರಡುವುದು

ಬಿರುಗಾಳಿಯಂತೆದ್ದು ಹಾದಿಯೊಂದು ಹಾಯುವುದು
ನಸುನಾಚಿದಂತ್ಯಾವುದೋ ಪದಗಳಿಂದ ಹೊಮ್ಮುವುದು

ಈ ರೇಶಿಮೆಹಾದಿಗಳಲಿ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು

ದೂರದಿಂದೊಂದು ಸಾರುವುದು
ಬಳಿಸಾರಿಯು ಹೊರಳುವುದು
ಒಬ್ಬಂಟಿಯೊಂದು ಹಾದಿಯು
ನಿಲಲಾರದು ಚಲಿಸಲೂ ಆರದು

ಇದ ಯೋಚಿಸಿ ಕುಳಿತಿರುವೆ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು 

---------------------


ಗುರುವಾರ, ನವೆಂಬರ್ 27, 2014

ಆಹಕ್ಕೆ ಬೇಕು / Ah! does require / आह को चाहिए || ಘಾಲಿಬ್ / Ghalib / ग़ालिब

ಆಹಕ್ಕೆ ಬೇಕು ಒಂದಿಡೀ ಆಯಸ್ಸು ನೆತ್ತಿಗೇರುವವರೆಗೆ
ಯಾರು ಬದುಕಿಯಾರು ನಿನ್ನ ಮುಂಗುರುಳಿನ ಚಿತ್ತವಾಗುವವರೆಗೆ 

ಜಾಲ ಪ್ರತಿಯಲೆಯಲೂ ಇವೆ ಜಾಲಾಡುತ್ತ ಶತದಂತ ಮಕರಗಳು
ನೋಡೋಣವೇ, ಏನೆಲ್ಲವಾಯ್ತು ಹನಿಗಳಿಗೆ ಮುತ್ತಾಗುವವರೆಗೆ

ಅನುರಕ್ತಿ ತಾಳ್ಮೆ-ಬೇಡೋಣವು; ಅಭೀಪ್ಸೆಯೋ ಚಡಪಡಿಸೋಣವು
ಹೃದಯದ್ದೇನು ಬಣ್ಣವನ್ನೋಣವೋ --  ರಕ್ತ-ಹರಿಯೋಣದವರೆಗೆ

ಒಪ್ಪೋಣ, ನೀ ಅಸಡ್ಡೆ ಮಾಡುವುದಿಲ್ಲವಂತ, ಆದರೂ
ಬೂದಿಯಾಗುವೆವು ನಾವಂತೂ, ನಿಮಗೆ ತಿಳಿಯುವವರೆಗೆ

ನಸುಕಿನ ಕಿರಣಗಳಿಂದಲಿದೆ ಮಂಜಿನ ಹನಿಗಳಿಗೆ ಲೀನವಾಗುವಿಕೆಯ ತಾಲೀಮು
ನಾನೂ ಇರುವೆ, ಒಂದು ದಯದೃಷ್ಟಿಯಾಗುವವರೆಗೆ

ಒಂದು ದೃಷ್ಟಿ  ಸಾಲದು ಇಡೀ ಜೀವನಕೆ, ಖಬರಿಲ್ಲದವಳೇ
ಒಟ್ಟಂದದಾ ಶಾಖವಿದೆ  ಕುಣಿಯುವ ಕಿಡಿಯೊಂದಿರುವವರೆಗೆ

ಅಸ್ತಿತ್ವದಾ ದುಃಖದ್ದು, ಅಸಾದ, ಇನ್ಯಾವುದರಿಂದಾದೀತು ಮರಣವಲ್ಲದೇ ಇಲಾಜು
ದೀಪ ಉರಿಯುವುದು ಯಾವತ್ತು ಬಣ್ಣಗಳಲಿ ಬೆಳಕಾಗುವವರೆಗೆ...





ಸೋಮವಾರ, ಮಾರ್ಚ್ 3, 2014

ओ माझी रे.. / ಅಂಬಿಗನೇ.. / O majhi re..

ಅಂಬಿಗನೇ,
ಎನ್ನಯ ತೀರ
ನದಿಯ ಈ ಧಾರೆಯು

ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಕಾಗದದ ದೋಣಿಗಳಿಗೆ
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..

ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು




ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.."   ಗೀತೆ :

O Maanjhi Re
Apna Kinara
Nadiya Ki Dhara Hai

Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai

Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...

------------------------------------------------------------------------------------------------------------

ಇನ್ನೊಂದು ಪ್ರಯತ್ನ:

ಓ ಅಂಬಿಗನೇ,
ಎನ್ನಯಾ ದಡವು 
ನದಿಯ ಈ ಹರಿವು

ಪಾತ್ರಗಳಲಿ  ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಪತ್ರಗಳಾ ದೋಣಿಗಳಿಗೆ
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..

ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು  ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ 
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ  ಸಿಕ್ಕರೆ
ಅದು, ಎನ್ನಯಾ ಆಸರೆಯು


ಶುಕ್ರವಾರ, ಜನವರಿ 31, 2014

ಇಜಾಝತ್ತು

ನನಗೋ
ದಿಗಿಲಿಕ್ಕಿಕೊಳ್ಳುತ್ತೆ
ದಶದಿಕ್ಕುಗಳಿಂದ ಕಾರ್
ಮುಗಿಲು ಢೀ ಹೊಡೆದು
ಮುತ್ತಿಕ್ಕುವಂತೆ ಎದೆ
ಬಿಚ್ಚಿ ಬಿರಿದು
ಕಿಲಕಿಲನೆ ಬಡಿಯುವಾ ಹೃದಯ
ಧಮನಿಗಳಲಿ ಧುಮ್ಮಿಕ್ಕುವ ನವ
ನವೋನ್ಮಾದದುಮ್ಮೇದಿಯ ನೆನೆ
ನೆನೆದಂತೆ ಹೀಗೆ
ನಡೆದು ಬಿಡುವುದೇ ಇದು
ನಡೆಯಬಾರದಿದ್ದಕ್ಕೆ  ತಡೆಯಿಲ್ಲವೇ..

    ***

ಮಾಯೆ!
ಎಂದೊಡನೆ ಕುಪ್ಪಳಿಸಿ
ಕಿರಿಚುತ್ತಾಳೆ ಉನ್ಮತ್ತ
ಕುಣಿಯುತ್ತಾಳೆ ಸ್ವಚ್ಛಂದ
ಬಿಗಿಯಲೆತ್ನಿಸುತ್ತೇನೆ ಹಿಡಿದು
ಸಡಿಲ ಜಾರುವ ಸ್ನಾಯುಗಳ
ದ್ವಂದ್ವಗಳಲಿ ಕಳವಳಿಸಿ
ಹೀಗೆ ಇದರೊಡನೆ ಏಗಿ
ಏಗಿ ನಡೆದಂತೆ ಕಾಲ
ತೇಗಿಯೂ ಬಿಡುವುದಾ ಹೇಗೆ?

    ***

ಈ ವಿಷಯೆ ನಶೆಯೇರಿದ ನಿಶೆ
ತಹತಹಿಸಿ ತಡಕಾಡುತ್ತೇನೆ
ಒಂದು ತೊಟ್ಟು
ಸುಧೆಗೆ,
ಸಿಕ್ಕೀತನ್ನುವದರಲ್ಲಿ ಶೀಶೆ
ಕೈಜಾರಿ ಉರುಳಿಬಿಡುತ್ತೆ
ಹಾ! ಮತ್ತೆ
ಸಿಕ್ಕಿ ಬಂದರೂ ಆಕಸ್ಮಿಕ
ಒಗ್ಗಿ ಬಂದರೂ ಸಹಜ
ಬಗ್ಗಿಸಿಕೊಂಡರೂ ಬೊಗಸೆಗೆ ತುಸು
ತುಸುವಾಗಿ ಸುಧೆ
ಸೋರಿ ಹೋಗುತ್ತೆ, ವಿವಶ,
ಇಜಾಝತ್ತ ಕಸಿಯುತ್ತ...

    ***

ಕಾಲದೊಡನೆ ದಾಪುಗಾ-
ಲೋಟದಿ ಸೋತು ಹೃದಯ
ನಿಂತೂ ಬಿಡುತ್ತೆ,
-ಹಾಗೊಮ್ಮೆ,
ತುಟಿಯಂಚಿನಲ್ಲಿ...

    ...__...