ಭಾನುವಾರ, ಡಿಸೆಂಬರ್ 30, 2012

ಕೃತಿ ಸೋಲುತ್ತ ಭಾರತ

ನೀವು ಹೇಗೂ ನಗುತ್ತಲೇ ಇರುತ್ತೀರಿ
ಉಕ್ಕಿಬರುವಂತಾಗಿದೆ ನಮಗೂ ಈಗೀಗ
ನಕ್ಕೂ ಬಿಡಬೇಕೇನೋ ಬಹುಶಃ
ಅದೃಷ್ಟವಶಾತ್
-ಹಿಂದೆ ದುರ್ ಪ್ರತ್ಯಯ
ಬೀಳುವಂತಾಗಿದೆ ಬಹುಶಃ

ಚಿಗುರು ಹೊತ್ತಲ್ಲೇ ಬಂದು ತಲೆತಿಂದತ್ಯಂತಿಕ ತಾತ್ವಿಕ
ಅಪರಿಹಾರ್ಯಗಳ ನಿಭಾಯಿಸಲಾರದೇ ಹೋದ ಸೋಲುಗಳ ಭಾರ
ತಾ ತಾಳಲಾರದೆ ಕುಸಿದಂತೆ ಕೃತಿ ಸೋಲುತ್ತ
ತನ್ನೊಳಗೆಯೇ ಭಾರತ

ನಗುವಿರೇಕಯ್ಯ,
ಮಣ್ಣಾಗುವ ಮುಂಚೆಯೇ
ಮೀಸೆಬೋಳರು ನಾವು
-ಪೂರ್ವಾನ್ವಯ
-ಕತ್ತರಿಸಿ ಜುಟ್ಟು ಜನಿವಾರ ಕಿತ್ತೆಸೆದಿರುತ್ತೇವೆ
ನಾವಿಕ-ನೌಕೆ-ನಕಾಶೆಯೆಲ್ಲ ಸಂಶಯಿಸಿ ಬರಿ
ಈಜಿಯಾತೀರ ಸೇರಿ ತೀರುತ್ತೇವೆಂದು ಇಂದಲ್ಲ ನಾಳೆ
ಇತ್ತಣ ದಂಡೆಯಲೇ ಸಾಯ ಹೊಡೆದಿದ್ದೇವೆ ಹೀಗೆ ಸಾಮದಂಡ
ಮತ್ತು ನಮ್ಮ ಚಿತ್ತಾಗಸದ ವರ್ತಮಾನದಲಿದ್ದದ್ದೇ ಈ
ಉಪಬ್ರಹ್ಮಣ ಉಡ್ಡಯನೋಲ್ಲಂಘನೇತ್ಯಾದಿ ವಿದ್ಯಮಾನ
ವೆನ್ನುವಲ್ಲಿಗೆಯಡ್ಡಡ್ಡ ಉದ್ಧಂಡ
ಬೀಳುವವರೇ ನೀವು ಭಳಿರೇ ! 


ಕುಶಲ ಕಥನಕಾರರು ನಾವು  
ಕತ್ತೆಯುಚ್ಚೆಹೊಯ್ಯುವಂದದಲಿ  ನಮ್ಮದೇ ಕಥನದಲಿ ಸೋಲುತ್ತ
ಭವ್ಯಪರಾಜಯವೆಂದು ಬಣ್ಣಿಸುವ ಸ್ವವಿಮರ್ಶಕರೂ ಕೂಡ,
ಹಾಗೆ ಸೋಲೋಪ್ಪುವರಲ್ಲ ನಾ
-ವೆನ್ನುವಲ್ಲಿಗಿನ್ನೇನಂತೆ ಬಂದುಬಿಡಿ ನಮ್ಮ ಹಿಂದುಹಿಂದಕ್ಕೆ
ಉಘೇ ಉಘೇ ಎಂದೆಂದುಗಿಯುತ್ತ...




-----------------------------------------------------------
ಸಾವಯವ ಸವ್ದು ಸಾಯ್ಲಿ , ಶಿಲ್ಪ ಎಲ್ಲಿದ್ದಾಳ್ರೀ ..!

