ಗದ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗದ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 16, 2026

ಸರೀಸರ್ಪಣ

 ಸರೀಸರ್ಪಣ

ಸದಾ ಸರಿವ ಸರಿತಪ್ಪುಗಳ ಸರಾಸರಿ ಸರಹದ್ದಿನ ಸುರತತೆ 


"As urban expansion razes their homes, 
snakes find prey, warmth in human settlements"



--Such a simple statement from a 'daily' entry describing a natural, practical, pragmatic course of things is somehow sounding like a statement of surreal poetic justice!

--With each casual phrase in it sounding like a metaphor for something else -- something very existential altogether!!

Poly-semia ಉಪಮಾ ಸವಿಯುವ ಕವಿಸಮಯ!!!

And of course, the conflict and the metaphors herein are so ancient, a classic like 'Mahabharatha' has a couple of central chapters and characters dedicated to this!
(khandava dahana, sarpayajna, ...)
 
 
 
 

ಶುಕ್ರವಾರ, ಜುಲೈ 3, 2026

ಮೇಘದ್ಯೂತ

-:ಮೇಘದ್ಯೂತ:-

#ಮಿನಿಗಾಥೆ  #worldflay


ಅಭಿನವಗಾಳಿದಾಸನ ಚಿತ್ತಭಿತ್ತಿಯಲಿ ಹಾಗೊಮ್ಮೆ 
ಬಿರುಬರಗಾಲಮಧ್ಯೇ ಮೋಡಗವಿದ ವಾತಾವರಣವಿತ್ತು....

ಬದಲಾದ ಹವಾಮಾನದಲ್ಲಿ ಸಂದೇಶಘರ್ಭಿತ ಮೇಘ 
ದ್ಯೂತಕ್ಕೂ ಮುನ್ನವೇ ಹಠಾತ್ ಸ್ಪೋಟಿಸಿಬಿಟ್ಟಿತು!

ಆಭಿಸರಣಕೆಗೆ ಮುನ್ನವೇ ಪುಷ್ಪಪ್ರೇಮಿ ಭೃಂಗರಾಜನ ದೇಹ
ಭೋರ್ಗರೆದ ಬರ್ಬರ ರಸಧಾರೆಯಲಿ ಕೊಚ್ಚಿ ಹೋಯಿತು.

ಭೃಂಗನ ಬೆನ್ನೇರಿ ಬಂದ ವಿಧಿವಿಲಾಸದಲಿ ವಿರಹ ವಿಹಲ್ವಿ ಪುಷ್ಪ
ನರಳಿ ನರಳಿ ಮತ್ತರಳದಂತೆ ಸುರುಳಿ ಸುತ್ತಿ ಸುಳಿವಿಲ್ಲವಾದಳು.

ಈ ಮೆಲೊಡ್ರಾಮಾದಲ್ಲೀಗ ಏನು ಮಾಯಾಮಾಂತ್ರಿಕ
ವಾಸ್ತವ ತಲೆಕೆಳಗು ತಂತ್ರ ಹೂಡಿದರೂ ಅಷ್ಟೇ...

ವರ್ಧಂತಿಯನ್ನು ವದಂತಿ ಎಂಬಂತೆ ಜಯಂತಿಯೇ 
ಓ ಇನಿಯಾ ಎಂದು ಅನಂತನಾಗುವತ್ತ ನಡೆದರೂ ಅಷ್ಟೇ...

ಪ್ರಶ್ನೆ ಹಾಗೇ ಉಳಿಯುತ್ತದೆ:


"bodyಹೋದ soulನಿಂದ ಹೂವು ಅರಳಬಲ್ಲದೆ..?!"


------------------------------------------------------------------------------------

ಜಗತ್ತಿನಲೆಂದೂ ಎಂದೂ ಯಾವ ಎಐ ಬಂದರೂ ಅಷ್ಟೇ
ಅವುಗಳಿಗೇನೇ ತಲೆಕೆಳಗು ಪ್ರಾಂಪ್ಟಿಂಜಿನೀರು ಕುಡಿಸಿದರೂ ಅಷ್ಟೇ
ಅವು ಇಂಥ ಮಿನಿ world-flay ಒಂದನೆಂದೂ ಬರೆದುಕೊಡಲಾರವು
ಅಂತಂತಂದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳಾದ ನಾವುಗಳು 
ಈ ಮೂಲಕ ಶರಂಪರ ಪರಾಶರಪರಂಪರಾಪರಪರ ಪರಪರ 
ಷರಾ ಬರೆದಿಡುತಿದ್ದೇವೆ.

