ಈ ಭೂಮಿಯಲ್ಲಿ ಏನೆಲ್ಲ ಬೀಜಗಳು ಎಷ್ಟೆಲ್ಲ
ಹಿಂಗಾರು ತುಸು ಸೋಂಕಿದ್ದಷ್ಟರಲ್ಲೇ ಆರಡಿ-
ಯುದ್ದವೆದ್ದು ಮೂರಡಿ ನಿಜಜಾಗದ ಜಗದಗಲ
ಸಸ್ಯಸಂಕುಲ ಜಗಳ ಮೃಗಜಂತುಖಗಗಳ ಗದ್ದಲ ಸಹಜ-
ಜೀವನ ಪೈಪೋಟಿ
ಇನ್ನೂ
ಮೊನ್ನೆಯಾಗಿಲ್ಲ ಹಾಯ್ದು ಹಿಟಾಚಿ ತಗ್ಗುಗಳ
ತುಂಬಿಸಿ ದಿಣ್ಣೆಗಳ ತಾಚಿ ಅತ್ತಿತ್ತ
ಚದುರಿಸಿ ಶತಶತಮಾನಗಳ ದಾರಿ-
ಸುಂಕವಿಲ್ಲವೆಂದು ಗುಡ್ಡಬಿದ್ದ ಸಂಕದಕಲ್ಗಳ / ಒಡೆದರೆ
ಒಂದೀಟು ಚಕಮಕಿಸಬಹುದಾಗಿದ್ದ ಬೆಣಚಿಕಲ್ಗಳ
ಇಟ್ಟಿಗೆ ಸಿಮೆಂಟು ಮರಳು ಗೃಹ-
ಭಗ್ನಾವಶೇಶಗಳ ಸರಿಸಿ ಸಪಾಟಾಗಿಸಿ ಅಷ್ಟಿಷ್ಟು
ಭೂಮಿಕೆ ಶತಕೋಟಿಗೆ ಜಾಹೀರು ಆಖೈರಾ
ಗಿರಲಿಕ್ಕಿಲ್ಲ ಇನ್ನೂ
ಉರುಳಿಸಿದ್ದ ಮರಗಿಡಗಂಟಿಗಳ ಕೊರಳುಲಿಯುರುಳು
ಉಸಿರು ಕಪ್ಪಿಸುವ ನಾಟಾಬಡ್ಡಿ ಜಿಗ್ಗುಗಳ ಚಿಟಪಟ ಸುಡುಧಗೆ
ಹೊಗೆ ಆಗ್ಗಾಗ್ಗೆ ಸಿಟಿಜನಜೀವನ
ಹೀಗಿನ್ನೂ
ಬುಧವಾರ, ನವೆಂಬರ್ 20, 2024
ಆವರ್ತ - ೨
ಶನಿವಾರ, ಜುಲೈ 8, 2023
ಚರಿತಾ
ಚರಿತ್ರೆಯೆಂದರೆ ಘಟನಾವಳಿಗಳಂತೆ
ಚಾರಿತ್ರ್ಯವೆಂದರೆ ಚರಿತ್ರಾನಿರೂಪಕ
ವೆಂದಾರೋಪಿಸಲಾಗಿದ್ದಂತೆ ಹೀಗೆ
ಅಂತೆಕಂತೆಗಳೇ ಸೇರಿಕೊಂಡಂತೆ
ತೋರೋದು ಕಂಡಂತೆ
ಯಿಂತಾ ಆರೋಪಸ್ವರೂಪ
ಗಳ್ಯಾವತ್ತು ಅಂದುಕೊಂಡಂತೇ
ಎಂದುಕೊಂಡಂತೆ
ಆವತ್ತು ಯಾವತ್ತು ಎಲ್ಲ ತೆಗೆದು
ಚರಿತಾಂತ ಸ್ತ್ರೀತ್ವ
