ಇನ್ನೂ ಸಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇನ್ನೂ ಸಶೇಷ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ನವೆಂಬರ್ 20, 2024

ಆವರ್ತ - ೨

ಈ ಭೂಮಿಯಲ್ಲಿ ಏನೆಲ್ಲ ಬೀಜಗಳು ಎಷ್ಟೆಲ್ಲ
ಹಿಂಗಾರು ತುಸು ಸೋಂಕಿದ್ದಷ್ಟರಲ್ಲೇ ಆರಡಿ-
ಯುದ್ದವೆದ್ದು ಮೂರಡಿ ನಿಜಜಾಗದ ಜಗದಗಲ
ಸಸ್ಯಸಂಕುಲ ಜಗಳ ಮೃಗಜಂತುಖಗಗಳ ಗದ್ದಲ ಸಹಜ-
ಜೀವನ ಪೈಪೋಟಿ
ಇನ್ನೂ
ಮೊನ್ನೆಯಾಗಿಲ್ಲ ಹಾಯ್ದು ಹಿಟಾಚಿ ತಗ್ಗುಗಳ
ತುಂಬಿಸಿ ದಿಣ್ಣೆಗಳ ತಾಚಿ ಅತ್ತಿತ್ತ
ಚದುರಿಸಿ ಶತಶತಮಾನಗಳ ದಾರಿ-
ಸುಂಕವಿಲ್ಲವೆಂದು ಗುಡ್ಡಬಿದ್ದ ಸಂಕದಕಲ್ಗಳ / ಒಡೆದರೆ
ಒಂದೀಟು ಚಕಮಕಿಸಬಹುದಾಗಿದ್ದ ಬೆಣಚಿಕಲ್ಗಳ
ಇಟ್ಟಿಗೆ ಸಿಮೆಂಟು ಮರಳು ಗೃಹ-
ಭಗ್ನಾವಶೇಶಗಳ ಸರಿಸಿ ಸಪಾಟಾಗಿಸಿ ಅಷ್ಟಿಷ್ಟು
ಭೂಮಿಕೆ ಶತಕೋಟಿಗೆ ಜಾಹೀರು ಆಖೈರಾ ಗಿರಲಿಕ್ಕಿಲ್ಲ ಇನ್ನೂ
ಉರುಳಿಸಿದ್ದ ಮರಗಿಡಗಂಟಿಗಳ ಕೊರಳುಲಿಯುರುಳು
ಉಸಿರು ಕಪ್ಪಿಸುವ ನಾಟಾಬಡ್ಡಿ ಜಿಗ್ಗುಗಳ ಚಿಟಪಟ ಸುಡುಧಗೆ
ಹೊಗೆ ಆಗ್ಗಾಗ್ಗೆ ಸಿಟಿಜನಜೀವನ
ಹೀಗಿನ್ನೂ

ಭಾನುವಾರ, ಜುಲೈ 16, 2023

ಆನೇ ಸೈಯ! (ಬೈಲಾನೆ ರೂಮರು - ೨)

ಆನೇ ಸೈಯ! 
(ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ -  ೨)
***

an English version of the full poem is here:
el phantom di camera

*****

(ಆನೆ ಭಾಗ ಒಂದನ್ನು ಇಲ್ಲಿ ತಟ್ಟಿ ನೋಡತಕ್ಕದ್ದು!) 


***


ಚಿಕ್ಕಂದಿನಲ್ಲಿ ಆನೆ ಹತ್ತು
ಪೈಸೆ ಬೆಲ್ಲ ಬಾಳೆಗೆ ಬಾಗಿ
-ಲುಗಳ ತಟ್ಟುವುದು
ಇತ್ತಾದರೂ ಆ ಭಾರ
ಸೊಂಡಿಲಿನಾಶೀರ್ವಾದ ತಲೆ
ತಡೆಯದ ದಿಗಿಲು
ಹುಟ್ಟಿಸೋದು ಸಾಕಿ ಪಳಗಿ
-ಸಿದ್ದದಾದರೂ
ದೇವ್ರಾಣಿ! 