ಶನಿವಾರ, ಸೆಪ್ಟೆಂಬರ್ 26, 2015

ನಿಗಮನ

ಒಂದು ಅತೀ ಸಣ್ಣ ಪ್ರಭಂಧ/ಕಥೆ/ಭಯಾಗ್ರಪಿ/ಏನೋಒಂದು




ತೋಳ್ಪಾಡಿಗೆ ಬಸ್ಸು ಹತ್ತಿಸುತ್ತ
"
"ಬ್ರಹ್ಮಸತ್ಯವು ಅನಿರ್ವಾಚ್ಯವಾಗಿ ಬೆಂಗಳೂರಿನ ರಸ್ತೆಗಳ ಈ ದುರವಸ್ಥೆಯಾಗಿದ್ದು"
ಅಂತನ್ನುವುದನ್ನ ಸಿನಿಕತನವೆಂದೇ ಹೇಳಬೇಕಾಗುತ್ತದೆ
"

ಅಂತ ನಕ್ಕುನುಡಿಹಾರಿಸಲೆಸೆವಾಗ್ಗಿನಂದಿನ ಮಬ್ಬಲ್ಲೂ
ಡಯಲೆಕ್ಟಿಕ ಸಂಶಯದೆಳೆಯದಿಲ್ಲದಿರಲಿಲ್ಲ.

ಸೋಮವಾರ, ಮಾರ್ಚ್ 24, 2014

ಲೂಸಿಡ್ಡಾಗಿ...

 ಲೂಸಿಡ್ಡಾಗಿ ಕನಸಿಸುವುದು

ನನ್ನೊಳಗಣ ಕನಸುಗಳ--ಆಶಯಗಳ ಪರಂಪರೆ
ಪರಂಪರೆಯಿಂದ ಮುಂದೋಡುವ ಥೀಸಸ್ಸನ ಶಿಪ್ಪು


ಬೆಳಿಗ್ಗೆ ಎದ್ದ ರೀತಿ - ಘಳಿಗೆ ಅಷ್ಟು ಮುಖ್ಯವಾಗಿದ್ದೇನಲ್ಲ. ಮಧ್ಯಾಹ್ನ ಸ್ವಲ್ಪ ಅನ್ಕಂಟ್ರೋಲ್ಡ್ ಹಾರಾಟ, ಕೊನೆಗೆ ಸ್ವನಿರಾಕರಣೆಗಳು. ಫಿಸಿಕಲಿ ಫಿಸಿಕ್ಸಿನಿಂದ ಹಿಡಿದು ಕಳರಿಪಯಟ್ಟಿಗೆ ಜಿಗಿದರೂ, ತರ್ಕಗಳ ವರ್ತುಲದೇಣಿಗಳನ್ನೇರುತ್ತಲೇ ಹೊರಟಿದ್ದ ಮನಸ್ಸು. ನಂಗೆ ನಾನಿರೋ ರೀತೀನೇ ಬೇಡವಾಗಿ ದೂರ ಓಡೊ ಯತ್ನದಲ್ಲಿ ಹಾಗೆ ಜಿಮ್ನಾಸ್ಟಿಕ್ ಜಿಗಿತಗಳನ್ನು ಪ್ರಯೋಗಿಸಿಕೊಂಡುಹೊರಟಿದ್ದು...

