Thursday, April 18, 2013

ಆಧುನಿಕ ಕವಿಕಾವ್ಯಕ್ಲೀಷೆಗಳು

ವರ್ಷಗಳುರುಳಿದಂತೆ ತಲೆ
ತಳೆಯದ ಖಾಚಿತ್ಯ ವರ್ತನೆ
ಯೊಳಾವರ್ತವರ್ತವರ್ತನಿಸಿ
ಬಂದು ಅನಾಮತ್ತು ಡಬ್ಬಲೊಂದು
ಡಬ್ಬಲು ಜೀರೋನೆತ್ತಿ ತಾನೇ
ತಾನಾಗಿ ಕ್ಲಾಸಿಕ್ಕು
ಹಾವಾಡಿಸುತ್ತ ಸುತ್ತ ಸುತ್ತಲೂ ಸಿಕ್ಕು
ಸಿಕ್ಕಾಗಿ ಕೂತಂತೆ ಕೆಲಸವಿಲ್ಲ ಕಾರ್ಯವಿಲ್ಲೆಂಬಂತೆ ಸಿಕ್ಕು
ಬಿಡಿಸೋ ವಿದ್ಯೆ ಜನ್ಮಜಾತದಂತಾಗಿ ಮೆದುಳಿಗೆ
ಸ್ಕ್ರೀನುಸೇವರಿನಂತೆ ಮೇಲ್ನೋಟಕ್ಕೆ
ಸಿಗದಂತೆ ಬ್ಯಾಗ್ರೌಂಡಲ್ಲಿ ಹರಿಯುತ್ತೆ ಅಖಂಡ
ಲಹರಿಯೊಂದು ಮತ್ತೆ ಮುಂದು
ವರಿಯುತ್ತೆ (ಹೀಗೆಯಾದರೆ ನಾ
ಫಿಜಿಕ್ಸು ಮಾಡೋದೆಂದಿಗೆ ಮತ್ತೆಯಂತ ಚಿಂತೆ ಬೇರೆ
ಯೆಳೆಯಲ್ಲಿ ಸಮಾಂತರ ಹರಿ ಹರಿಯುತ್ತ ಕ್ಷೀಣ
ಆದ್ಯತೆಗಳಲ್ಲಿ) ಹಾಳಾಗಲಿ ಈ ಒಂದು
ಲಯ ವಿನ್ಯಾಸ ಛಂದಗಳನ್ನೋದದೇಕೆ ಹಾಗೆ
ತಲೆ ಸೆಳೆಯುತ್ತದಂತ
ಸಿಂಟ್ಯಾಕ್ಟಿಕಲಿ ಭಂಗಿಸಿದರೂ ಶನಿಪಿಶಾಚಿ
ಯಂತೆ ಯಂತದ್ದೋ ಪ್ಯಾಟ್ಟರ್ನು ಪುನರಾವರ್ತ
ಸಿಮ್ಯಾಂಟೆಕ್ಕಿನ ಮಟ್ಟದಲಿ ಹಂಗಿಸುತ್ತೆ ಮತ್ತದೇ
ಧಾಟಿಯ ಸಾವಿರ ಕಾವ್ಯವೆಂದು ಬರೆಸುತ್ತೆ ಅಟೊಮೆಟಿಕಲಿ
ಕರಣ ಹಾವಾಡಿಸಲು ಪ್ರವೃತ್ತಿಸುತ್ತೆ ಹಾಗೆ
ಬರೆದಿದ್ದರ ವಿನ್ಯಾಸ ಮುಚ್ಚಿಹಾಕಲು ಅದೇ
ಹಳೇಯ ಬೌದ್ಧಿಕ ಕಸರತ್ತಿನ ಮಾರ್ಪಾಡುಗಳು ಮತ್ತೆ
ಇಷ್ಟಕ್ಕೂ, ಹೇ, ಆಧುನಿಕ
ಕಾವ್ಯವೆಂದರೇನು? ಗದ್ಯವೊಂದು ಕೂಡ ಕಾವ್ಯ
ವಂತನಿಸೋವಲ್ಲಿಗೆ, ಬರೆದ ಕವನಗಳು ವಾಚ್ಯ
ಗದ್ಯವೆನಿಸೋ ಹೊತ್ತಿಗೆ? ಬರೀತ ಮೂಲ
ಧಾತುಗಳ ಕರ್ಮಗಳ ಮೆರೆದು
ವಿಭಕ್ತಿ ಕರ್ತೃ ಎಲ್ಲ
ಮರೆದು ಸಮಾಸ ನಿಷ್ಪತ್ತಿ ಸಂಧಿ
ವಿಗ್ರಹಗಳ ಅಡ್ಡ
ಗೋಡೆ ಮೇಲಿಟ್ಟ ಉದ್ದೇಶಪೂರಿತ ಮಬ್ಬುತನಕ್ಕೆ
ಅಮೂರ್ತ ಬಹುಅರ್ಥಪೀಡಿತವಂತ ಸಂ
ಭ್ರಮಿಸಿ ತನಗೇ ಗೊತ್ತಿಲ್ಲದ ಪ್ರಶ್ನೆ
ಮೂಡಿದಂತಾಗುವಲ್ಲಿ ಬಾಲರ ಪ್ರತಿಭೆಯಲ್ಲಿ ಉತ್ತರ
ತರಿಸೋ ಭೂಪ, ಕಂತ್ರಿ, ಪ್ರಾಧ್ಯಾಪಕ-
ಬುದ್ಧಿ! ಶಡ್ಡೌನಾಗಬಾರದೇ ಸಡನ್ನಾಗಿ
ಕರೆಂಟು ಕಟ್ಟಾಗಿ...
....._____.....