***

ಕಪ್ ಕುರುಡರಾನೆ ಕಾಲ
ಮುಟ್ಟಿ ನೋಡುವಲ್ಲಿ 
ಬಿಳಿಯಾನೆ ಹೆಡ್ಡರ್
ಮೈ ದಟ್ಟಿ ನೋಡುವಲ್ಲಿ 
ಪಾರ್ಶ್ವನಾಥರಾಲಯ ಮತ್ತೆಲ್ಲಿ 
ಖೋಟಾನೋಟಗಳ್ 
ಬಟಾ ಬಯಲಲ್ಲಿ 
ಹೇಗ್ಬಿಡಿಸಿದರ್ಹಾಗೆಲ್ಲಲ್ಲಲ್ಲಲ್ಲಿ
ಜಗಬಯಲಾನೇರೂಮರು

*****



........................................................................................

:trigger:
https://mobile.twitter.com/stpalli/status/1174913146273714177

ಶುಕ್ರವಾರ, ಸೆಪ್ಟೆಂಬರ್ 10, 2021

ಬೈಲಾನೆ ರೂಮರು / ನಿಶ್ಯಬ್ದ ಪ್ರಮಾಣ (೧)

ಬೈಲಾನೆ ರೂಮರಿಲ್ಲಿ

 

ಆದಿಯಂತ ಇಲ್ಲದಂತ

ಆಮೂಲಾಗ್ರಾಧ್ಯಂತ

ಇದೆಂತದೊ ದಂತಕತೆ

ಅವರಿವರಂದಂದಂತೆ


~~~~~~~~~~~~~~~~~~~~~~~~~

"It is high(tea) time (so) that we 

address the elephant in the room(ers)"

~~~~~~~~~~~~~~~~~~~~~~~~~



ಈ ಕಡೆಯಿಂದಾ 

ಕಡೆಯಾಗಕ್

ಕಡಕಡದೂ ದುಡಿತುಡಿದೂ

ಅಡಿಗಡಿಗೆ ಗಡಗಡಗುತ

ತಡೆತಡೀತ ಅಗಸೀ ಬಳಿ 

ಸಾರುವಷ್ಟರಲಿ



"ಧೊಪ್ ಧೊಪ್!!"


"ಯಾರದು?!"


"ಆನೇ ಸೈಯ!!!"



ನೀ...

ನಾ...ಆ...

ನಿ!

 

-ಶಬ್ದಪ್ರಮಾಣವಾ

ದಂಗಾಗಿ

ಅಂದ್ ಕಂಡಿ 

ಇದ್ ಆನೇ 

ಇರಕ್ಕೂ ಅಂತ.



***



ಆನೆ ಕಂಡ

ರೂಂ ಅಂದರ ಅವಕಾಶ

ಆಲಯದ ಬಟಾಬಯಲೊ

ಬಟಾಬಯಲಾ

ಲಯವೊ


ಒಳಗಣಾನೆ

ಯೋ ದೇವ ಹೊರ

ಗಣ

ನೊ



***



ರೂಮಲ್ಲಿಯಾನೆ ಸುಮ್ನೆನೆ

ಬಯಲಾಗಬಹುದ

ರೂಮರ್ರು


ಬಟಾಬಯಲ್ ಬತ್ತಲೆನೆ

ಮಸ್ತ ರೋಮಿಂಗ

ಠಸ್ಕರ್ರು



***



ಬಿಳಿಯಾನೆ ಕರಿಕೋಣೆ

ಕೂಡಿಟ್ಟದು ಹೆಪ್ಪಾಯಿತೆ

ಕಣ್ಣಿದ್ದರು ಕುರುಡಿದ್ದರು

ಘೀಳಿಟ್ಟದು ಕೆಪ್ಪಾಯಿತೆ



***



ರೂಮು ಇದ್ದೆಡೆ ಯಡಮುರಿ

ಸಾಕ್ಷಿಗೆ ಸಾಕು ನಾಯಿಮರಿ

ಹಿಂದೆ ಬೊಗಳ್ತಾ ಓಡುತಲಿದ್ದರೆ

ಲದ್ದಿಬಿದ್ದಿತೊ ಮರಿ ಬೆನ್ನಹುರಿ



***


ರೂಮಾಗಲಂತೊಮ್ಮೆ 

ಆಶೀರ್ವದಿಸಿದರಾನೆ ರೊಮ್ಮನೆ

ಅಥರ್ವಶೀರ್ಷದಂತನಾಹತ 

ಚಿತ್ತದುಂಬದೇನೆ ಝುಮ್ಮನೆ



**********************************************************************

 