ಎಷ್ಟೇ ದ್ವೇಶಿಸಿದರೂ ನನ್ನ ನಾನು, ನನ್ನಿಂದ ನನಗೆ - ಆ ಘಳಿಗೆಯ ನನ್ನಿಂದ ನನಗೆ - ನಿರ್ಗಮನ - ಆ ಕ್ಷಣದ ನಿರ್ಗಮನ ನಿರ್ವಾಹಗಳಿಲ್ಲ. ಎಲ್ಲಿ ಒಡಿದರೂ ನಾನು, ನನ್ನನ್ನ ನೆರಳಿನಂತೆ  ನಾನು ಹಿಂಬಾಲಿಸಿಕೊಂಡು ಬರೋದು. ಅಥವಾ ಆ ವರ್ತುಲದೇಣಿಗೆ ಆ ಮಟ್ಟಿಗೆ ರೇಜಿಗೆಯಾಗಿ ಅದರಿಂದ ಬೇರೆ ವರ್ತುಲದೇಣಿಗೆ ಹಾರಿ ಬೀಳಕ್ಕೆ ಹೀಗೆ ಓಡುತ್ತ - ಅಥವಾ ಓಡಲೆತ್ನಿಸುತ್ತ - ಇರೋದು. ನೆತ್ತಿಮೇಲಣದಾಗಸದಲ್ಲಿ ಬೇರೆ ದಿಕ್ಕಿಂದ ಸೂರ್ಯನೋ, ಚಂದ್ರನೋ, ಅಥವಾ ಬೀದಿದೀಪವೋ ಮೂಡಿದರೆ ಆ ನನ್ನ ಛಾಯೆಯೇ ಬದಲಾಗಬಹುದಲ್ವ ಅಂತ ಕ್ಷೀಣ ಆಸೆ--ಆಕಾಂಕ್ಷೆಯ ಎಳೆಗಳು. ಹ್ಯಾಗೆ ಈ ಹೊತ್ತಿನ ನನ್ನನ್ನ, ನಾನು - ಈವತ್ತಿನ ಮಟ್ಟಿಗಾದರೂ - ಬದಲಾಯಿಸುವುದು..? ಊಹೂಂ.., keep hitting the attractor basin, keep ducking the ball...

ಹೀಗೆ ಅರೆಬರೆ ಮನಸ್ಸಿಂದ - ಅನ್ಯರೀತ್ಯಾ ತೀವ್ರ ಮನಸ್ಸಿಂದ - ಫಿಸಿಕಲಿ - ವರ್ಚುಯಲಿ ತುಯ್ದು ಅಲೆದಾಡುತ್ತ..  ..ಆಯಾಚಿತವಾಗಿ ಕಮೆಂಟುಯೋಗ್ಯ ಕವನ-ಕವಿ ಜೋಡಿ ಸಿಗುತ್ತೆ. 'ದುರಹಂಕಾರಿ' ಅಂತೂ ಜಾಗೃತ. 'ಅನಂಗ ಚಿತ್ತದ ಅವಿರತ ಹೊಳಹು' ಅಪ್ಲೋಡಾಗೋ ಹೊತ್ತಿಗೆ ರಾತ್ರಿ ಹತ್ತು ದಾಟಿ, ಅವಸರದಲ್ಲೆಲ್ಲೋ ಹೊಟ್ಟೆಪಾಡು ಮುಗಿಸ್ಕಂಡು, ಅಮ್ಮ-ಅಣ್ಣನ್ನ ಮಾತಾಡಿಸ್ಕಂಡು, ರಾತ್ರಿ ನಿದ್ದೆಯೇ ಹಾಳಾಗ್ಬೋದು ಅನ್ನೋ ವಾರ್ನಿಂಗ್ ಇಟ್ಕೊಂಡು, ಏನೋ ಒಕ್ಕಣೆಯಿಟ್ಟು 'ನಾಲ್ಕು ಸಮಸ್ತ'ರಿಗೆ '..ಹೊಳಹು' ಕಾಣುವಂತೆ ಕೊಂಡಿಯಡಕವಿಟ್ಟು ವಿ-ಭಿನ್ನವತ್ತಳೆ ಕಳಿಸುವಹೊತ್ತಿಗೆ ಹನ್ನೆರಡು ದಾಟಿ ಅಲ್ಲೇ ಕಣ್ಣೆಳೆಯುತ್ತಿದ್ದುದು. ಹಾಗೆ ನನ್ನ ನಾನು ಹುಸಿ-ಬಲವಂತ ದೂಡಿಕೊಂಡು ರೂಮಿಗೆ ಬಂದು ಬಿದ್ದುಕೊಂಡಿದ್ದು ತಾತ್ಕಾಲಿಕವಂತಂದುಕೊಂಡು, ಉಟ್ಟ ಬಟ್ಟೆಯಲ್ಲಿಯೇ. ಮತ್ಯಾವಾಗಲೋ ಎಚ್ಚರಾದಾಗ ಲೈಟು ಹಾಗೇ ಉರೀತಿದ್ದುದು, ಪ್ಯಾಂಟು ಅಲ್ಲೇ ಸ್ವಲ್ಪ ಸಡಿಲ ಜಾರಿಕೊಂಡಿದ್ದುದು, ಯಾವ ಮಾಯಕದಲ್ಲೋ ಬೆಡ್ಷೀಟು ಎಳಕೊಂಡಿದುದು...

