Monday, April 8, 2013

ಎದುರುಬದರು

----------------------------------------------------------------------------
ಒಬ್ಬೊಬ್ಬರ ತಲೇಲೂ ಒಂದೊಂದು ಥಿಯರಿ ಇರುತ್ತೆ;
          ಈ ಜಗತ್ತಲ್ಲಿ ಅದಕ್ಕೆ ಪುರಾವೆ ಹುಡುಕ್ತಿರ್ತೀವಿ...

                                                       (ಚಿದಂಬರ ರಹಸ್ಯ)
----------------------------------------------------------------------------


ಗುರುಗಳೇ,

ಒಂದು ಅರೆಪಾರದರ್ಶಕ ನಿಲುವು-
ಗನ್ನಡಿಯ ಇಬ್ಬದಿಗಳಲ್ಲಿ
ಕೂತಿದ್ದೇವೆ ಇಬ್ಬರೂ
-ಎದುರುಬದರಾಗಿ ಒಬ್ಬರನಿನ್ನೊಬ್ಬರು

ಒಂದು ಬಿಂಬ, ಮತ್ತಿನ್ನೊಂದರ ಪ್ರತಿಬಿಂಬ
ಒಂದರಮೇಲಿನ್ನೊಂದು ಮಜವಾಗಿ ಬಿದ್ದು
ದ್ವಂದ್ವವೆಂಬವುಗಳ ಮಧ್ಯೆ ಹೀಗೆ
ಗೆರೆ ಮಾಸಲು, ತೆರೆ ಪೋರಸ್ಸು

ತೆಳ್ಳಗೆ ತುಸುವೇ ಪಾದರಸ ಬಳಿದ
ಗಾಜಾಗಿ ಅರ್ಧಂಬರ್ಧಗನ್ನಡಿ
ಅಸಾಧ್ಯ ಕುಚೋದ್ಯಗಾರನಾಗಿದೆ ಬಿಡಿ.

ಇತ್ತಲಾಗಿ
ಹದಿ ಈಗಷ್ಟೇ ಹರಿದಿದೆ
ಉಕ್ಕಿ ಬೀಳುತ್ತ ಬೆದೆ
ನಿದ್ದೆಯಲ್ಲೂ ಎವೆ ಬಿಟ್ಟಿವೆ
ಕನ್ನಡಿಯೆದುರು ತಂದು, ತೀಡಿ
ತಿದ್ದಿಕೊಳ್ಳುವ ತವಕ
ನನ್ನ ನೋಡಿಕೊಂಡಷ್ಟೇ ನಿಮ್ಮ ಕಡೆಯೂ;
ಬೆಡಗಿಗಷ್ಟೇ ಅಲ್ಲದೇ ಲಕ್ಷ್ಯ ಪೂರ್ಣತೆಯೆಡೆಯು.

ಅತ್ತಲಾಗಿ
ನೋಡುವಲ್ಲಿ ನನ್ನ ಪ್ರಸ್ತುತ
ವಾಗುತ್ತಿದೆಯಲ್ಲಿ ನಿಮ್ಮದೇ ಗತ
ನಿಂಭೂತೋ ನಂಭವಿಷ್ಯತ್ತಾ?

ಅಡ್ದಗೋಡೆಯ ಮೇಲೆ ದೀಪವಿಟ್ಟವರು
ಗಾಜ ಕಿಟಕಿಯಿಟ್ಟು ಕೆಳಗೆ ಬಿಂಬಕಾಣುವವರು
ಬಣ್ಣಬಣ್ಣದಿ ಪ್ರತಿ ಬಿಂಬಿಸ ಹೊರಟವರು
ಟೀಕೆಟಿಪ್ಪಣಿಸಿ ಅಡ್ವಯಿಸು ಬೀರಬೇಕಾದವರು
ವಿವರದರ್ಧದಲಿ ಭೂತ ಭಾಧೆಯಾದಂತೆ
ತಡವುತ್ತೀರಿ ತಲೆ ಕೊಡವುತ್ತೀರಿ.

ಕಣ್ತುಂಬ ತುಂಬಿಕೊಂಡು ಬಾಯ್ತುಂಬ ಬೈವವರು
ಒಂದು ನಿರೀಕ್ಷಣಾಜಾಮೀನಿಗೆಂಬಂತೆ ಹೀಗೆ ತಾವನುಸರಿಸುವ
ಸ್ವನಿರಾಕರಣೆಯಲ್ಲಿ ಮಾತ್ರ ನೋಡಿ ನನಗೆ
ಕಂಡು ಬಿಟ್ಟಂತಾಯ್ತು ಥೇಟು ನನ್ನದೇ ಪ್ರತಿಬಿಂಬ!