ಕೆಸರಲ್ಲಾಡಕ್ಕಾರೆ ಕರೀಕರಿ ಯನ್ನ ಕರ್ದು ಕಿವಿಯಲ್ಲುಸುರ್ದ ಕೊಸರು:

ಸರಕಾರೀ ಬಿಳಿಕರಿಯ ಕರ್ಕರೆಯದು ಕರ್ಕಶವಲ್ಲದಿದ್ದರೂ ಕಿರಿಕಿರಿಯೆನಿಸಿದಂತೆ ಬರಿ ತಲೆ ಕೆರೆಕೆರೆಯುತದನ ಸಂತೆಯ ತರಕಾರೀ ಸರಕೆಂಬಂತೆ ಕರಿಕಾರಲೇರಿಸಿ ಕರೆಕರೆತಂದು ಕರಾಮತ್ತಲಿ ಕರಿಕೋಣೆಯಲದರ ಬಿಳಿಹಾಲ ನೊರೆನೊರೆವಂತೆ ಕರೆಕರೆದು ಸುರಿಸುರಿದದರ ಕೆನೆ ಕಡೆಕಕಡೆದಾ ನೀರ್ಮೊಸರ ಮಾರಾಮೋಸದಿ ಶೆರೆಯಂದದಿಳಿಸಿ ಕುಡಿಕುಡಿದಮಲಲ್ಲಿಯದರ ಮದಮಲವಂ ಸಹ ಕರಿದು ಕರಿದು ಕರ್ರಗೆ ಕರ್ರಿ ಮಾಡುಂಡಾ ಮದಮತ್ತರು ಮತ್ತೆ ಮಾಡ್ ಹಾರ್ವಂತೆ ಹಾರಾಡಿ ತಲೆಬಡಿದೊಡೆದು ಕೋಡಿ ನೆತ್ತರದು ಹರಿಹರಿದು ಹರಿಹರೀಯೆಂದು ಮಡಿದರೂ ನಾಡಬಿಳಿಕರಿ ಕಾಡಕರಿಕರಿಯಾಗದೆಂಬ ಕಡುಗುಟ್ಟದನಮದುಸುರೆಯ ಶೆರೆಶೆರೆದೂ ಮತ್ತೇರದೆನುವಬಕಾರೀ ಬಿಳಿಕಾರಿನ ಹುಳಿನರಿಗಳೆಲ್ಲುಸುರಬಲ್ಲರು...



≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠≠

ಆನೆಯ ಇನ್ನೊಂದು ಭಾಗಶಃ ದರ್ಶನಕ್ಕಾಗಿ ಇಲ್ಲಿ ಸ್ಪರ್ಶಿಸಿ:
ಆನೇ ಸೈಯ!  (ಬೈಲಾನೆ ರೂಮರು - ೨)

an English transcreation/transmutation/evolution is here:
el'phantom di camera
(with a pseudo_italo-spanisque title)


 ಸ್ಪೂರ್ತಿಸೆಲೆ:
https://mobile.twitter.com/stpalli/status/1174913146273714177







ಭಾನುವಾರ, ಫೆಬ್ರವರಿ 25, 2018

ವರ್ತನೆಯೊಳಾವರ್ತವರ್ತವರ್ತನಿಸಿ..

               ( ಆವೃತ್ತಿ  - ೧.೨೩)
--------------------------------------------------------


ನಗರಗಳೊಳಗೆ, ನಾಗರೀಕರೊಂದಿಗೆ ಬೆರೆಕೆ
ಯಾಗಿಹೋಗುತ್ತ ಬದುಕು, ಕಾಗೆ ಗೂಗೆ
ನಾಯಿ ಬೆಕ್ಕು ಮೈನ ಗುಬ್ಬಿಗಳಂತೆ