*****

ಊಹೂಂ !
ನಾನು ಬರೆಯಲಿಕ್ಕೆ ಎದ್ದು ಕೂತದ್ದು ಈ ಪುರಾಣವನ್ನೇನಲ್ಲ. ಕೇಂದ್ರ ವಿಷಯ ಸ್ವಲ್ಪ ಬೇರೆಯೇ. ಆದರೆ ಕಥಿಸುವುದರ ಕುರಿತಾಗಿಯೇ ಇರುವ ನಮ್ಮದೊಂದು ಥಿಯರಿಯಿದೆ : ಯಾವುದೇ ಒಂದು ಸ್ಪುರಣೆಯು ಅದರ ಅಮೂರ್ತತೆಯಿಂದಾಚೆಗೆ ಕೆಳಪಟ್ಟು ರಕ್ತಮಾಂಸಗಳ ಜೀವಾಕೃತಿಯಾಗಿ - ಅನುಭಾವವಾಗಿ - ಬಂದಿಳಿಯುವುದರ ಹಿನ್ನೆಲೆಯಲ್ಲಿ ಅದನ್ನ ಹಾಗೆ ವಿಶಿಷ್ಟಗೊಳಿಸುವ - transcend ಮಾಡುವ ಒಂದು ಪರ್ಯಾವರಣ - context -ಇರುತ್ತೆ. ಆ ಒಂದು ಅನುಭಾವಕ್ಕೆ ಪಾತ್ರನಾದವನಿಗೆ ಮಾತ್ರವೇ ಆಪ್ತವಾದ ಒಂದು ಲೋಕದಲ್ಲಿ ಆ ಒಂದು ಸೃಜನಕ್ರಿಯೆಯು ಘಟಿಸಿರುತ್ತೆ. ಎಷ್ಟೋ ಬಾರಿ ಆ ಹಿನ್ನೆಲೆಗಳನ್ನ ಕಲೆಯಲ್ಲಿ ದಾಟಿಸುವ ಯತ್ನವಿರದೇ, ಅಥವಾ, ದಾಟಿಸುವ ಯತ್ನವಿದ್ದೂ ಅದು ಸೋತು, ಇಡೀ ಸೃಜಿತಹೃದಯವೇ 'ದಾಟದೇ' ಉಳಿದುಬಿಟ್ಟ ಆರೋಪಗಳಾಗುತ್ತವೆ. ಹೆತ್ತಿದ್ದು ಎಷ್ಟೇ abstract ಆಗಿದ್ದರೂ ಹೆತ್ತವರಿಗೆ ಅದು ರಕ್ತಮಾಂಸಗಳಿಂದ ಮೈವೆತ್ತ ಮುದ್ದ್ದುಕೂಸಾಗಿಯೇ ಕಾಣುತ್ತಿರುತ್ತೆ. ಆದರೆ ಅದರ ಕುರಿತು ಸರಿಯಾಗಿ ಅನುಭವ-ಪ್ರವೇಶಗಳಿಲ್ಲದಿದ್ದವರಿಗೆ - ಇದ್ದವರಿಗೂ ಕೂಡಾ ಕೆಲವೊಮ್ಮೆ - ಅದು ಬರೀ ನೀರಸ-ನಿರ್ಜೀವ ಬಡಬಡಿಕೆಗಳಾಗಿ ಕಂಡುಬರುವ ವಿದ್ಯಮಾನದೊಂದಿಗೆ ಕೃತಿ ಯಾ ಕೃತಿಕಾರ ಸೋತ ಆರೋಪಗಳು ಆಗಿ ಬರುತ್ತವೆ.

