ಅವಳಿದ್ದಳು
ತನ್ನದಲ್ಲದ ಸಿನೇಮಾದಲ್ಲಿ
ಎರಡನೇ ಯಾ ಮೂರನೇ
ನಾಯಿಕೆಯಂತೆ
ತಾನೇ ತಾನಾಗಿ
ತನ್ನದಾಗದ ಕಥೆಯಂಚು
ಅಂಚಿಗೆ ಇಂಚಿಂಚು ಸಿಕ್ಕೂ
ಸಿಗದ ಆಮುಂಚಿನ
ಕಥನಕ್ರಮದ ನಾಯಕನ
ಕಾದುನಿಂದ ಶಬರಿಯಾಗಿ
ಬರಿಯಾಗಿ
ನಿವಾಳಿಸಲಂತೂ ಆಗದ
ದೃಷ್ಟಿ ಯಾಗಿ
ಬೆಳಸಲೂ ಆಗದ ಕರ್ತೃವಿನ
ಅಸಹಾಯಕತಾ ನಿರೂಪವಾಗಿ
ಇನ್ನೂ ಏನೇನೋ ಆದರೂ ತಾನು
ಮಾತ್ರಾ ಆಗದಾಕೆಯಂತೆ...
ಇಂತಿಪ್ಪಾಕೆಯ ಚಿತ್ರದಲ್ಲಿ ಚಲನೆ
ತರುವುದಾದರದು ಆನಂದ
ವರ್ಧನನ ಕಾವ್ಯಮೀಮಾಂಸಾ ಪ್ರಕಾರ ಅಸಂಭವ
ದೋಷವಾದೀತಾದರೂ ತರೋಣವೆಂಬ
ಹುಕಿಗೆ ನವೋದಯವಾಗಿ ಅಸಂಗತ
ಅತಿವಾಸ್ತವ ವಿಪರೀತಗಳಾಗಿ ನವ್ಯ
ಬಂಡಾಯಗಳಾದವು.
(ನವ್ಯೋತ್ತರವಾಗಿ ಹೊರಳಿ)
ಈ ರಾಮಾಯಣ ಮುಗಿದಂತಾದರೂ ಪಾತ್ರ ಮುಗಿಯದೇ
ಮಹಾಭಾರತವಾಗಿ ಕೃಷ್ಣನ ಸತ್ಯ ಭಾಮೆಯಾಗಿ
ಸಿನೇಮಾದ ಹೊಸ ಪಾರ್ಟಲ್ಲಿ ಇವಳ ಬೆಳೆಸಲೆತ್ನಿಸಿದುದು
ಹಳೆಯದಾದರೂ ಬೇರೆಯದೇ ಕಥೆಯಾಯಿತು.
ಅದೇನೇ ಇರಲಿ,
ಸಾಮಾನ್ಯದಲ್ಲಿ ನೇರ ಅಭಿ
ವ್ಯಕ್ತಿಯಾದ ಮೇಲಿಂದ
ಮೇಲೆ ನೋಡಲೊಮ್ಮೊಮ್ಮೆ
ವ್ಯಕ್ತ ಸಾಲುಗಳ ಮಧ್ಯೆ ಉಳಿದು
ಬಿಟ್ಟು ಹೋದಂತೆ ಏನೋ
ಕಂಡದ್ದರಾಚೆ ತುಸುದೂರ ದಿಗಂತದಲ್ಲೆಂಬಂತೆ
ಫೋಕಸ್ಸಿನತ್ತಿತ್ತ ಮಬ್ಬು ಮಬ್ಬಾಗಿ
ಆಗ್ಗಾಗ್ಗೆ ಅವಳು ಸುಳಿದಂತಾಗುವುದುಂಟು.
ದೇಹದಲ್ಲಿಯಾತ್ಮವೆಂಬಂತೆ ಕಾವ್ಯಸಂದೇಹ ಸಮಸ್ಯಾತ್ಮಕಳು
ಆರೋಪಸ್ವರೂಪಳು, ಅವಳಿದ್ದಳು.
(ವಿಸೂಚ್ಯೋಚನೆಯಾಗಿ :
ತುದಿಮೊದಲುಗಳಲಿ ಅವಳಾಗಿದ್ದರೂ
ಮಧ್ಯದಲ್ಲಿ ವ್ಯಕ್ತವಾಗುವ ಪರಿಯಲ್ಲಿ
ಇವಳಾದವಳನ್ನ ಇನ್ನು ತಿದ್ದದೇ
ಕೈಬಿಡುವುದುಚಿತಂ?)
-------------------------------------------------------------------------
^ಹಿಂನೆಲೆಗಳು :
Look beyond what you see,
Read between the lines,
ಮೂರ್ತ ಮೂರುತಿಗಳ ನಡುವಣ ಅಮೂರ್ತಗಳು,
ವ್ಯಕ್ತವ್ಯಕ್ತಗಳ ನಿಶಿದ್ಧ ಸಂದಿಯಲವ್ಯಕ್ತವಾದವು,
ಆಗಾಗುತ್ತ ನಡೆದ ಸಾಲುಗಳ ನಡುವೆ ಆಗದೇ ಉಳಿದು
ಬಿಟ್ಟ ಮತ್ತಿತ್ತ್ಯಾದಿಗಳು...
"मेरे गीतों में, तुझे ढूंढें जग सारा..! "
"...ಅರ್ಥದ ಸುತ್ತ ವ್ಯರ್ಥ ಪದಗಳ ವಿಪರೀತಾಲಂಕಾರ!" (ಮಮತಾ ಜಿ ಸಾಗರ?)
--------------------------------------------------------------------------
No comments:
Post a Comment