ಲತೆಯು ಪಾಂಗಿನಲ್ಲಿ ಗಂಟಿಯನ್ನಪ್ಪುತ್ತ ಸುತ್ತುತ್ತ ಬೆಳೆಯುತ್ತೆ
ಡ್ರಿಪ್ಪಿನ ತೊಟ್ಟಿಕ್ಕುವ ಲಯಕ್ಕೆ
ಮನ್ಸೂರೆ ಹಾಡತೊಡಗಿರುತ್ತಾರೆ ಪ್ರಜ್ನೆಯ
ಯಾವುದೋ ಪಾತಳಿಯಲ್ಲಿ, ಕೆಲವೇ ಚದುರದಂಗುಲಗಳಷ್ಟು ಮಣ್ಣಿಗೆ
ಅನುವಾಗುವಲ್ಲಿ, ಜೀವದಜಾಡು ಆ ಸಿಮೆಂಟುಸಾರಿಸಿದಂಗಳದಲ್ಲಿ
ಇನ್ನ್ನೂ ಮರವಾಗುವ ಹಾದಿಗುಂಟ ಒಂದು ನೇರಳೇ
ಗಿಡ, ಇರುವೆ ಜೇನುಹುಳ ಇಣಚಿಯಂತ ಒಂದು ಪರಿಸರ
-ವ್ಯವಸ್ಥೆಯಾಗಿರುತ್ತೆ, ಅಲ್ಲಿ, ಆ ಕಾಂಕ್ರೀಟುವನದಲ್ಲಿ
ಪಾರಿವಾಳವೊ ಗೂಡುಕಟ್ಟಿರುತ್ತೆ ಕಬ್ಬಿಣದ ಕಂಬಿಗಳಲ್ಲಿ
ಪಿಷ್ಟಿಗೊಬ್ಬರದುಂಬಿಸೋವಲ್ಲಿ ಹೊರಕಿರಿದ ಅಶ್ವತ್ಥವೊಂದರ
ಬ್ರಹ್ಮರೂಪಾಯ ಬೇರುಗಳ ವಿಲೋಮಚಲನೆ
ಅಥವಾ ಕಟ್ಟೋಣಗಳ ನಿರಂತರ ನಿರಚನೆ
ಪುನಾರಚನೆ

ಈ ಗೊಂದಲಪುರದಲ್ಲಿ ಪುರ-
ಸಂಚಲನವೊಂದಕ್ಕೀಡಾದಂತೆ ಟ್ರಾಫಿಕ್ಕು
ಹಾಗ್ಗೆ ತಗುಲ್ಹಾಕ್ಕೊಳ್ಳೊದೇ
ಸಿಕ್ಕು, ಕಾದುಕುದಿವಂತೆಯರ್ಥ
-ಹೀನತೆ, ಡಿಫ್ಯೂಸಾಗುತ್ತೆ ನಿಧಾನ
ಉಕ್ಕಿ ಚೆಲ್ಲುತ್ತೆ.

ಆ ನಿಲುಗಡೆಯಿಲ್ಲದ ನಿಲ್ದಾಣದಲಿ ನಮ್ಮ ನಿಲ್ಲದೋಡುವ ರೈಲಿಗೆ
ಋಜುವಾದ ಹಸಿರುನಿಶಾನೆ ಬೀಸುವ ಸ್ಟೇಷನ್ಮಾಸ್ತರ
ಹೀಗೆ ನಮಗೆ ಕೋಳಿ ಕೂಗಿಯೇ ಬೆಳಗು ನಿಜದಲಿ
ಎಂದುಬಿಟ್ಟ ರೈಲಿಗೆ ಇಲಿಗಳ ಹಾದಿಹಿಡಿದೊಂದು ಇಣಚಿಯೂ ಬಂದು
ನಿಂದಲ್ಲಿ ಬಾಗಿಲವರೆಗೆ ಹೋದರೂ, ಬೋಗಿದಾಟದು.
ಏನಿದಾಟವು?
ಸೀಮೆಗಳು ಆಕ್ಸಿಡೆಂಟಲೇ ಆದರೂ ಯಾವತ್ತು, ಕಷ್ಟವೇ,
ಕಾಸ್ಟವೇ ಎನುವ  ಸೀಮೋಲ್ಲಂಘನಯಾನವು.