ಓದುಗನಿಗೆ ಇದನ್ನ ನೀಗಿಕೊಳ್ಳಲು "ಅರ್ಥವಾದ ಸಾಲುಗಳ ಬೆಳಕಲ್ಲಿ ಅರ್ಥವಾಗದ ಸಾಲುಗಳನ್ನ ಓದಿ" ಎನ್ನುವ ಎಕ್ಸಪರ್ಟ್ ವಿಮರ್ಶಕರ ಸಲಹೆ ಇದೆ. ಆದರೆ ಕೃತಿಕಾರ ಹ್ಯಾಗೆ 'ಇಂಪ್ರೋವೈಸ್' (ಹೆರುವವರ ನಿಘಂಟಿನಲ್ಲಿ ಹಾಗೊಂದು ಪದದ ಇರುವಿಕೆಯೇ ಬಹುಮಟ್ಟಿಗೆ ಸಂಶಯ!) ಮಾಡಿಕೊಳ್ಳಬಹುದು..? ಇಲ್ಲಿ ಹಿಂದೂಸ್ತಾನಿ ಕಛೇರಿ ಪದ್ದತಿ ಒದಗಿಬರಬಹುದು : ಮೊದಲು ಮಂದ್ರಾಲಾಪಗಳ ಆಸ್ಥಾಯಿ ಹಿಡಿದು ತನ್ಮೂಲಕ ಕೃತಿ ಆಗಿ ಬರಬೇಕಾದ context/ಪರ್ಯಾವರಣ/ಲೋಕವನ್ನು 'ಕಟ್ಟಿಕೊಡುವುದು'; ತದನಂತರ ಸ್ವಮನೋಧರ್ಮದ ವ್ಯಭಿಚಾರೀಭಾವಗಳ ಚಲನೆಗಳ ಹೊಳೆಯಿಸುವುದು.

--ಮಲಗುವ ಮುಂಚಿನ ತುಯ್ದಾಟಗಳ ಹೊತ್ತಲ್ಲಿ ಕಪೋಲದಲ್ಲಿ ಹಾಗೊಂದು ಥಿಯರಿಯ ಅಲೆಗಳು ಕೂಡಾ ಅಲೆದಾಡಿಕೊಂಡಿದ್ದವು.

