ಬುಧವಾರ, ಅಕ್ಟೋಬರ್ 31, 2012

ನಾಸ್ಟಾಲ್ಜಿಯಾ



ಅವಳ
ನನ್ನವಳಾಗಿಸಲಾಗದ
ಸತ್ ಯಾ ದುರುದ್ದೇಶಗಳ
ನಿರುದ್ದಿಶ ಸರಾಸರಿ
ಮೇಲ್ತೆಗೆದು
ನನ್ನ ತುಂಡರಿಸಿದ
ಸಾಲ್ಗಳ
-ಅವಳು ತಾಕುವ ಸ್ವರಗಳ
ಮಧ್ಯೆ ಹುಗಿದರೂ ಅನಾಹತ್ತಾಗಿ
ಭ್ರೂ ಕಂಪಿಸಿ ಅನಾಮತ್ತಾಗಿ
ಬಿರಿದೆದೆ ಸೀಳಿ ಕುದಿಯಾಳದಿಂ
-ದೆದ್ದು ಸ್ಪುರಿಸುತ್ತಾಳೆಂಬುದು
ಸರಾಸರಿಗಳಿಗೊಗ್ಗದಾಚೆಯ ಬದುಕಿನ
ಯಾದೃಚ್ಛಿಕ ನಡೆಗಳಾಕೆಯ
ಭಯಂಕರ ಕಟುಮಧುರ
ನಾಸ್ಟಾಲ್ಜಿಯಾ




------------------------------------------------------------------------------------------------------------------



...ನನ್ನವಳಾಗಲಿಲ್ಲ,
--ಅಥವಾ ನನ್ನವಳಾಗಿಸಲಾಗಲಿಲ್ಲ.
--ನನ್ನ ಕೈಲೂ .., ಮತ್ತೆ ಅವಳ ಕೈಲೂ ಸಹಾ.
ಯಾಕೆ ಈ ವೈಫಲ್ಯ?? --ಅಂತ ಕೇಳೋಕೆ ಹೊರಟರೆ, "ನಿಜಕ್ಕೂ ವೈಫಲ್ಯವೇಯಾ?" ಅಂತಾಗಿ...
ಯಾಕೆಂದರೆ -- ಒಳ್ಳೆಯದೋ ಕೆಟ್ಟದ್ದೋ -- ಆಗಿಸೋ ದಿಶೆಯಲ್ಲಿ ಒಂದು ಉದ್ದೇಶ ಅಂತ ಏನಾದರೂ ನಿಜಕ್ಕೂ ಇತ್ತಾ?
--ಅನ್ನೋದೂ ಸಹಾ ಸ್ಪಷ್ಟವಾಗದ ನಿರುದ್ದಿಶದಲ್ಲಿ ಸಮಾಧಾನಪಡೋಣವಾಗ್ತದೆ..

--ಸಮಾಧಾನವಾಗ್ಲೀಂತ ಹೊರದಾರಿಯಾಗಿ
ಕಾವ್ಯದ ಕಡೆ ಹೊರಳುವಲ್ಲಿ -- ಹೊರಳಿದಲ್ಲಿ
--ಹಿಮ್ಮರಳಿ ನೋಡುವಲ್ಲಿ, ಈಗ್ಲೂ.., ಅಂದಿಂದಿನ ನನ್ನ ಕಾವ್ಯಗಳಲ್ಲೂ ಅವಳ ಗಾಯಕಿಯಲ್ಲೂ ಅವ್ಯಕ್ತ ಅಸ್ಪಷ್ಟ ನಾಸ್ಟಾಲ್ಜಿಯಾ...