ಬುಧವಾರ, ಅಕ್ಟೋಬರ್ 31, 2012

ನಾಸ್ಟಾಲ್ಜಿಯಾ



ಅವಳ
ನನ್ನವಳಾಗಿಸಲಾಗದ
ಸತ್ ಯಾ ದುರುದ್ದೇಶಗಳ
ನಿರುದ್ದಿಶ ಸರಾಸರಿ
ಮೇಲ್ತೆಗೆದು
ನನ್ನ ತುಂಡರಿಸಿದ
ಸಾಲ್ಗಳ
-ಅವಳು ತಾಕುವ ಸ್ವರಗಳ
ಮಧ್ಯೆ ಹುಗಿದರೂ ಅನಾಹತ್ತಾಗಿ
ಭ್ರೂ ಕಂಪಿಸಿ ಅನಾಮತ್ತಾಗಿ
ಬಿರಿದೆದೆ ಸೀಳಿ ಕುದಿಯಾಳದಿಂ
-ದೆದ್ದು ಸ್ಪುರಿಸುತ್ತಾಳೆಂಬುದು
ಸರಾಸರಿಗಳಿಗೊಗ್ಗದಾಚೆಯ ಬದುಕಿನ
ಯಾದೃಚ್ಛಿಕ ನಡೆಗಳಾಕೆಯ
ಭಯಂಕರ ಕಟುಮಧುರ
ನಾಸ್ಟಾಲ್ಜಿಯಾ




------------------------------------------------------------------------------------------------------------------



...ನನ್ನವಳಾಗಲಿಲ್ಲ,
--ಅಥವಾ ನನ್ನವಳಾಗಿಸಲಾಗಲಿಲ್ಲ.
--ನನ್ನ ಕೈಲೂ .., ಮತ್ತೆ ಅವಳ ಕೈಲೂ ಸಹಾ.
ಯಾಕೆ ಈ ವೈಫಲ್ಯ?? --ಅಂತ ಕೇಳೋಕೆ ಹೊರಟರೆ, "ನಿಜಕ್ಕೂ ವೈಫಲ್ಯವೇಯಾ?" ಅಂತಾಗಿ...
ಯಾಕೆಂದರೆ -- ಒಳ್ಳೆಯದೋ ಕೆಟ್ಟದ್ದೋ -- ಆಗಿಸೋ ದಿಶೆಯಲ್ಲಿ ಒಂದು ಉದ್ದೇಶ ಅಂತ ಏನಾದರೂ ನಿಜಕ್ಕೂ ಇತ್ತಾ?
--ಅನ್ನೋದೂ ಸಹಾ ಸ್ಪಷ್ಟವಾಗದ ನಿರುದ್ದಿಶದಲ್ಲಿ ಸಮಾಧಾನಪಡೋಣವಾಗ್ತದೆ..

--ಸಮಾಧಾನವಾಗ್ಲೀಂತ ಹೊರದಾರಿಯಾಗಿ
ಕಾವ್ಯದ ಕಡೆ ಹೊರಳುವಲ್ಲಿ -- ಹೊರಳಿದಲ್ಲಿ
--ಹಿಮ್ಮರಳಿ ನೋಡುವಲ್ಲಿ, ಈಗ್ಲೂ.., ಅಂದಿಂದಿನ ನನ್ನ ಕಾವ್ಯಗಳಲ್ಲೂ ಅವಳ ಗಾಯಕಿಯಲ್ಲೂ ಅವ್ಯಕ್ತ ಅಸ್ಪಷ್ಟ ನಾಸ್ಟಾಲ್ಜಿಯಾ...

ನಿಜವೇನೋ.., ಒಬ್ಬ ಸೃಷ್ಟಿಶೀಲ ಮನುಷ್ಯ.., ಆತನಿಗೆ ಒಂದಿಷ್ಟು ಅನುಭವವಾದಮೇಲೆ, ಒಂದಿಷ್ಟು ಪ್ರಬುದ್ಧತೆ ಬಂದಮೇಲೆ, ಅವನ ಸಂಗೀತ-ಸಾಹಿತ್ಯೇತ್ಯಾದಿ 'ಕಲೆ'ಗಳಿಗೆ ಈ ವ್ಯಕ್ತಿಗತ ಹಿನ್ನೆಲೆಯಿಟ್ಟೂ ನೋಡ್ಬೇಕಾಗ್ತದೆ...
--ಅಷ್ಟರ ಮಟ್ಟಿನ ವ್ಯಕ್ತಿನಿಷ್ಟತೆ ಈ'ಅಸ್ಪಷ್ಟಸೃಷ್ಟಿ'ಗಳಲ್ಲಿ ...