*****

ನಮ್ಮ ಈ ಎಲ್ಲ ವೈಯಕ್ತಿಕ ಹಾರಾಟ ಹೋರಾಟಗಳ ಪ್ರಾಚೀನ ಅರ್ವಾಚೀನ ಪರಂಪರೆಯಲ್ಲಿ ಜೋಡಣೆಯಾಗುತ್ತ ಬರುವವು ನಮಗೆ ಬೀಳುವ ಕನಸುಗಳು. ಸುಪ್ತಮನಸ್ಸು ಜಾಗೃತಮನಸ್ಸನ್ನು ಡ್ರೈವ್ ಮಾಡುವುದು ಸಂಗತವಿರುವಂತೆಯೇ ಜಾಗೃತಮನಸ್ಸಿನ ವ್ಯಾಪ್ತಿಯ ವಿದ್ಯಮಾನಗಳು ಸುಪ್ತಮನಸ್ಸಿಗೆ ಇಂಧನ-ಸಂಸ್ಕಾರಗಳನ್ನ ಈಯುವುದು ಕೂಡಾ ಸಂಗತವೇ. ಹಾಗೆ ಸಂಸ್ಕಾರಿತರಾದ 'ಸುಪ್ತಮನಸ್ಸು' ಎನ್ನುವ alleged ನಾಟಕಕಾರರು ಸ್ವಪ್ನರಂಗಭೂಮಿಕೆಯಲ್ಲಿ ಅದ್ಭುತ ಕೃತಿಗಳನ್ನ ಆಡಿಸುತ್ತಿರುತ್ತಾರೆ. ಮೇಲ್ನೋಟಕ್ಕೆ ಅಸಂಗತ-ಅಸಂಬದ್ಧಗಳೇ ವಿಧಾನಪ್ರಧಾನವಾಗಿರುವಂತೆ ತೋರುವ ಇವುಗಳನ್ನ 'ಸ್ವಪ್ನಸಂಗತ'ವೆಂಬ ತರ್ಕ-ವಿಧಾನಾತ್ಮಕವಾಗಿಯೇ ಅರ್ಥೈಸೋಣವಾಗಬೇಕಾಗುತ್ತದೆ. ಬಹುವಾಗಿ ಎಚ್ಚರಾದ ನಿಮಿಷಗಳಲೇ ಮರೆವಿಗೀಡಾಗುವ ಈ ರಂಗಪ್ರಯೋಗಗಳ ಅಂಕಗಳನ್ನ ಆ ಕೂಡಲೇ ಮೆಲಕುಹಾಕುತ್ತ ಅನುಸಂಧಾನಿಸಿಕೊಳ್ಳಬೇಕಾಗುತ್ತದೆ. ಅಚಾನಕ್ಕನೆ ಎಚ್ಚರಾದಾಗ ಮರೆತುಹೋಗುವುದರೊಳಗಡೆಯೇ ಬರೆದು ಉಳಿಸಿಬಿಡೋಣವಂತ ಕೂತರೂ.. ಉದ್ಧ ಪೀಠಿಕೆಗಳ ಲಹರಿಯಲ್ಲಿ..  ಊಹೂಂ! ಸ್ವಪ್ನರಂಗದ ಲೇಟೆಸ್ಟ್ ನಾಟಕದ ಅದ್ಭುತಹೊಳಹುಗಳ ಲೇಟೆಸ್ಟ್ ಅಂಕಗಳು ಮರೆವಿನ ಪರದೆಯ ಮರೆಗೆ ಇನ್ನಿಲ್ಲದಂತೆ ಸರಿದೇ ಬಿಡುತ್ತವೆ.
*****

ಎಚ್ಚರಾಗೋದಕ್ಕೆ ಸ್ವಲ್ಪಮುಂಚೆ.. ಮನೆಯಲ್ಲಿ ತಟ್ಟೆಯಲ್ಲಿ ಅಮ್ಮ.. ಬಾಳೆಹಣ್ಣು ಪಾಯಸ ಬಡಿಸುತಿದ್ದಳು. ಏನೇನೋ ನೆನಪುಗಳು ಕಲಕಿ ಬಾಳೆಯ ತುದಿಯಲ್ಲಿ ದಕ್ಷಿಣೆಕಾಸುಗಳು ಪ್ರತ್ಯಕ್ಷವಾದವು. ಅಥವಾ ನಾನೇ ಅವುಗಳನ್ನ ಪ್ಯಾಂಟಿನ ಹಿಂದಿನ ಜೇಬಿನಿಂದ ತೆಗೆದಿಕ್ಕಿದೆ. "ಯಾವುದೋ ಪೂರ್ವಜನ್ಮದ ಧನ್ಯತೆಯ ಕ್ಷಣಗಳ ಋಣಭಾರದ ಸ್ಮರಣಿಕೆಗಳು ಇವು, ಅಮ್ಮ!" ಅಂತ ಏನೋ ಒಂದು ಅದ್ಭುತ ನಾಟಕೀಯ ಡೈಲಾಗು ಉದುರಿಸಿದೆ.