ಅಲ್ಲಿ ತುದಿ ದಿಗಂತದಿ ಹರಳುಗಟ್ಟಿದ ಘನಸಮುದ್ರದಲೊಂದೆಡೆ
ಸೆಲೆಯೊಡೆವ ಕಾಚಿದರುಣಮಧ್ಯಗವಿದಂತಃಸ್ಥಿತಿ
-ಗತಿ
ದಕ್ಕಿಸಿಕೊಳ್ಳುವಾಟಕ್ಕೆ ಓಂ ಸ್ವಸ್ತಿ.

ಅಥವಾ,

ಪ್ರಕೃತಿ-ಪುರುಷನಂತ ಸಿಮೆಟ್ರಿ
ಬ್ರೇಕಿಂಗ್ನಲ್ಲಿ ವೈಲೇಟಾದ ಚಾರ್ಜ-ಪಾರಿಟಿ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.


------------------------------------------------
ಈಗ್ಗೆ ನಾಲ್ಕೈದು ವರ್ಷಗಳಿಂದ ಬರೆಯುತ್ತ ಬಂದಿದ್ದು ..,
ಇನ್ನೂ ಮುಂದುವರಿಯಲಿಕ್ಕಿರುವಂಥದ್ದು.  

ಬುಧವಾರ, ಜನವರಿ 21, 2015

ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು

(ಇದರ ಹಿಂದಿನೊಂದು ಭಾಗ ಇಲ್ಲಿದೆ)


ನರಜಾಲಗಳ ಗೊಂಡಾರಣ್ಯಗಳ ಗೂಢ ಗಹ್ವರಗಳಲಿ
ಅಮೂರ್ತ ಸಂಕೇತ ಅನಿರ್ವಾಚ್ಯ ವ್ಯಕ್ತಿವಿಶಿಷ್ಟಾನುಭವಗಳಲಿ
ಅರ್ಥರಾಹಿತ ಪೂರ್ಣತಾಭಾವ ಶೂನ್ಯಘಳಿಗೆಗಳಲ್ಲಿ
ಸನ್ನಿವೇಶವಿಲ್ಲದ ಹಿನ್ನೀರ್-ನಿರರ್ಥದಲಿ

ಹುದುಗಿಸಲಿ ನಿನ್ನನೆಲ್ಲಿ
ನನ್ನಲಿ
ನೀನಿರದುದೆಲ್ಲಿ
ನೆನಪುಗಳು ಮುತ್ತಿಕ್ಕಿ ಬರದುದೆಲ್ಲಿ

ಕೆದಕಲೇ ಸ್ಮೃತಿ
ಕೋಶಕೋಶಗಳಾಳಗಳಲಿ
ಹುದುಗಿ ಬಂದವುಗಳಲಿ
ಚರಿತ್ರೆಗಳ ಕಮಟು ಪುಟಗಳಲಿ
ಶಿರ ಹುದುಗುವ ಅವಮಾನಗಳದ್ಯಾವುದೋ ಒಣ ಉಸುಕಿನೂರೊಂದರಲಿ
ಹೃದಯವೇ
ಹುದುಗುವುದೇ ಉಷ್ಟ್ರಪಕ್ಷಿಯೋಪಾದಿಯಲಿ?


ಅಳಿಸಿದುದಕ್ಕಾಗಿ ನಿನ್ನಿಂದ ನೀ ನನ್ನ
ನಳಿಸ ಹೊರಟಿದುದು ನನ್ನೊಳಗಿನಾನಿನ್ನನಿದ
ರೊಳಳಿಸಿ
ಹೋಗುವುದು ನಾ ನನ್ನೊಳಗಿಂದ
ಲಿಂದಿದಾಗದೆಂದು ಧ್ವನಿಯೊಂದು ಹೊರಟಿದು
ದದುವೆ ನಾನ್ನೆನ್ನುವುದು ನೀನನ್ನುವುದಲ್ಲಿ ಚುಂಗೊಂದನಿಡುವುದು
ಹಿಡಿದದನು ಅಭಿಸರಿಪುದು ಅಭಿಸಾರಿಕೆಯತ್ತ
ಮರಳೋಣ ಮತ್ತೆಯರಳೋಣ
ಅರಳುಮರಳಂತಿರುವಲ್ಲಿಂದ ಮತ್ತೆ....