ವನ್ನಾರೋಪಿಸಿದಿರೋ
ಮತ್ತೂ ತಿಳಿ
ಯದಾಗುತ್ತೆ
ಆ ಯೋನಿಯಲಿ ತೋಚಿದಂತೆ ಗೀಚಿಕೊಳ್ಳೋದ
ತೊಡೆದು ಸಯನ್ಸಂತ ಯೂನಿ
ವರಸಲಾಗಿ ವಸ್ತುನಿಷ್ಠ ಸಗಣಿ ಸಾರಿಸಲಾದಂತೆ
ಅಲ್ಲಿ ಫೇನ್ಮಣ್ಣು ಪಥಗಳಿಗೆ ಯಥಾನು ವಜನು ಹಾಕಿ
ಕೂಡಿಕಳೆದು ವರ್ಗಕ್ಕೇರಿಸಿ ಸಂಯೋಜಿಸಿ ನೋಡಿದರೆ
ಸಿಗೋದು ಎಲ್ಲ ಒಂದಾಗದಸಂಭವನೀಯತೆಯಷ್ಟೇ
ಹತ್ತಿರದ ಬೆಟ್ಟದ ಮೆಟಾಥಿಯರಿಸ್ಟ
ಇದು ಇನ್ನೂ ಹತ್ತಿರದ ಬೆಟ್ಟದ ಕುರಿ-
ತೊದರುವಿಕೆಯಾದ್ದರಿಂದ ಸ್ವಾರಸ್ಯ-
ಕರವಿರಬಹುದೆಂದು ನೀವೆಣಿಸಿ-
ರ ಬಹುದಾದರೂ, ಈ ಬಹುದಾರಿಗಳಂ-
ಕುಡೊಂಕು ಕೊಂಕು ಉಬ್ಬುತಗ್ಗು ವನವಿಹಂಗ-
ಮೇತ್ಯಾದಿ ದಟ್ಟವಿವರಗಳೆಂದು ಬಗೆಬಗೆ-
ದು ಮಂಡಿಗೆ ಮೆಲ್ಲುತ್ತಿರ
ಬಹುದಾದರೂ ಹಾಗಲ್ಲವೆಂದೊದರಿಬಿಡು-
ತ್ತಾನು ಮೊದಲೇ ಪ್ರಸಿದ್ಧಾಂತಿ ಎಷ್ಟಾದರೂ
ಆಳ ನಿರಾಳ ಕೊರೆ ಕೊರೆದು ಬೋ
ರಿಂಗೆಂದು ಬಿಡುತ್ತಾನೆ ನಾಲ್ವತ್ತೇಳು
ನಿಮಿಷಗಳಷ್ಟು ತುತ್ತೂರಿಕೆಯಲ್ಲಿ ಸಂವಾಹಿಸಿದ್ದು ಹ್ಯಾಗೆ
ಇದು ಹಾಗಲ್ಲವೆಂಬ ಪ್ರಸಿದ್ಧಾಂತ ಪ್ರಸ್ಥಾನ ಮಾತ್ರವನೆ.
ಅಲ್ಲೀಮಟ ಹೋಗೂದು ಬ್ಯಾಡ್-
ಅನ್ನೋದು ಗೊತ್ತಿರೋ ಭೌತಾಗಮವೇ ಜ್ಯೋತಿರ್ವರ್ಷಗಳಳತೆ
ಗೋಲ್ಮಟ್ಟದಲ್ ಸರ್ವತ್ರ ಏಕಪ್ರಕಾರವಾಗಿ ಗೋಚರಿಸೋದು.
ಭಾನುವಾರ, ಫೆಬ್ರವರಿ 25, 2018
ವರ್ತನೆಯೊಳಾವರ್ತವರ್ತವರ್ತನಿಸಿ..