*****

ಅಲ್ಲಿನ ಸ್ಮರಣೆಯ ಪ್ರಕಾರ ಆ ದಕ್ಷಿಣೆ-ಕಾಸುಗಳ ಮೂಲದಲ್ಲಿ ಮನದುಂಬುವಂತೆ ಊಟವಿಕ್ಕಿದವರು ಪೂರ್ಣಿ-ಹರಿಣಿಯರು! ಎಷ್ಟು ಹಳೆಯ ಸ್ಮರಣೆ! ಇದು ಕನಸೊಂದರ ಚರಿತ್ರೆಯಾ? ಅಥವಾ ಜಾಗೃತಾವಸ್ತೆಯ ನನ್ನ ಚರಿತ್ರೆಯಲ್ಲಿನ ವಿದ್ಯಮಾನಗಳ ಸ್ವಪ್ನ ರೂಪಕವಾ?? "ಏನೋ ಒಂದು ತೊಟ್ಟು ಪ್ರೀತಿ ವಿಶ್ವಾಸಕ್ಕೆ ಹಂಬಲಿಸುವ ಹೈರಾಣು ಮನಕ್ಕೆ ಹಾಗೆ ನಿಜಕ್ಕೂ ಪ್ರೀತಿ-ವಿಶ್ವಾಸಗಳು ಸಿಕ್ಕಿದ ದಾಖಲೆ ನಿಜಚರಿತ್ರೆಯಲ್ಲಿದ್ದರೆ ಅದು ಅವರಲ್ಲಿ ಮಾತ್ರವಿರಬೇಕು" ಅಂಥ ಇದನ್ನು ವ್ಯಾಖ್ಯಾನಿಸಲಾ? ಈಗ ಜಾಗೃತನಾದವನು ನಿಜಚರಿತ್ರೆಯನ್ನ ತಡಕಾಡಿನೋಡಿದರೆ ಸರಿಯಾಗಿ ಅಂಥಾ ಯಾವ ಘಟನೆಯೂ ನೆನಪಿಗೆ ಸಿಲುಕುತ್ತಿಲ್ಲವಲ್ಲಾ? ಈ ದಕ್ಷಿಣೆಕಾಸುಗಳ ಮೂಲವೆಲ್ಲಿ ಹಾಗಾದರೆ? ಮತ್ತೆ ಇಲ್ಲಿ ಇನ್ನೊಂದು ಗಮ್ಮತ್ತೆಂದರೆ, ಪ್ರೀತಿ ವಿಶ್ವಾಸಗಳ ಕ್ಷೇತ್ರದ ಇತರ ಅಭ್ಯರ್ಥಿಗಳಾರೂ ಸ್ವಪ್ನಲೋಕದಲ್ಲಿ - ನೇರವಾಗಿ ಬರುವುದು ಬೇಡ - ಸಂಕೇತ/ಸೂಚ್ಯವಾಗಿಯೋ, ವಿಸ್ಮೃತಿಗೀಡಾಗುತ್ತಿರುವ ಸ್ಮರಣೆಯಾಗಿಯೋ, ಇಲ್ಲಾ ಕನಸಾಗಿಯಾದರೂ ಹೊಕ್ಕು ಬಳಸಾಡಿದ ಯಾವುದೇ "ದಾಖಲೆ" ಇಲ್ಲವಲ್ಲ!

*****

ಇದರ ಹಿಂದೆ ಇನ್ನೂ ಕೆಲವು ಅಂಕಗಳಿದ್ದವು. ಎಚ್ಚರಾಗುವ ವೇಳೆ ಒಟ್ಟಾರೆ ಅದ್ಭುತ ನಾಟಕವೊಂದಾದ ಸಂತೃಪ್ತಿಯಿತ್ತು. ಈಗ ನೆನಪಿಗೆ ಅಲ್ಪಸ್ವಲ್ಪ ಸಿಲುಕಿದ ಕೊನೆಯ ಅಂಕದಿಂದ ಕೆಲವು ಅಂಶಗಳು ಹೊಳೆದು ಕಾಣುತ್ತಿವೆ:
  • ಈ ಸ್ವಪ್ನರಂಗಪ್ರಯೋಗಗಳು ಕೆಲವೊಮ್ಮೆ ಏಕಪಾತ್ರಾಭಿನಯದ ಥರ. ಪ್ರತಿಯೊಂದು ಪಾತ್ರಗಳಲ್ಲಿ ನಾನೇ ಪರಕಾಯ ಪ್ರವೇಶಿಸಿದಂತಿರುವುದರ - ಪ್ರತೀ ಜೋಡಿ ಕಣ್ಣುಗಳ ಮುಖಾಂತರ ನಾನೇ ನೋಡುತ್ತಿರುವಂತಿರುವುದರ - ಜೊತೆಜೊತೆಗೆ ಎಲ್ಲರನ್ನೂ ಒಟ್ಟಂದದ ಮಟ್ಟದಲ್ಲಿ ನೋಡುವ ಅಸ್ಪಷ್ಟ ಇರುವಿಕೆಯ ಪ್ರೇಕ್ಷಕ ಸಾಕ್ಷಿಯೂ ನಾನೇ! ('ಇನ್ಸೆಪ್ಷನ್' ಪ್ರೇರಣೆ?)
  • ನನ್ನತನ ತುಸು ಹೆಚ್ಚಾಗೇ ಇರುವ ಪಾತ್ರಗಳಿಗೆ (ಅಂದರೆ ಯಾರಲ್ಲಿ ಬಹುವಾಗಿ ನನ್ನನ್ನು ನಾನೇ ಕಾಣುತ್ತೇನೋ ಆ ಪಾತ್ರಗಳು) ಅವುಗಳದ್ದೇ ಆದ ಸ್ವಪ್ನಚರಿತ್ರೆಗಳಿರುವುದು ('ಲೂಸಿಡ್ ಡ್ರೀಮಿಂಗ್'ನ ನೆರಳು?).., ಅಷ್ಟೇ ಏಕೆ, ಕನಸಿನೊಳಗೆ ಕನಸುಗಥೆ-ಕನಸುನಾಟಕಗಳು ಕೂಡಾ! ('ಲೂಸಿಯಾ' ಪ್ರಭಾವ?)