Monday, April 8, 2013

ಎದುರುಬದರು

----------------------------------------------------------------------------
ಒಬ್ಬೊಬ್ಬರ ತಲೇಲೂ ಒಂದೊಂದು ಥಿಯರಿ ಇರುತ್ತೆ;
          ಈ ಜಗತ್ತಲ್ಲಿ ಅದಕ್ಕೆ ಪುರಾವೆ ಹುಡುಕ್ತಿರ್ತೀವಿ...

                                                       (ಚಿದಂಬರ ರಹಸ್ಯ)
----------------------------------------------------------------------------


ಗುರುಗಳೇ,

ಒಂದು ಅರೆಪಾರದರ್ಶಕ ನಿಲುವು-
ಗನ್ನಡಿಯ ಇಬ್ಬದಿಗಳಲ್ಲಿ
ಕೂತಿದ್ದೇವೆ ಇಬ್ಬರೂ
-ಎದುರುಬದರಾಗಿ ಒಬ್ಬರನಿನ್ನೊಬ್ಬರು

ಒಂದು ಬಿಂಬ, ಮತ್ತಿನ್ನೊಂದರ ಪ್ರತಿಬಿಂಬ
ಒಂದರಮೇಲಿನ್ನೊಂದು ಮಜವಾಗಿ ಬಿದ್ದು
ದ್ವಂದ್ವವೆಂಬವುಗಳ ಮಧ್ಯೆ ಹೀಗೆ
ಗೆರೆ ಮಾಸಲು, ತೆರೆ ಪೋರಸ್ಸು

ತೆಳ್ಳಗೆ ತುಸುವೇ ಪಾದರಸ ಬಳಿದ
ಗಾಜಾಗಿ ಅರ್ಧಂಬರ್ಧಗನ್ನಡಿ
ಅಸಾಧ್ಯ ಕುಚೋದ್ಯಗಾರನಾಗಿದೆ ಬಿಡಿ.

ಇತ್ತಲಾಗಿ
ಹದಿ ಈಗಷ್ಟೇ ಹರಿದಿದೆ
ಉಕ್ಕಿ ಬೀಳುತ್ತ ಬೆದೆ
ನಿದ್ದೆಯಲ್ಲೂ ಎವೆ ಬಿಟ್ಟಿವೆ
ಕನ್ನಡಿಯೆದುರು ತಂದು, ತೀಡಿ
ತಿದ್ದಿಕೊಳ್ಳುವ ತವಕ
ನನ್ನ ನೋಡಿಕೊಂಡಷ್ಟೇ ನಿಮ್ಮ ಕಡೆಯೂ;
ಬೆಡಗಿಗಷ್ಟೇ ಅಲ್ಲದೇ ಲಕ್ಷ್ಯ ಪೂರ್ಣತೆಯೆಡೆಯು.