ನಿಜವೇನೋ.., ಒಬ್ಬ ಸೃಷ್ಟಿಶೀಲ ಮನುಷ್ಯ.., ಆತನಿಗೆ ಒಂದಿಷ್ಟು ಅನುಭವವಾದಮೇಲೆ, ಒಂದಿಷ್ಟು ಪ್ರಬುದ್ಧತೆ ಬಂದಮೇಲೆ, ಅವನ ಸಂಗೀತ-ಸಾಹಿತ್ಯೇತ್ಯಾದಿ 'ಕಲೆ'ಗಳಿಗೆ ಈ ವ್ಯಕ್ತಿಗತ ಹಿನ್ನೆಲೆಯಿಟ್ಟೂ ನೋಡ್ಬೇಕಾಗ್ತದೆ...
--ಅಷ್ಟರ ಮಟ್ಟಿನ ವ್ಯಕ್ತಿನಿಷ್ಟತೆ ಈ'ಅಸ್ಪಷ್ಟಸೃಷ್ಟಿ'ಗಳಲ್ಲಿ ...

ಬಿ
ಡಿ
ಬಿ ಡಿ
ಬಿಡಿ ಬಿಡಿ
ಬಿಡಿ ಬಿ 
ಡಿ ಬಿಡಿ..ಸಿಕೊಂಬಾರದೇ!

--ಬಿಡಿಸಿಕೊಂಡೂ ಬರೀಬೇಕು,
--ಬಿಡಿಸಿಕೊಂಡೇ ಓದ್ಬೇಕು.
--ಬಿಡಿಸಿಕೊಂಡೂ ಹಾಡ್ಬೇಕು,
--ಬಿಡಿಸಿಯೇ ಕೇಳ್ಬೇಕು...



------------------------------------------------------
ಹಿಂನೆಲೆವೀಡುಗಳು:  ಯಾದೃಚ್ಛಿಕ-ನಡೆ/random-walk, ಸರಾಸರಿಗಳಿಗೊಗ್ಗದ/non-(self-)averaging ,
ಅನಾಹತ: ಸಂಗೀತದಲ್ಲಿ ಸ್ವರ-ಸ್ವರಗಳ ನಡುವಿನ ಮೌನ; ಮೂಲವಿಲ್ಲದ/ಅನಾದಿ ನಾದ; ಹೊಡೆತಗಳಿಂದ ಉತ್ಪತ್ತಿಯಾಗುವಂತಹದ್ದಲ್ಲದ ನಾದ;  non-mechanical/un-plucked/non-percussion/primordial/phantom-sound...

ಬುಧವಾರ, ಅಕ್ಟೋಬರ್ 3, 2012

ಕೇಂದ್ರದಾಚೆ / (ವ್ಯಕ್ತ)ಮಧ್ಯೆ / d-focussd ^


ಅವಳಿದ್ದಳು

ತನ್ನದಲ್ಲದ ಸಿನೇಮಾದಲ್ಲಿ
ಎರಡನೇ ಯಾ ಮೂರನೇ
ನಾಯಿಕೆಯಂತೆ
ತಾನೇ ತಾನಾಗಿ
ತನ್ನದಾಗದ ಕಥೆಯಂಚು
ಅಂಚಿಗೆ ಇಂಚಿಂಚು ಸಿಕ್ಕೂ
ಸಿಗದ ಆಮುಂಚಿನ
ಕಥನಕ್ರಮದ ನಾಯಕನ
ಕಾದುನಿಂದ ಶಬರಿಯಾಗಿ
ಬರಿಯಾಗಿ
ನಿವಾಳಿಸಲಂತೂ ಆಗದ
ದೃಷ್ಟಿ ಯಾಗಿ
ಬೆಳಸಲೂ ಆಗದ ಕರ್ತೃವಿನ
ಅಸಹಾಯಕತಾ ನಿರೂಪವಾಗಿ
ಇನ್ನೂ  ಏನೇನೋ ಆದರೂ ತಾನು
ಮಾತ್ರಾ ಆಗದಾಕೆಯಂತೆ...

ಇಂತಿಪ್ಪಾಕೆಯ ಚಿತ್ರದಲ್ಲಿ ಚಲನೆ
ತರುವುದಾದರದು ಆನಂದ
ವರ್ಧನನ ಕಾವ್ಯಮೀಮಾಂಸಾ ಪ್ರಕಾರ ಅಸಂಭವ
ದೋಷವಾದೀತಾದರೂ ತರೋಣವೆಂಬ
ಹುಕಿಗೆ ನವೋದಯವಾಗಿ ಅಸಂಗತ
ಅತಿವಾಸ್ತವ ವಿಪರೀತಗಳಾಗಿ ನವ್ಯ
ಬಂಡಾಯಗಳಾದವು.