ನಗರಗಳೊಳಗೆ, ನಾಗರೀಕರೊಂದಿಗೆ ಬೆರೆಕೆ
ಯಾಗಿಹೋಗುತ್ತ ಬದುಕು, ಕಾಗೆ ಗೂಗೆ
ನಾಯಿ ಬೆಕ್ಕು ಮೈನ ಗುಬ್ಬಿಗಳಂತೆ
ಲತೆಯು ಪಾಂಗಿನಲ್ಲಿ ಗಂಟಿಯನ್ನಪ್ಪುತ್ತ ಸುತ್ತುತ್ತ ಬೆಳೆಯುತ್ತೆ
ಡ್ರಿಪ್ಪಿನ ತೊಟ್ಟಿಕ್ಕುವ ಲಯಕ್ಕೆ
ಮನ್ಸೂರೆ ಹಾಡತೊಡಗಿರುತ್ತಾರೆ ಪ್ರಜ್ನೆಯ
ಯಾವುದೋ ಪಾತಳಿಯಲ್ಲಿ, ಕೆಲವೇ ಚದುರದಂಗುಲಗಳಷ್ಟು ಮಣ್ಣಿಗೆ
ಅನುವಾಗುವಲ್ಲಿ, ಜೀವದಜಾಡು ಆ ಸಿಮೆಂಟುಸಾರಿಸಿದಂಗಳದಲ್ಲಿ
ಇನ್ನ್ನೂ ಮರವಾಗುವ ಹಾದಿಗುಂಟ ಒಂದು ನೇರಳೇ
ಗಿಡ, ಇರುವೆ ಜೇನುಹುಳ ಇಣಚಿಯಂತ ಒಂದು ಪರಿಸರ
-ವ್ಯವಸ್ಥೆಯಾಗಿರುತ್ತೆ, ಅಲ್ಲಿ, ಆ ಕಾಂಕ್ರೀಟುವನದಲ್ಲಿ
ಪಾರಿವಾಳವೊ ಗೂಡುಕಟ್ಟಿರುತ್ತೆ ಕಬ್ಬಿಣದ ಕಂಬಿಗಳಲ್ಲಿ
ಪಿಷ್ಟಿಗೊಬ್ಬರದುಂಬಿಸೋವಲ್ಲಿ ಹೊರಕಿರಿದ ಅಶ್ವತ್ಥವೊಂದರ
ಬ್ರಹ್ಮರೂಪಾಯ ಬೇರುಗಳ ವಿಲೋಮಚಲನೆ
ಅಥವಾ ಕಟ್ಟೋಣಗಳ ನಿರಂತರ ನಿರಚನೆ
ಪುನಾರಚನೆ
ಈ ಗೊಂದಲಪುರದಲ್ಲಿ ಪುರ-
ಸಂಚಲನವೊಂದಕ್ಕೀಡಾದಂತೆ ಟ್ರಾಫಿಕ್ಕು
ಹಾಗ್ಗೆ ತಗುಲ್ಹಾಕ್ಕೊಳ್ಳೊದೇ
ಸಿಕ್ಕು, ಕಾದುಕುದಿವಂತೆಯರ್ಥ
-ಹೀನತೆ, ಡಿಫ್ಯೂಸಾಗುತ್ತೆ ನಿಧಾನ
ಉಕ್ಕಿ ಚೆಲ್ಲುತ್ತೆ.
ಆ ನಿಲುಗಡೆಯಿಲ್ಲದ ನಿಲ್ದಾಣದಲಿ ನಮ್ಮ ನಿಲ್ಲದೋಡುವ ರೈಲಿಗೆ
ಋಜುವಾದ ಹಸಿರುನಿಶಾನೆ ಬೀಸುವ ಸ್ಟೇಷನ್ಮಾಸ್ತರ
ಹೀಗೆ ನಮಗೆ ಕೋಳಿ ಕೂಗಿಯೇ ಬೆಳಗು ನಿಜದಲಿ
ಎಂದುಬಿಟ್ಟ ರೈಲಿಗೆ ಇಲಿಗಳ ಹಾದಿಹಿಡಿದೊಂದು ಇಣಚಿಯೂ ಬಂದು
ನಿಂದಲ್ಲಿ ಬಾಗಿಲವರೆಗೆ ಹೋದರೂ, ಬೋಗಿದಾಟದು.