---------------------------------------------------------------------------------------------------------------
ಇದು ಮುಂದುವರಿದ ಪ್ರತಿಸ್ಪಂದನದ ಯಾದೃಚ್ಛಿಕ ಭಾಗ,
 "Eternal Sunshine of the Spotless Mind"
ಎಂಬ 'ಅನೇರ ನಿರೂಪಣೆ 'ಯ ಸಿನೆಮಾಗೆ ...

ಈ ಮುಂಚೆ ಇದರ 'ಶೀರ್ಶಿಖೆ'ಯನ್ನು 'ಅನಂಗಚಿತ್ತದ ಅವಿರತ ಹೊಳಹು' ಅಂತಿಟ್ಟುಕೊಂಡಿದ್ದು ಹೌದಾದರೂ...

'spotless' ಎಂಬುದರ ಅರ್ಥ 'ಕಲೆರಹಿತ' ಅಂತಾಗುತ್ತದೆಯೇ ಹೊರತಾಗಿ
'ಜಾಗ್ಗೆ-ಯಿಲ್ಲದ' (spot-less) ಅಂತಲೇನೂ ಬಳಕೆಯಲ್ಲಿಲ್ಲವಂತ ಜ್ಞಾನೋದಯವಾಯಿತಾದರೂ...

ಅರ್ಥೈಸಿದಂತೆ ಕಾವ್ಯವಲ್ಲವೇ? ಅವರವರಿಗಾದದ್ದೂ ಅರ್ಥವಲ್ಲವೇ?
ಚಿತ್ತವು ಮಸ್ತಿಷ್ಕವೇ ಅಥವಾ ಇನ್ಯಾವುದೋ ಒಂದು ಜಾಗ್ಗೆಯಲ್ಲಿ ಇದೆ/ಇಲ್ಲ ಎನ್ನುವುದು ಎಂದಿಗೂ ಅನಿರ್ಧಾರಿತವಷ್ಟೇ?
ಎಂಬಿತ್ಯಾದಿ ಜಿಜ್ಞಾಸೆಗಳು ಉಳಿಯಿತಾಗಿಯಾದರೂ ...

ಪೋಪರ ಕವನವನ್ನೂ, ಕೌಫ್ಮನ್ನರ ಚಿತ್ರಪಟವನ್ನೂ ತುಲನಾತ್ಮಕವಾಗಿ ಗಮನದಲ್ಲಿರಿಸಿ...

"ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು" ಅಂತಮುಂತಾಗಿ ಮುಂದಾದದ್ದು...
---------------------------------------------------------------------------------------------------------------

ಗುರುವಾರ, ಫೆಬ್ರವರಿ 13, 2014

ಅನಂಗಚಿತ್ತದ ಅವಿರತ ಹೊಳಹು

ಅದು ಎಲ್ಲದು
ಅಳಿಸಿಸಿಕೊಂಡು ನಡೆ
ನಡೆದೂ ಉಳಿದುದರಿಂದ ಜೀವ
ನ ಮತ್ತೆ ಶುರುವೇ ಆಯಿತು
ಯಾವುದೋ ವಿವರದ ಉಳಿದರ್ಧ
ದಿಂದ ಶುರುವಾಗುವ ಈ ಟಿಪಿ
ಕಲ್ಲು ಕವನದ ಮುಕ್ತಾ
ಂತ ಸಾಲುಗಳು ಮುಂದುವರಿದಂತೆ ಹೊಸತು
ಸಂದರ್ಭಗಳಿಗೊಳಪಟ್ಟು ಒಟ್ಟಂದ
ದರ್ಥ ಗೂಡುತ್ತ ಗೂಢ ನಡೆಯಲಿ
ನಡೆವ ಬಗೆಯಲಿ 
ಯಾರನ್ನೋ ಇಳಿಸಿ ಬಿಟ್ಹೋಗಲು
ಎಂಬುದಾಗಿ
ಅಲ್ಲ, ಮತ್ತೆ ಹತ್ತಿಸಿ ಕೊಂಡ್ಹೋಗಲು ನಿಂದ ಕಾರು
ಹಿಂದಿಂದೇನೂ ತಿಳಿಯದಂತೋರ್ವನು ಬಂದು
ಏನಾದರೂ  ಸಹಾಯವಾಗಬಹುದೇ ಎಂದು ಇಹ
ದೊಳಗೆ ಕಳೆದ್ಹೋದುದರ ಪರ ಸುಳಿವನೀವಂತೆ
ಇಂದಿನೀಪುಟದೊಳು ನಿನ್ನೆಗೊಂಡಿಯನೊತ್ತಿದಾಗೆಂಬಂತೆ
ಯೂ ಅಲ್ಲವದು, ಭೂತದ ಹೊಳಹನಿಟ್ಟ ವರ್ತಮಾನ