ಬಿ
ಡಿ
ಬಿ ಡಿ
ಬಿಡಿ ಬಿಡಿ
ಬಿಡಿ ಬಿ 
ಡಿ ಬಿಡಿ..ಸಿಕೊಂಬಾರದೇ!

--ಬಿಡಿಸಿಕೊಂಡೂ ಬರೀಬೇಕು,
--ಬಿಡಿಸಿಕೊಂಡೇ ಓದ್ಬೇಕು.
--ಬಿಡಿಸಿಕೊಂಡೂ ಹಾಡ್ಬೇಕು,
--ಬಿಡಿಸಿಯೇ ಕೇಳ್ಬೇಕು...



------------------------------------------------------
ಹಿಂನೆಲೆವೀಡುಗಳು:  ಯಾದೃಚ್ಛಿಕ-ನಡೆ/random-walk, ಸರಾಸರಿಗಳಿಗೊಗ್ಗದ/non-(self-)averaging ,
ಅನಾಹತ: ಸಂಗೀತದಲ್ಲಿ ಸ್ವರ-ಸ್ವರಗಳ ನಡುವಿನ ಮೌನ; ಮೂಲವಿಲ್ಲದ/ಅನಾದಿ ನಾದ; ಹೊಡೆತಗಳಿಂದ ಉತ್ಪತ್ತಿಯಾಗುವಂತಹದ್ದಲ್ಲದ ನಾದ;  non-mechanical/un-plucked/non-percussion/primordial/phantom-sound...

ಬುಧವಾರ, ಅಕ್ಟೋಬರ್ 3, 2012

ಕೇಂದ್ರದಾಚೆ / (ವ್ಯಕ್ತ)ಮಧ್ಯೆ / d-focussd ^


ಅವಳಿದ್ದಳು

ತನ್ನದಲ್ಲದ ಸಿನೇಮಾದಲ್ಲಿ
ಎರಡನೇ ಯಾ ಮೂರನೇ
ನಾಯಿಕೆಯಂತೆ
ತಾನೇ ತಾನಾಗಿ
ತನ್ನದಾಗದ ಕಥೆಯಂಚು
ಅಂಚಿಗೆ ಇಂಚಿಂಚು ಸಿಕ್ಕೂ
ಸಿಗದ ಆಮುಂಚಿನ
ಕಥನಕ್ರಮದ ನಾಯಕನ
ಕಾದುನಿಂದ ಶಬರಿಯಾಗಿ
ಬರಿಯಾಗಿ
ನಿವಾಳಿಸಲಂತೂ ಆಗದ
ದೃಷ್ಟಿ ಯಾಗಿ
ಬೆಳಸಲೂ ಆಗದ ಕರ್ತೃವಿನ
ಅಸಹಾಯಕತಾ ನಿರೂಪವಾಗಿ
ಇನ್ನೂ  ಏನೇನೋ ಆದರೂ ತಾನು
ಮಾತ್ರಾ ಆಗದಾಕೆಯಂತೆ...

ಇಂತಿಪ್ಪಾಕೆಯ ಚಿತ್ರದಲ್ಲಿ ಚಲನೆ
ತರುವುದಾದರದು ಆನಂದ
ವರ್ಧನನ ಕಾವ್ಯಮೀಮಾಂಸಾ ಪ್ರಕಾರ ಅಸಂಭವ
ದೋಷವಾದೀತಾದರೂ ತರೋಣವೆಂಬ
ಹುಕಿಗೆ ನವೋದಯವಾಗಿ ಅಸಂಗತ
ಅತಿವಾಸ್ತವ ವಿಪರೀತಗಳಾಗಿ ನವ್ಯ
ಬಂಡಾಯಗಳಾದವು.

(ನವ್ಯೋತ್ತರವಾಗಿ ಹೊರಳಿ)
ಈ ರಾಮಾಯಣ ಮುಗಿದಂತಾದರೂ ಪಾತ್ರ ಮುಗಿಯದೇ
ಮಹಾಭಾರತವಾಗಿ ಕೃಷ್ಣನ ಸತ್ಯ ಭಾಮೆಯಾಗಿ
ಸಿನೇಮಾದ ಹೊಸ ಪಾರ್ಟಲ್ಲಿ ಇವಳ ಬೆಳೆಸಲೆತ್ನಿಸಿದುದು
ಹಳೆಯದಾದರೂ ಬೇರೆಯದೇ ಕಥೆಯಾಯಿತು.