ಏನಿದಾಟವು?
ಸೀಮೆಗಳು ಆಕ್ಸಿಡೆಂಟಲೇ ಆದರೂ ಯಾವತ್ತು, ಕಷ್ಟವೇ,
ಕಾಸ್ಟವೇ ಎನುವ ಸೀಮೋಲ್ಲಂಘನಯಾನವು.
ಅಲ್ಲಿ ತುದಿ ದಿಗಂತದಿ ಹರಳುಗಟ್ಟಿದ ಘನಸಮುದ್ರದಲೊಂದೆಡೆ
ಸೆಲೆಯೊಡೆವ ಕಾಚಿದರುಣಮಧ್ಯಗವಿದಂತಃಸ್ಥಿತಿ
-ಗತಿ
ದಕ್ಕಿಸಿಕೊಳ್ಳುವಾಟಕ್ಕೆ ಓಂ ಸ್ವಸ್ತಿ.
ಅಥವಾ,
ಪ್ರಕೃತಿ-ಪುರುಷನಂತ ಸಿಮೆಟ್ರಿ
ಬ್ರೇಕಿಂಗ್ನಲ್ಲಿ ವೈಲೇಟಾದ ಚಾರ್ಜ-ಪಾರಿಟಿ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.
------------------------------------------------
ಈಗ್ಗೆ ನಾಲ್ಕೈದು ವರ್ಷಗಳಿಂದ ಬರೆಯುತ್ತ ಬಂದಿದ್ದು ..,
ಇನ್ನೂ ಮುಂದುವರಿಯಲಿಕ್ಕಿರುವಂಥದ್ದು.
ಶುಕ್ರವಾರ, ಮೇ 15, 2015
ಅರ್ಥವನ್ನೋದು...
ಭಾನುವಾರ, ಡಿಸೆಂಬರ್ 7, 2014
ಈ ತಿರುವಿನಿಂದ ಹೊರಡುವವು / Is Mod Se Jaate Hain
ತುಸು ಭಾರನಡೆ ರಸ್ತೆಗಳು
ತುಸು ತೀವ್ರನಡೆ ಹಾದಿಗಳು
ಕಲ್ಲಿನ ಹವೇಲಿಗಳಿಗೆ
ಗಾಜಿನ ಮನೆಗಳಲಿ
ತುಣುಕುಗಳ ಗೂಡಿನವರೆಗೆ
ಈ ತಿರುವಿನಿಂದ ಹೊರಡುವುದು
ಬಿರುಗಾಳಿಯಂತೆದ್ದು ಹಾದಿಯೊಂದು ಹಾಯುವುದು
ನಸುನಾಚಿದಂತ್ಯಾವುದೋ ಪದಗಳಿಂದ ಹೊಮ್ಮುವುದು
ಈ ರೇಶಿಮೆಹಾದಿಗಳಲಿ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು
ದೂರದಿಂದೊಂದು ಸಾರುವುದು
ಬಳಿಸಾರಿಯು ಹೊರಳುವುದು
ಒಬ್ಬಂಟಿಯೊಂದು ಹಾದಿಯು
ನಿಲಲಾರದು ಚಲಿಸಲೂ ಆರದು
ಇದ ಯೋಚಿಸಿ ಕುಳಿತಿರುವೆ