        ****

ಮನಸ್ಸು ದೊಡ್ಡದು
ಮಾಡಿ ಕಡೆಗೂ ವ್ಯಾಲೆಂಟೈನು
ದಿನಾ ಅವಳಿಗಿಷ್ಟವೇ ಆಗುವ
ಪೆಂಡೆಂಟು ಉಡುಗೊರೆಯೆತ್ತಿ ಅವಳಂ
ಗಡಿಯಲಿ ಎದುರು ನಿಂದ
ರೂ ಗುರುತೇ ಇರದಂತೆ ಇದ್ದು ಬಿಟ್ಟಳು ರಂಡಿ
ಮಾರಾಯ ಅವಳು, ಮತ್ತೆ ಮತ್ತೇss
ರಿದಂತೆ ಮುತ್ತನಿನ್ಯಾರಿಗೋ ಈದೇ ಬಿಟ್ಟಳವಳಿಗದೇನಾಯ್ತಂ
ತದ್ದು ಸಹಿಸಲು ಸಾಧ್ಯವಿಲ್ಲದ್ದು
ಇದು ಇನ್ನು
ಡೈವೋರ್ಸು!

        ****

ನಿನ್ನಿಂದ ತೆಗೆಯದೇ
ನಿನ್ನ ನೀ
ಫೂಲು ಮಾಡಲಿಕ್ಕಾದೀತೆ?,
ತೆಗೆದು ಹಾಕುವ ಜಾಗವಿದ್ದು
ಹೋಗಿ ಅಳಿಸಿಸಿಕೊಂಡು ಬಂದಿದ್ದಾಳೆ
ಇದನೀಗನೀತನರಿಯುವುದೇ ಸರಿ
ಇಲ್ಲದೇ ಹೀಗೆ ಮುಂದೆ
ಹೋಗಲಾಗಲಿಕ್ಕಿಲ್ಲವಂತ...

(ಮುಂದುವರಿಯಬೇಕಿದೆ...)

------------------------------------------------------------------
ಇದು ಪ್ರತಿಸ್ಪಂದನ,
 "Eternal Sunshine of the Spotless Mind"  
ಎಂಬ  'ಅನೇರ ನಿರೂಪಣೆ 'ಯ ಸಿನೆಮಾಗೆ ...

ಶುಕ್ರವಾರ, ಜನವರಿ 31, 2014

ರಾತ್ರಿಯೊಂದೂ ಮುಕ್ಕಾಲಿನ ಮಳೆ...

ಈ ಹೀಗೆ ಜಿಟಿಜಿಟಿ
ಜಡಿಯಲಿ ಮಳೆ
ಜಿಗುಟು
ಮಗುವಿನಳುನಗುಗಳಂದದಿ
ಮಾತು ಮೂಡದಂತ
ಭಾವಂಗಳ ಸೂಚಿಸುತ
ವಿಲಂಬಿತ ಧೃಪದ
ಬಂದಿಶೊಂದಾದಂತೆ
ರಾತ್ರಿಯೊಂದು
ಮುಕ್ಕಾಲು
ನನ್ನೊಳಿಳಿದಂತೆ
ಮಬ್ಬು
ನಿಷಾಧ ಹೊಡೆದಂತೆ
ಕಾವ್ಯ ಕಟ್ಟೋಣ
ಮಲ್ಹಾರ ವಿಸ್ತರಿಸಿ
ಹಾಡೋಣ...

(..ಮುಂದುವರಿಯಬೇಕಿದೆ...)