ಅತ್ತಲಾಗಿ
ನೋಡುವಲ್ಲಿ ನನ್ನ ಪ್ರಸ್ತುತ
ವಾಗುತ್ತಿದೆಯಲ್ಲಿ ನಿಮ್ಮದೇ ಗತ
ನಿಂಭೂತೋ ನಂಭವಿಷ್ಯತ್ತಾ?

ಅಡ್ದಗೋಡೆಯ ಮೇಲೆ ದೀಪವಿಟ್ಟವರು
ಗಾಜ ಕಿಟಕಿಯಿಟ್ಟು ಕೆಳಗೆ ಬಿಂಬಕಾಣುವವರು
ಬಣ್ಣಬಣ್ಣದಿ ಪ್ರತಿ ಬಿಂಬಿಸ ಹೊರಟವರು
ಟೀಕೆಟಿಪ್ಪಣಿಸಿ ಅಡ್ವಯಿಸು ಬೀರಬೇಕಾದವರು
ವಿವರದರ್ಧದಲಿ ಭೂತ ಭಾಧೆಯಾದಂತೆ
ತಡವುತ್ತೀರಿ ತಲೆ ಕೊಡವುತ್ತೀರಿ.

ಕಣ್ತುಂಬ ತುಂಬಿಕೊಂಡು ಬಾಯ್ತುಂಬ ಬೈವವರು
ಒಂದು ನಿರೀಕ್ಷಣಾಜಾಮೀನಿಗೆಂಬಂತೆ ಹೀಗೆ ತಾವನುಸರಿಸುವ
ಸ್ವನಿರಾಕರಣೆಯಲ್ಲಿ ಮಾತ್ರ ನೋಡಿ ನನಗೆ
ಕಂಡು ಬಿಟ್ಟಂತಾಯ್ತು ಥೇಟು ನನ್ನದೇ ಪ್ರತಿಬಿಂಬ!

Saturday, March 30, 2013

ಶೇಕ್ಸಪಿಯರೀಯ ಹುಳಿನರಿಯು

ಈಸ್ಟೂ ಬೂಸ್ಟೂ
ಅಥವಾ
ಶೇಕ್ಸಪಿಯರೀಯ  ಹುಳಿನರಿಯು



ಒಂದು ರಾತ್ರಿಯೆನ್ನ  ರೂಮೊಳಗೆಯೇ 
ಕೆಲಸದ ಚಾಪೆಯ ಮೇಲೆ ಹಾರಿಯೂ ಸಿಗದ 
ದ್ರಾಕ್ಷಿ ಹುಳಿಯೆಂದು ಹೊರಟ ನರಿ ಸಿಕ್ಕಿತು
ಅಚಾನಕ್ಕನೆಯಾಗಿಯೆಂಬಂತೆ 

ಅಲ್ಲಾ, ಈಗ ಹುಳಿಯೆಂದದ್ದು ಯಾರಿಗೆ ಕೇಳಿಸಲಂತ ?
-ಅಂತ ಕೇಳಿಕೊಂಡಂತೆ ನರಿ ಸಿಲುಕಿಕೊಂಡಂತಾಯಿತು. 

ಸ್ವಗತವೇ ಇರಲಿಕ್ಕೆ ಬೇಕು : 
ಶೇಕ್ಸಪಿಯರನ ಎಳೆ ತಂದೊಮ್ಮೆ ಕೇಳಬೇಕು... 

ನರಿ ಅಂತಂದರೇನು ಸುಮ್ಮನೆಯೇ ನರಿಯಾಯಿತೇ?
ನಡೆನುಡಿಯೆಲ್ಲ ಹುಳಿಹುಳಿಯಷ್ಟೇ ಅಲ್ಲ,
ತನುಮನವೆಲ್ಲವೂ ಸಹಾ  ಹುಣಸೇ ಹಣ್ಣುಹಣ್ಣಾಗಿ ನರೆತು
ಒಳಹೊರಗುಗಳು ಹೀಗೆ ಬೆರೆತು ಬಂದಿರಬೇಕು. 