ಹಾದಿಯೊಂದು ಅದೂ ಇದ್ದೀತು
ನಿನ್ನ ವರೆಗೆ ತಲುಪುವಂತದ್ದು
ಈ ತಿರುವಿನಿಂದ ಹೊರಡುವುದು
---------------------
ಗುರುವಾರ, ಏಪ್ರಿಲ್ 18, 2013
ಆಧುನಿಕ ಕವಿಕಾವ್ಯಕ್ಲೀಷೆಗಳು
ತಳೆಯದ ಖಾಚಿತ್ಯ ವರ್ತನೆ
ಯೊಳಾವರ್ತವರ್ತವರ್ತನಿಸಿ
ಬಂದು ಅನಾಮತ್ತು ಡಬ್ಬಲೊಂದು
ಡಬ್ಬಲು ಜೀರೋನೆತ್ತಿ ತಾನೇ
ತಾನಾಗಿ ಕ್ಲಾಸಿಕ್ಕು
ಹಾವಾಡಿಸುತ್ತ ಸುತ್ತ ಸುತ್ತಲೂ ಸಿಕ್ಕು
ಸಿಕ್ಕಾಗಿ ಕೂತಂತೆ ಕೆಲಸವಿಲ್ಲ ಕಾರ್ಯವಿಲ್ಲೆಂಬಂತೆ ಸಿಕ್ಕು
ಬಿಡಿಸೋ ವಿದ್ಯೆ ಜನ್ಮಜಾತದಂತಾಗಿ ಮೆದುಳಿಗೆ
ಸ್ಕ್ರೀನುಸೇವರಿನಂತೆ ಮೇಲ್ನೋಟಕ್ಕೆ
ಸಿಗದಂತೆ ಬ್ಯಾಗ್ರೌಂಡಲ್ಲಿ ಹರಿಯುತ್ತೆ ಅಖಂಡ
ಲಹರಿಯೊಂದು ಮತ್ತೆ ಮುಂದು
ವರಿಯುತ್ತೆ (ಹೀಗೆಯಾದರೆ ನಾ
ಫಿಜಿಕ್ಸು ಮಾಡೋದೆಂದಿಗೆ ಮತ್ತೆಯಂತ ಚಿಂತೆ ಬೇರೆ
ಯೆಳೆಯಲ್ಲಿ ಸಮಾಂತರ ಹರಿ ಹರಿಯುತ್ತ ಕ್ಷೀಣ
ಆದ್ಯತೆಗಳಲ್ಲಿ) ಹಾಳಾಗಲಿ ಈ ಒಂದು
ಲಯ ವಿನ್ಯಾಸ ಛಂದಗಳನ್ನೋದದೇಕೆ ಹಾಗೆ
ತಲೆ ಸೆಳೆಯುತ್ತದಂತ
ಸಿಂಟ್ಯಾಕ್ಟಿಕಲಿ ಭಂಗಿಸಿದರೂ ಶನಿಪಿಶಾಚಿ
ಯಂತೆ ಯಂತದ್ದೋ ಪ್ಯಾಟ್ಟರ್ನು ಪುನರಾವರ್ತ
ಸಿಮ್ಯಾಂಟೆಕ್ಕಿನ ಮಟ್ಟದಲಿ ಹಂಗಿಸುತ್ತೆ ಮತ್ತದೇ
ಧಾಟಿಯ ಸಾವಿರ ಕಾವ್ಯವೆಂದು ಬರೆಸುತ್ತೆ ಅಟೊಮೆಟಿಕಲಿ
ಕರಣ ಹಾವಾಡಿಸಲು ಪ್ರವೃತ್ತಿಸುತ್ತೆ ಹಾಗೆ
ಬರೆದಿದ್ದರ ವಿನ್ಯಾಸ ಮುಚ್ಚಿಹಾಕಲು ಅದೇ
ಹಳೇಯ ಬೌದ್ಧಿಕ ಕಸರತ್ತಿನ ಮಾರ್ಪಾಡುಗಳು ಮತ್ತೆ
ಇಷ್ಟಕ್ಕೂ, ಹೇ, ಆಧುನಿಕ