ಅದೇನೇ ಇರಲಿ,
ಸಾಮಾನ್ಯದಲ್ಲಿ ನೇರ ಅಭಿ
ವ್ಯಕ್ತಿಯಾದ ಮೇಲಿಂದ
ಮೇಲೆ ನೋಡಲೊಮ್ಮೊಮ್ಮೆ
ವ್ಯಕ್ತ ಸಾಲುಗಳ ಮಧ್ಯೆ ಉಳಿದು
ಬಿಟ್ಟು ಹೋದಂತೆ ಏನೋ
ಕಂಡದ್ದರಾಚೆ ತುಸುದೂರ ದಿಗಂತದಲ್ಲೆಂಬಂತೆ
ಫೋಕಸ್ಸಿನತ್ತಿತ್ತ ಮಬ್ಬು ಮಬ್ಬಾಗಿ
ಆಗ್ಗಾಗ್ಗೆ ಅವಳು ಸುಳಿದಂತಾಗುವುದುಂಟು.

ದೇಹದಲ್ಲಿಯಾತ್ಮವೆಂಬಂತೆ ಕಾವ್ಯಸಂದೇಹ ಸಮಸ್ಯಾತ್ಮಕಳು
ಆರೋಪಸ್ವರೂಪಳು, ಅವಳಿದ್ದಳು.

(ವಿಸೂಚ್ಯೋಚನೆಯಾಗಿ :
ತುದಿಮೊದಲುಗಳಲಿ ಅವಳಾಗಿದ್ದರೂ
ಮಧ್ಯದಲ್ಲಿ ವ್ಯಕ್ತವಾಗುವ ಪರಿಯಲ್ಲಿ
ಇವಳಾದವಳನ್ನ ಇನ್ನು ತಿದ್ದದೇ
ಕೈಬಿಡುವುದುಚಿತಂ?)


-------------------------------------------------------------------------
^ಹಿಂನೆಲೆಗಳು :
Look beyond what you see,
Read between the lines,
ಮೂರ್ತ ಮೂರುತಿಗಳ ನಡುವಣ ಅಮೂರ್ತಗಳು,
ವ್ಯಕ್ತವ್ಯಕ್ತಗಳ ನಿಶಿದ್ಧ ಸಂದಿಯಲವ್ಯಕ್ತವಾದವು,
ಆಗಾಗುತ್ತ ನಡೆದ ಸಾಲುಗಳ ನಡುವೆ ಆಗದೇ ಉಳಿದು
ಬಿಟ್ಟ ಮತ್ತಿತ್ತ್ಯಾದಿಗಳು...

"मेरे गीतों में, तुझे ढूंढें जग सारा..! "
 
"...ಅರ್ಥದ ಸುತ್ತ ವ್ಯರ್ಥ ಪದಗಳ ವಿಪರೀತಾಲಂಕಾರ!" (ಮಮತಾ ಜಿ ಸಾಗರ?)
--------------------------------------------------------------------------

ಮಂಗಳವಾರ, ಜನವರಿ 31, 2012

ನಿರ್ಮಿತಿ

ಇನ್ನೂ ಕಟ್ಟಲಾಗುತ್ತಿದೆ...

    ******

 
ಇಟ್ಟಿಗೆಮೇಲಿಟ್ಟಿಗೆಯಿಟ್ಟುಕಟ್ಟಿದೆ
ನಾ ನಿನಗರ್ಥವಾಗೋಲ್ಲ ಬಿಡು ಇದು
ನಡೆಯುತ್ತಿದೆ! ಇದೋ ನಡೆಯುತ್ತಿದೆ, ಇದೂ
ನಡೆಯುತ್ತಿದೆ...
ಆನಂದಾನುಭೂತಿಯದ್ಭುತಕ್ಷಣಾಮೃತಂ!