3 comments:

  1. chennnagide gurugale, complexagide, viscoussagide- glassy statu taane, onderadu sala odida mele tellagaagi olage hoytu- shear thinning anteno antaare idakke? :)

    ReplyDelete
    Replies
    1. ಇದು ನಿಮಗೆ ಒಪ್ಪಿಗೆಯಾಗಿದ್ದು/ಅಪೀಲಾಗಿದ್ದು ಸಂತೋಷ :)

      Delete
  2. ಟಿಪ್ಪಣಿ:
    ಇದರಲ್ಲಿನ ಕಾವ್ಯೋದ್ಯೋಗೀಯ 'ಪರಿಕರ'ವನ್ನು ಅರ್ಥೈಸಿಕೊಳ್ಳಲು ಮಸೂರ-ದರ್ಪಣಗಳ ತಾಂತ್ರಿಕತೆಯ ಕುರಿತಾದ ತುಸು ತಿಳುವಳಿಕೆಯೂ ಅಗತ್ಯವೆನ್ನಿಸಬಹುದು.

    ಮೊದಲ ಓದಿನಲ್ಲಿ "ಬಿಂಬ-ಪ್ರತಿಬಿಂಬಗಳು ಅನಾದಿಕಾಲದಿಂದ ಉಪಮೆ-ರೂಪಕಗಳಾಗಿ ಬಳಕೆಯಾಗುತಿದ್ದು, ಇದರಲ್ಲಿ ವಿಶೇಷವೇನೂ ಇಲ್ಲ" ಎನ್ನಿಸಬಹುದು. (ಎಷ್ಟಾದರೂ "ನೆರಳು ಬೆಳಕಿನ ಪ್ರಾರಾಬ್ಧ ಕರ್ಮ" ವಲ್ಲವೇ!) ನಂತರದ ಓದಿನಲ್ಲಿ 'ಅರ್ಧಂಬರ್ಧಗನ್ನಡಿ' ಎಂಬುದರಲ್ಲಿ ತೊಡಕಾಗಬಹುದು.

    ಈ ಅರ್ಧಗನ್ನಡಿ (ಯಾನೆ "half-silvered mirror") ಯ ಹಿಂಭಾಗಕ್ಕಿಂತ ಮುಂಭಾಗದಲ್ಲಿ ಹೆಚ್ಚು ಬೆಳಕಿದ್ದರೆ ಅದು ತನ್ನ ಮುಂದಿನದನ್ನು ಪ್ರತಿಫಲಿಸುವ ಕನ್ನಡಿಯಂತೆಯೂ, ತದ್ವಿರುದ್ಧವಾಗಿ ಮುಂಭಾಗಕ್ಕಿಂತ ಹಿಂಭಾಗದಲ್ಲಿ ಹೆಚ್ಚು ಬೆಳಕಿದ್ದರೆ ತನ್ನ ಹಿಂದೆ ಇರುವುದನ್ನು ತೋರಿಸುವ ಗಾಜು-ಮಸೂರದಂತೆಯೂ ವರ್ತಿಸುತ್ತೆ.

    ಈ ಸಂಗತಿ ಕಾವ್ಯಗಳಲ್ಲಿ ಬಳಕೆಯಾದದ್ದು ನನ್ನ ಗಮನಕ್ಕೆ ಬಂದಿಲ್ಲ. ಆದರೆ ಅದು ಕೆಲವೊಮ್ಮೆ ನಾಟಕಗಳಲ್ಲಿ ಬಿಂಬದಿಂದ ಪ್ರತಿಬಿಂಬಕ್ಕೆ ಜಾರಿಸುವ ನಾಟಕೀಯತೆಯನ್ನು ತರುವ ಒಂದು 'ಪರಿಕರ'ವಾಗಿಯೂ ಬಳಕೆಯಾಗುವುದನ್ನು ಇತ್ತೀಚೆಗೆ ಗಮನಿಸಿದ್ದೇನೆ. (ಯಾವ ನಾಟಕ ಪ್ರಯೋಗ? ನೆನಪಿಲ್ಲ. ಬಹುಶಃ ಅಭಿಶೇಕ ಮಜುಂದಾರರ "ಕೌಮುದಿ" ಇಲ್ಲವೇ ಕಾರ್ನಾಡರ "ಹಯವದನ" ಇಲ್ಲವೇ "ತುಘಲಕ್" ಇರಬೇಕು.)

    ಎದುರುಕುರ್ಚಿಯಲ್ಲಿ ಬಂದು ಕೂತ ವ್ಯಕ್ತಿಯು ಏನು ಹೇಳುತ್ತಿದ್ದನೆಂಬುದು ಬಿಂಬವೋ ಅಥವಾ ಪ್ರತಿಬಿಂಬವೋ ಎಂಬುದು ಮಬ್ಬುಗೊಳ್ಳುವ ಒಂದು ಸಂಧರ್ಭ ಈ ಕಾವ್ಯೋದ್ಯೋಗಕ್ಕೆ ಒದಗಿ ಬಂದಿದ್ದುದು.

    ReplyDelete