ಕಾವ್ಯವೆಂದರೇನು? ಗದ್ಯವೊಂದು ಕೂಡ ಕಾವ್ಯ
ವಂತನಿಸೋವಲ್ಲಿಗೆ, ಬರೆದ ಕವನಗಳು ವಾಚ್ಯ
ಗದ್ಯವೆನಿಸೋ ಹೊತ್ತಿಗೆ? ಬರೀತ ಮೂಲ
ಧಾತುಗಳ ಕರ್ಮಗಳ ಮೆರೆದು
ವಿಭಕ್ತಿ ಕರ್ತೃ ಎಲ್ಲ
ಮರೆದು ಸಮಾಸ ನಿಷ್ಪತ್ತಿ ಸಂಧಿ
ವಿಗ್ರಹಗಳ ಅಡ್ಡ
ಗೋಡೆ ಮೇಲಿಟ್ಟ ಉದ್ದೇಶಪೂರಿತ ಮಬ್ಬುತನಕ್ಕೆ
ಅಮೂರ್ತ ಬಹುಅರ್ಥಪೀಡಿತವಂತ ಸಂ
ಭ್ರಮಿಸಿ ತನಗೇ ಗೊತ್ತಿಲ್ಲದ ಪ್ರಶ್ನೆ
ಮೂಡಿದಂತಾಗುವಲ್ಲಿ ಬಾಲರ ಪ್ರತಿಭೆಯಲ್ಲಿ ಉತ್ತರ
ತರಿಸೋ ಭೂಪ, ಕಂತ್ರಿ, ಪ್ರಾಧ್ಯಾಪಕ-
ಬುದ್ಧಿ! ಶಡ್ಡೌನಾಗಬಾರದೇ ಸಡನ್ನಾಗಿ
ಕರೆಂಟು ಕಟ್ಟಾಗಿ...
....._____.....
ಸೋಮವಾರ, ಏಪ್ರಿಲ್ 8, 2013
ಎದುರುಬದರು
ಒಬ್ಬೊಬ್ಬರ ತಲೇಲೂ ಒಂದೊಂದು ಥಿಯರಿ ಇರುತ್ತೆ;
ಈ ಜಗತ್ತಲ್ಲಿ ಅದಕ್ಕೆ ಪುರಾವೆ ಹುಡುಕ್ತಿರ್ತೀವಿ...
(ಚಿದಂಬರ ರಹಸ್ಯ)
----------------------------------------------------------------------------
ಗುರುಗಳೇ,
ಒಂದು ಅರೆಪಾರದರ್ಶಕ ನಿಲುವು-
ಗನ್ನಡಿಯ ಇಬ್ಬದಿಗಳಲ್ಲಿ
ಕೂತಿದ್ದೇವೆ ಇಬ್ಬರೂ
-ಎದುರುಬದರಾಗಿ ಒಬ್ಬರನಿನ್ನೊಬ್ಬರು
ಒಂದು ಬಿಂಬ, ಮತ್ತಿನ್ನೊಂದರ ಪ್ರತಿಬಿಂಬ
ಒಂದರಮೇಲಿನ್ನೊಂದು ಮಜವಾಗಿ ಬಿದ್ದು
ದ್ವಂದ್ವವೆಂಬವುಗಳ ಮಧ್ಯೆ ಹೀಗೆ
ಗೆರೆ ಮಾಸಲು, ತೆರೆ ಪೋರಸ್ಸು
ತೆಳ್ಳಗೆ ತುಸುವೇ ಪಾದರಸ ಬಳಿದ
ಗಾಜಾಗಿ ಅರ್ಧಂಬರ್ಧಗನ್ನಡಿ
ಅಸಾಧ್ಯ ಕುಚೋದ್ಯಗಾರನಾಗಿದೆ ಬಿಡಿ.