    ******


ಅನಂತ ಮೆಟ್ಟಿಲುಗಳ ಅನಂತ ಕಂಬಗಳು...
ಕನಸಿನೊಂದು ಹಾದಿ ಹಿಡಿಯುತ್ತ..
ಹಿಡಿದ ಹಾದಿ ಕನಸ ಬದಲಿಸುತ್ತ..
ಒಂದನರ್ಧ ಏರಿ ಇನ್ನೊಂದಕ್ಕೆ ಹಾರಿ,
ಅದರಲೊಂದಿಷ್ಟು ಏರಿ ಮಗದೊಂದಕ್ಕೆ ಹಾರಿ..
ಕನಸು ಹಾದಿ ಬದಲಾಯಿಸುತ್ತ...
ಒಂದು ಏಣಿ ಮತ್ತೊಂದಕ್ಕೆ ದಾರಿ...
ಸುತ್ತಿ ಸುತ್ತಿ ಸುತ್ತಿನೇಣಿಯ ಹತ್ತುತ್ತ...
ಅರ್ಥವೂ ಆಗಲಿಕ್ಕಿಲ್ಲ ಮರಿ,
ಏಣಿಯಾಗಿದ್ದಲ್ಲ, -ಮುಂದೆ ಆಕಾಶಗುರಿ.

    ******


ಏನದು? ಪ್ರೇಮ? ಪ್ರೀತಿ? ಗೊತ್ತಿಲ್ಲ..
ಮಾಡದೇ, ಮಾಡಿದ್ದ ತಿರುಗಿ ನೋಡದೇ,
ತಿರುಗಿ ಮಾಡದೇ, ಮಾಡಿ ತಿರುಗದೇ,
ತಿರುಗುತ್ತ ನೋಡುತ್ತ ಮಾಡುತ್ತ  ಮಾಗುತ್ತ
ನಡೆಯದೇ ಗೊತ್ತಾಗಲಿಕ್ಕೂ ಇಲ್ಲ ಬಿಡು

ಹುಸಿಮಾತು, ತುಸುಮುನಿಸು,
ಅಷ್ಟಿಷ್ಟು ಕುತೂಹಲ ಮತ್ತೆ ಬೆಸೆದೀತು...
ಕೊರಗು ಮರುಗು ಅಗಲು ಅಲುಗು ತುದಿ
ತಿರುಗಿ ಬೆರಗು! ಏನು ಪ್ರೀತಿ ಆಹಾ!
ಗೊತ್ತಾಗುತಿದೆಯಾ..
ಇರಬಹುದು.. ಇರಲೂಬಹುದು.. 
ಯದ್ಭಾವಂ ತದ್ಭವತಿ ಪ್ರೀತಿ :)

    ******


ಏನದು ಏನೇನದು ಏನೋ 
ಅದು ಇದನು ನಡೆಸುತ್ತಿರುವುದು
ಏನಕೋ, ಗೊತ್ತು ಮಾಡದೇ
ನಡೆದಿದ್ದು ಅಂದು, ಗೊತ್ತಲ್ಲವೇ ಅಂತೂ
ನಿತ್ತೀತು ಇಂದು, ಅಂತೇ, ಗೊತ್ತಾಗದೇ..
ಆಕಸ್ಮಿಕಫಲವು - ಆಕಸ್ಮಿಕವಾಗಿ ವಿಫಲವೂ...

    ******


ಹೇಳಿಬಾರದೆಂದೂ ಅಮೃತಕ್ಷಣ
ಅಲ್ಪವೇ ಸಾಕ್ಷಾತ್ಕಾರ ಕ್ಷಣ
ಕವಿತೆಯೊಂದು ಕಣ
ದೊಂದಿಗೊಂದು ಕ್ಷಣ ಅನುಸಂಧಾನ
ಆತ್ಮಾನುಸಂಧಾನ ಜೀವನಾನುಸಂಧಾನ
ಸಂಭವವಾನುಭವಿಸು ಬರಿ
ಹೋಗೆನ್ನದಿರಲೋ ರಂಗ...
      .

---ಅಂದತ್ತ...

ಅರ್ಥಕ್ಕೊಗ್ಗದ ಪದಗಳ ಮಗ್ಗಲು ಮುರಿ
ಬಗ್ಗಿಸಿ ಬಳುಕಿಸಿ ಮಲಗಿಸಿಯೂ
ದಕ್ಕದ್ದು ಕಾವ್ಯವೆಂದತ್ತ ಹೊರಟ
ದಿಕ್ಕೂ ದಕ್ಕದಾ ಮೇಲದು
ದತ್ತವಾಗಿರಬೇಕಂದಲ್ಲವೇ
ಎಂದದ್ದು ಎಂದರೆ ಅಲ್ಲದ್ದು
ಅಲ್ಲದ್ದೂ ಎಂದರೆ ಅಲ್ಲದು
ಎಲ್ಲದು ಎಲ್ಲದು ಎಂದೆಂದು
ನಾ ಕೇಳಿ ನಾನಾ ನನನ
ನನನನ ನುಡಿದಂದತ್ತನಾದ
ಬರಿಶಬ್ಧವಲ್ಲೆಂದು ಹಿಂದತ್ತ
ಬೆಡಗೀಲೆ ಬಂದಿತ್ತ ಬೆರಗು!