(ನವ್ಯೋತ್ತರವಾಗಿ ಹೊರಳಿ)
ಈ ರಾಮಾಯಣ ಮುಗಿದಂತಾದರೂ ಪಾತ್ರ ಮುಗಿಯದೇ
ಮಹಾಭಾರತವಾಗಿ ಕೃಷ್ಣನ ಸತ್ಯ ಭಾಮೆಯಾಗಿ
ಸಿನೇಮಾದ ಹೊಸ ಪಾರ್ಟಲ್ಲಿ ಇವಳ ಬೆಳೆಸಲೆತ್ನಿಸಿದುದು
ಹಳೆಯದಾದರೂ ಬೇರೆಯದೇ ಕಥೆಯಾಯಿತು.

ಅದೇನೇ ಇರಲಿ,
ಸಾಮಾನ್ಯದಲ್ಲಿ ನೇರ ಅಭಿ
ವ್ಯಕ್ತಿಯಾದ ಮೇಲಿಂದ
ಮೇಲೆ ನೋಡಲೊಮ್ಮೊಮ್ಮೆ
ವ್ಯಕ್ತ ಸಾಲುಗಳ ಮಧ್ಯೆ ಉಳಿದು
ಬಿಟ್ಟು ಹೋದಂತೆ ಏನೋ
ಕಂಡದ್ದರಾಚೆ ತುಸುದೂರ ದಿಗಂತದಲ್ಲೆಂಬಂತೆ
ಫೋಕಸ್ಸಿನತ್ತಿತ್ತ ಮಬ್ಬು ಮಬ್ಬಾಗಿ
ಆಗ್ಗಾಗ್ಗೆ ಅವಳು ಸುಳಿದಂತಾಗುವುದುಂಟು.

ದೇಹದಲ್ಲಿಯಾತ್ಮವೆಂಬಂತೆ ಕಾವ್ಯಸಂದೇಹ ಸಮಸ್ಯಾತ್ಮಕಳು
ಆರೋಪಸ್ವರೂಪಳು, ಅವಳಿದ್ದಳು.


------------------------------------------------------------------------
(ವಿಸೂಚ್ಯೋಚನೆಯಾಗಿ :
ತುದಿಮೊದಲುಗಳಲಿ ಅವಳಾಗಿದ್ದರೂ
ಮಧ್ಯದಲ್ಲಿ ವ್ಯಕ್ತವಾಗುವ ಪರಿಯಲ್ಲಿ
ಇವಳಾದವಳನ್ನ ಇನ್ನು ತಿದ್ದದೇ
ಕೈಬಿಡುವುದುಚಿತಂ?)


-------------------------------------------------------------------------
^ಹಿಂನೆಲೆಗಳು :
Look beyond what you see,
Read between the lines,
ಮೂರ್ತ ಮೂರುತಿಗಳ ನಡುವಣ ಅಮೂರ್ತಗಳು,
ವ್ಯಕ್ತವ್ಯಕ್ತಗಳ ನಿಶಿದ್ಧ ಸಂದಿಯಲವ್ಯಕ್ತವಾದವು,
ಆಗಾಗುತ್ತ ನಡೆದ ಸಾಲುಗಳ ನಡುವೆ ಆಗದೇ ಉಳಿದು
ಬಿಟ್ಟ ಮತ್ತಿತ್ತ್ಯಾದಿಗಳು...

"मेरे गीतों में, तुझे ढूंढें जग सारा..! "
 
"...ಅರ್ಥದ ಸುತ್ತ ವ್ಯರ್ಥ ಪದಗಳ ವಿಪರೀತಾಲಂಕಾರ!" (ಮಮತಾ ಜಿ ಸಾಗರ?)
--------------------------------------------------------------------------