ಇತ್ತಲಾಗಿ
ಹದಿ ಈಗಷ್ಟೇ ಹರಿದಿದೆ
ಉಕ್ಕಿ ಬೀಳುತ್ತ ಬೆದೆ
ನಿದ್ದೆಯಲ್ಲೂ ಎವೆ ಬಿಟ್ಟಿವೆ
ಕನ್ನಡಿಯೆದುರು ತಂದು, ತೀಡಿ
ತಿದ್ದಿಕೊಳ್ಳುವ ತವಕ
ನನ್ನ ನೋಡಿಕೊಂಡಷ್ಟೇ ನಿಮ್ಮ ಕಡೆಯೂ;
ಬೆಡಗಿಗಷ್ಟೇ ಅಲ್ಲದೇ ಲಕ್ಷ್ಯ ಪೂರ್ಣತೆಯೆಡೆಯು.
ಅತ್ತಲಾಗಿ
ನೋಡುವಲ್ಲಿ ನನ್ನ ಪ್ರಸ್ತುತ
ವಾಗುತ್ತಿದೆಯಲ್ಲಿ ನಿಮ್ಮದೇ ಗತ
ನಿಂಭೂತೋ ನಂಭವಿಷ್ಯತ್ತಾ?
ಅಡ್ದಗೋಡೆಯ ಮೇಲೆ ದೀಪವಿಟ್ಟವರು
ಗಾಜ ಕಿಟಕಿಯಿಟ್ಟು ಕೆಳಗೆ ಬಿಂಬಕಾಣುವವರು
ಬಣ್ಣಬಣ್ಣದಿ ಪ್ರತಿ ಬಿಂಬಿಸ ಹೊರಟವರು
ಟೀಕೆಟಿಪ್ಪಣಿಸಿ ಅಡ್ವಯಿಸು ಬೀರಬೇಕಾದವರು
ವಿವರದರ್ಧದಲಿ ಭೂತ ಭಾಧೆಯಾದಂತೆ
ತಡವುತ್ತೀರಿ ತಲೆ ಕೊಡವುತ್ತೀರಿ.
ಕಣ್ತುಂಬ ತುಂಬಿಕೊಂಡು ಬಾಯ್ತುಂಬ ಬೈವವರು
ಒಂದು ನಿರೀಕ್ಷಣಾಜಾಮೀನಿಗೆಂಬಂತೆ ಹೀಗೆ ತಾವನುಸರಿಸುವ
ಸ್ವನಿರಾಕರಣೆಯಲ್ಲಿ ಮಾತ್ರ ನೋಡಿ ನನಗೆ
ಕಂಡು ಬಿಟ್ಟಂತಾಯ್ತು ಥೇಟು ನನ್ನದೇ ಪ್ರತಿಬಿಂಬ!
ಬುಧವಾರ, ಅಕ್ಟೋಬರ್ 31, 2012
ನಾಸ್ಟಾಲ್ಜಿಯಾ
ಅವಳ
ನನ್ನವಳಾಗಿಸಲಾಗದ
ಸತ್ ಯಾ ದುರುದ್ದೇಶಗಳ
ನಿರುದ್ದಿಶ ಸರಾಸರಿ
ಮೇಲ್ತೆಗೆದು
ನನ್ನ ತುಂಡರಿಸಿದ
ಸಾಲ್ಗಳ
-ಅವಳು ತಾಕುವ ಸ್ವರಗಳ
ಮಧ್ಯೆ ಹುಗಿದರೂ ಅನಾಹತ್ತಾಗಿ
ಭ್ರೂ ಕಂಪಿಸಿ ಅನಾಮತ್ತಾಗಿ
ಬಿರಿದೆದೆ ಸೀಳಿ ಕುದಿಯಾಳದಿಂ
-ದೆದ್ದು ಸ್ಪುರಿಸುತ್ತಾಳೆಂಬುದು
ಸರಾಸರಿಗಳಿಗೊಗ್ಗದಾಚೆಯ ಬದುಕಿನ
ಯಾದೃಚ್ಛಿಕ ನಡೆಗಳಾಕೆಯ
ಭಯಂಕರ ಕಟುಮಧುರ
ನಾಸ್ಟಾಲ್ಜಿಯಾ
------------------------------------------------------------------------------------------------------------------
...ನನ್ನವಳಾಗಲಿಲ್ಲ,
--ಅಥವಾ ನನ್ನವಳಾಗಿಸಲಾಗಲಿಲ್ಲ.