ಈಗ, ನಿತ್ಯದಂತೆ ಹೊರಟಾಗ ದ್ರಾಕ್ಷಿ ಕಂಡಿರಬೇಕು,
ನೇರ ನಿಲುಕಿಗೆ ಸಿಗದಂತೆ ತುಸು ಎತ್ತರದಲ್ಲಿ ,
ಗೊಂಚಲು ಗೊಂಚಲಾಗಿ... 
ಹಾರಿ ಅಡ್ಜಸ್ಟು ಮಾಡಬಹುದೇನೊ..,
"ಏಕೆ ಮಾಡಬೇಕು??"
-ಅನ್ನೋದನ್ನ ಮೊದಲು ಕೇಳಬೇಕು.

"ಹಾರಿ ಕಿತ್ತು ಚಪ್ಪರಿಸೋದು ರಮ್ಯ"
ಕವಿಯಾಗಿ ನೋಡಿದರೆ, ಮೇಲಾಗಿ,
ಫ್ರಕ್ಟೋಸು ಪೋಷಕಾಂಶಗಳಿರುವಲ್ಲಿಗೆ ಒಂದು 
ಹೊತ್ತಿಗಾಗುತ್ತೆಯಾಗಿ ಈ "ದ್ರಾಕ್ಷ 
ರಸಕ್ಕೆ ಜಿಗಿದು ಜಂಪಿಸಿ 
ಟ್ರೈ  ಮಾಡೋದು ಬಡನರಿಯಾಜನ್ಮಸಿದ್ಧ ಹಕ್ಕು!"
- ನೆಹರೂ-ಸಮಾಜವಾದದರಸುತ್ತಿಗೆ ಹಾಗಂದಿರೋದು.

ಹಾಗೆ ಸಂಕಲ್ಪಮಹಾತ್ಮ್ಯವ ವಿವರಿಸಿ  
ಹಾರುವುದು,
ಹಾರಿ ಹಾರಿ ಬಿದ್ದು ಬಿದ್ದೂ  ಸಿಗದಿದ್ದರೆ 
ದೂರುವುದು:

"ಹಾರಿ ಬಿದ್ದೂ ದೊರಕದ್ದು 
ಹುಳಿಯಿದ್ದಿರಲಿಕ್ಕೇ  ಬೇಕು;
ನಮ್ಮೊಳ್ಳೆಯದಕ್ಕಾಗಿಯೇ ಹಾಗೊಂದು 
ಮ್ಯಾಚು ಮುಂಚೆಯೇ ಫಿಕ್ಸಾಗಿರಬೇಕು."

-ದೂರಲೇ ಬೇಕು ಕೃತಿ  ಸೋತಂತೆ
ಕಾಣುವೆಡೆಯೆಲ್ಲಾ ಇನ್ಯಾವುದೋ ಅಪರ
ವನ್ನಾರೋಪಿಸಬೇಕು ಮಹಾನ್ ಸನಾತನಿಯಂತೆ
ಪ್ರಲಾಪಿಸಬೇಕು ಸಕಲಾನಿಷ್ಟಕಾರಕ ಶನಿಯೆಂದೆಂಬ
ಪ್ರಕಲ್ಪವ, ಯಾರು ಕೇಳದಿದ್ದರೂ 
ತನಗೆ ಕೇಳಿಸುವಂತೆ. 

ನರಿಯೆಂಬುದು ಹಾಗೆ ಈಸ್ಟು 
ಬೆರೆತುಬಂದು ಹುದುಗಿದ
ಹುಳಿಹುಳಿಯಾದ ಹಿಟ್ಟನ್ನು 
ಬೂಸ್ಟು  ಬೆಳೆಯೋದಕ್ಕೆ ಮುನ್ನವೇ ತೆಗೆದು 
ಪದರು ಪದರಾಗಿ ಬೇಕಿಸಿದ 
ಲೇಯರ್ಡು  ಕೇಕು.