  • ಯಾವುದೂ ಸ್ವಯಂಭುವಲ್ಲ - ನಿರ್ವಾತದಲ್ಲಿ ಸೃಷ್ಟಿಕ್ರಿಯೆ ಜರುಗುವುದು ಸಾಧ್ಯವಿಲ್ಲ. ಪರ್ಯಾವರಣದ ಅಣು-ರೇಣು-ತೃಣ-ಕಾಷ್ಟಗಳೇ ರೂಪಾಂತರಗೊಳ್ಳುತ್ತ ಒಟ್ಟಂದವೆಂಬುದು ಹುಟ್ಟುಗಟ್ಟುವುದು. --ಇದು ಸುಪ್ತಮನದ ಸ್ವಪ್ನರಂಗಭೂಮಿಕೆಗೂ ಅನ್ವಯ. ಅಲ್ಲಿನ ಮೂಲಧಾತುಗಳು ಅಂತ ಭಾಸವಾಗುವವು ಕೂಡ ನಿಜಜೀವನದ ಸಧ್ಯದಿಂದ ಜಾತವಾಗಿರುವವು (ಹಾಗಿದ್ದಾಗಿಯೂ ಸಹ ಅಲ್ಲಿ ವಿಲಕ್ಷಣ ಸ್ಪಾಂಟೇನಿಟಿಗಳೇ ರಾರಾಜಿಸುವವು!). ನನ್ನಲ್ಲಿ ಬಂದು ಒಂದು ವಾರವಿದ್ದು ಹೋದ ಅಮ್ಮ, ಅರೆಹೊಟ್ಟೆಯಲ್ಲಿ ಮಲಗುವಾಗ ಕೊನೆಯಲ್ಲಿ ತಿಂದ ಬಾಳೆಹಣ್ಣು, ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಹಾಗೇ ಉಳಿದು ಅಣೆಯುತ್ತಿದ್ದ ಚಿಲ್ಲರೆಕಾಸು ಮತ್ತು ವಯೋಸಹಜ ಹಂಬಲಗಳು! --ಇವೇ ತಾನೇ ಆ ಕೊನೇ ಅಂಕದ ಘಟಕಾಂಶಗಳು?!

    *****

    ಅಮ್ಮ ಆ ದಕ್ಷಿಣೆ ಕಾಸನ್ನ ತೆಗೆದು ಅಪ್ಪನ ಕ್ಯಾಷ್-ಡ್ರಾ ಗೋ ತನ್ನ ಡಬ್ಬಿಗೋ ಸೇರಿಸುತ್ತೀನಂದಳು. ಈ 'ವಿನಿಯೋಗ'ಕ್ಕೆ  'ಹೂಂ' ಅಂದೆ.

    --_--