--ನನ್ನ ಕೈಲೂ .., ಮತ್ತೆ ಅವಳ ಕೈಲೂ ಸಹಾ.
ಯಾಕೆ ಈ ವೈಫಲ್ಯ?? --ಅಂತ ಕೇಳೋಕೆ ಹೊರಟರೆ, "ನಿಜಕ್ಕೂ ವೈಫಲ್ಯವೇಯಾ?" ಅಂತಾಗಿ...
ಯಾಕೆಂದರೆ -- ಒಳ್ಳೆಯದೋ ಕೆಟ್ಟದ್ದೋ -- ಆಗಿಸೋ ದಿಶೆಯಲ್ಲಿ ಒಂದು ಉದ್ದೇಶ ಅಂತ ಏನಾದರೂ ನಿಜಕ್ಕೂ ಇತ್ತಾ?
--ಅನ್ನೋದೂ ಸಹಾ ಸ್ಪಷ್ಟವಾಗದ ನಿರುದ್ದಿಶದಲ್ಲಿ ಸಮಾಧಾನಪಡೋಣವಾಗ್ತದೆ..
--ಸಮಾಧಾನವಾಗ್ಲೀಂತ ಹೊರದಾರಿಯಾಗಿ
ಕಾವ್ಯದ ಕಡೆ ಹೊರಳುವಲ್ಲಿ -- ಹೊರಳಿದಲ್ಲಿ
--ಹಿಮ್ಮರಳಿ ನೋಡುವಲ್ಲಿ, ಈಗ್ಲೂ.., ಅಂದಿಂದಿನ ನನ್ನ ಕಾವ್ಯಗಳಲ್ಲೂ ಅವಳ ಗಾಯಕಿಯಲ್ಲೂ ಅವ್ಯಕ್ತ ಅಸ್ಪಷ್ಟ ನಾಸ್ಟಾಲ್ಜಿಯಾ...
ನಿಜವೇನೋ.., ಒಬ್ಬ ಸೃಷ್ಟಿಶೀಲ ಮನುಷ್ಯ.., ಆತನಿಗೆ ಒಂದಿಷ್ಟು ಅನುಭವವಾದಮೇಲೆ, ಒಂದಿಷ್ಟು ಪ್ರಬುದ್ಧತೆ ಬಂದಮೇಲೆ, ಅವನ ಸಂಗೀತ-ಸಾಹಿತ್ಯೇತ್ಯಾದಿ 'ಕಲೆ'ಗಳಿಗೆ ಈ ವ್ಯಕ್ತಿಗತ ಹಿನ್ನೆಲೆಯಿಟ್ಟೂ ನೋಡ್ಬೇಕಾಗ್ತದೆ...
--ಅಷ್ಟರ ಮಟ್ಟಿನ ವ್ಯಕ್ತಿನಿಷ್ಟತೆ ಈ'ಅಸ್ಪಷ್ಟಸೃಷ್ಟಿ'ಗಳಲ್ಲಿ ...
ಬಿ
ಡಿ
ಬಿ ಡಿ
ಬಿಡಿ ಬಿಡಿ
ಬಿಡಿ ಬಿ ಡಿ ಬಿಡಿ..ಸಿಕೊಂಬಾರದೇ!
--ಬಿಡಿಸಿಕೊಂಡೂ ಬರೀಬೇಕು,
--ಬಿಡಿಸಿಕೊಂಡೇ ಓದ್ಬೇಕು.
--ಬಿಡಿಸಿಕೊಂಡೂ ಹಾಡ್ಬೇಕು,
--ಬಿಡಿಸಿಯೇ ಕೇಳ್ಬೇಕು...