-| ೩೦-೦೧-೧೨ | ೦೫:೦೫ | ಪ್ರಾತ: |-

ಸಖಿಹೀನ

ಇತಿ ಶ್ವೇತಪತ್ರ, ಇತ್ಯನರ್ಥ
ಸಖಿ, ಶ್ವೇತ, ಈತನಪಾತ್ರ 
ಸಸ್ನೇಹಕೂ ಸಹ
ಜೀವನಕು...

ಸಂಬಂಧ-ವಿಬಂಧಗಳೀಗೀಗ
ಎನಗರ್ಥ ಸಖಿ
ಹೀನವಾಗಿಹವು ಬಂಧ..,
ಮಗದೊಮ್ಮೆ ಎನಗರ್ಥ ಸಖಿ
ರಾಹಿತ್ಯದಿ ಅಂತಿಮಾರ್ಥ!

ಹಿಂದಿನದುಕೆನ್ನ ಬೆನ್ನಾ
ವರ್ತನಾ ದೋಷ ಕಾರಣ ಏನೋ
ತಪ್ಪ ಸರಿಪಡಿಸಲಿನ್ನೊಮ್ಮೆ
ಸಖಿ ತಪ್ಪಲೇನು..?

ಉತ್ತರದಾಯಿತ್ವವೆಲ್ಲಿ
ಬಿತ್ತರಾಗಸದಲ್ಲಿ ಬರಿ ಈ
ಪರಿ+ಪ್ರಶ್ನಗಳಾ ಸಖಿ
ಉತ್ತರೋತ್ತರದಲ್ಲಿ...

ಬೆಳ್ಳಿಯಂಚಿನ ಸಂಜೆ
ಗೆಂದಾಗಸಕೆಂದು ಸಖಿ
ರಸವೆಲ್ಲಿಂದ ಸ್ಪುರಿಯಿಸಲಿ
ಬಾಳ+ಆ+ಕಸದಲ್ಲಿ..


ಮಿಥ್ಯಾಸ್ವಯಂಭುಸೃಷ್ಟಿ

ಸತ್ಯಾ - ಮಿಥ್ಯ,
ಸಂಭವಾಸಂಭವ,
ಸಹಜಾ - ಕೃತಕ,
ಕುಣಿದಾವ ಥಕಥಕ..

ಸತ್ಯ ಅಜ,
ಸತ್ಯಜ ಸಹಜ,
ಅಸಹಜ ಕೃತಕ,
ಸತ್ಯಾ ನಜ ಕೃತಕ.

ಅಸತ್ಯ ನಿತ್ಯದಿ
ಕೃತಕಾಸಹಜ;
ಅಸಹಜಾಸತ್ಯದಿ
ಮಿಥ್ಯಾತಥ್ಯ.

ಮಸ್ತಿಷ್ಕ ಸತ್ಯ,
ಮನ ಮಿಥ್ಯ?
ಹೃದಯ ಸಹಜ,
ಮಿಡಿತ ಕೃತಕ?

ಬಿತ್ತದ್ದು ಕೃತಕ?
ಹುಟ್ಟಿದ್ದು ಸಹಜ,
ಸತ್ತಿದ್ದೂ ಸಹಜ..,
ಅತ್ತಿದ್ದು...?
ಮರುಸೃಷ್ಟಿ?

ಯದ್ಭಾವಂ...

ನನಗಿನ್ನು?
ನೆನಪು
ನೀನು
ಕೇಳಿದ್ದು
ಮತ್ತೆ
ಕೇಳದ್ದು
ಎನ್ನ
ಕೇಳಲಾಗದ್ದು
ಇನ್ನು
ನೆನಪು
ದುರದೃಷ್ಟ
ಮರೆವಲ್ಲ
ನಿನಗೆ
ಗೊತ್ತು, ನನಗ್ಗೊತ್ತು...

ನನಗಿನ್ನೂ!