Monday, March 24, 2014

ಲೂಸಿಡ್ಡಾಗಿ...

 ಲೂಸಿಡ್ಡಾಗಿ ಕನಸಿಸುವುದು

ನನ್ನೊಳಗಣ ಕನಸುಗಳ--ಆಶಯಗಳ ಪರಂಪರೆ
ಪರಂಪರೆಯಿಂದ ಮುಂದೋಡುವ ಥೀಸಸ್ಸನ ಶಿಪ್ಪು


ಬೆಳಿಗ್ಗೆ ಎದ್ದ ರೀತಿ - ಘಳಿಗೆ ಅಷ್ಟು ಮುಖ್ಯವಾಗಿದ್ದೇನಲ್ಲ. ಮಧ್ಯಾಹ್ನ ಸ್ವಲ್ಪ ಅನ್ಕಂಟ್ರೋಲ್ಡ್ ಹಾರಾಟ, ಕೊನೆಗೆ ಸ್ವನಿರಾಕರಣೆಗಳು. ಫಿಸಿಕಲಿ ಫಿಸಿಕ್ಸಿನಿಂದ ಹಿಡಿದು ಕಳರಿಪಯಟ್ಟಿಗೆ ಜಿಗಿದರೂ, ತರ್ಕಗಳ ವರ್ತುಲದೇಣಿಗಳನ್ನೇರುತ್ತಲೇ ಹೊರಟಿದ್ದ ಮನಸ್ಸು. ನಂಗೆ ನಾನಿರೋ ರೀತೀನೇ ಬೇಡವಾಗಿ ದೂರ ಓಡೊ ಯತ್ನದಲ್ಲಿ ಹಾಗೆ ಜಿಮ್ನಾಸ್ಟಿಕ್ ಜಿಗಿತಗಳನ್ನು ಪ್ರಯೋಗಿಸಿಕೊಂಡುಹೊರಟಿದ್ದು...

ಎಷ್ಟೇ ದ್ವೇಶಿಸಿದರೂ ನನ್ನ ನಾನು, ನನ್ನಿಂದ ನನಗೆ - ಆ ಘಳಿಗೆಯ ನನ್ನಿಂದ ನನಗೆ - ನಿರ್ಗಮನ - ಆ ಕ್ಷಣದ ನಿರ್ಗಮನ ನಿರ್ವಾಹಗಳಿಲ್ಲ. ಎಲ್ಲಿ ಒಡಿದರೂ ನಾನು, ನನ್ನನ್ನ ನೆರಳಿನಂತೆ  ನಾನು ಹಿಂಬಾಲಿಸಿಕೊಂಡು ಬರೋದು. ಅಥವಾ ಆ ವರ್ತುಲದೇಣಿಗೆ ಆ ಮಟ್ಟಿಗೆ ರೇಜಿಗೆಯಾಗಿ ಅದರಿಂದ ಬೇರೆ ವರ್ತುಲದೇಣಿಗೆ ಹಾರಿ ಬೀಳಕ್ಕೆ ಹೀಗೆ ಓಡುತ್ತ - ಅಥವಾ ಓಡಲೆತ್ನಿಸುತ್ತ - ಇರೋದು. ನೆತ್ತಿಮೇಲಣದಾಗಸದಲ್ಲಿ ಬೇರೆ ದಿಕ್ಕಿಂದ ಸೂರ್ಯನೋ, ಚಂದ್ರನೋ, ಅಥವಾ ಬೀದಿದೀಪವೋ ಮೂಡಿದರೆ ಆ ನನ್ನ ಛಾಯೆಯೇ ಬದಲಾಗಬಹುದಲ್ವ ಅಂತ ಕ್ಷೀಣ ಆಸೆ--ಆಕಾಂಕ್ಷೆಯ ಎಳೆಗಳು. ಹ್ಯಾಗೆ ಈ ಹೊತ್ತಿನ ನನ್ನನ್ನ, ನಾನು - ಈವತ್ತಿನ ಮಟ್ಟಿಗಾದರೂ - ಬದಲಾಯಿಸುವುದು..? ಊಹೂಂ.., keep hitting the attractor basin, keep ducking the ball...

ಹೀಗೆ ಅರೆಬರೆ ಮನಸ್ಸಿಂದ - ಅನ್ಯರೀತ್ಯಾ ತೀವ್ರ ಮನಸ್ಸಿಂದ - ಫಿಸಿಕಲಿ - ವರ್ಚುಯಲಿ ತುಯ್ದು ಅಲೆದಾಡುತ್ತ..  ..ಆಯಾಚಿತವಾಗಿ ಕಮೆಂಟುಯೋಗ್ಯ ಕವನ-ಕವಿ ಜೋಡಿ ಸಿಗುತ್ತೆ. 'ದುರಹಂಕಾರಿ' ಅಂತೂ ಜಾಗೃತ. 'ಅನಂಗ ಚಿತ್ತದ ಅವಿರತ ಹೊಳಹು' ಅಪ್ಲೋಡಾಗೋ ಹೊತ್ತಿಗೆ ರಾತ್ರಿ ಹತ್ತು ದಾಟಿ, ಅವಸರದಲ್ಲೆಲ್ಲೋ ಹೊಟ್ಟೆಪಾಡು ಮುಗಿಸ್ಕಂಡು, ಅಮ್ಮ-ಅಣ್ಣನ್ನ ಮಾತಾಡಿಸ್ಕಂಡು, ರಾತ್ರಿ ನಿದ್ದೆಯೇ ಹಾಳಾಗ್ಬೋದು ಅನ್ನೋ ವಾರ್ನಿಂಗ್ ಇಟ್ಕೊಂಡು, ಏನೋ ಒಕ್ಕಣೆಯಿಟ್ಟು 'ನಾಲ್ಕು ಸಮಸ್ತ'ರಿಗೆ '..ಹೊಳಹು' ಕಾಣುವಂತೆ ಕೊಂಡಿಯಡಕವಿಟ್ಟು ವಿ-ಭಿನ್ನವತ್ತಳೆ ಕಳಿಸುವಹೊತ್ತಿಗೆ ಹನ್ನೆರಡು ದಾಟಿ ಅಲ್ಲೇ ಕಣ್ಣೆಳೆಯುತ್ತಿದ್ದುದು. ಹಾಗೆ ನನ್ನ ನಾನು ಹುಸಿ-ಬಲವಂತ ದೂಡಿಕೊಂಡು ರೂಮಿಗೆ ಬಂದು ಬಿದ್ದುಕೊಂಡಿದ್ದು ತಾತ್ಕಾಲಿಕವಂತಂದುಕೊಂಡು, ಉಟ್ಟ ಬಟ್ಟೆಯಲ್ಲಿಯೇ. ಮತ್ಯಾವಾಗಲೋ ಎಚ್ಚರಾದಾಗ ಲೈಟು ಹಾಗೇ ಉರೀತಿದ್ದುದು, ಪ್ಯಾಂಟು ಅಲ್ಲೇ ಸ್ವಲ್ಪ ಸಡಿಲ ಜಾರಿಕೊಂಡಿದ್ದುದು, ಯಾವ ಮಾಯಕದಲ್ಲೋ ಬೆಡ್ಷೀಟು ಎಳಕೊಂಡಿದುದು...

*****

ಊಹೂಂ !
ನಾನು ಬರೆಯಲಿಕ್ಕೆ ಎದ್ದು ಕೂತದ್ದು ಈ ಪುರಾಣವನ್ನೇನಲ್ಲ. ಕೇಂದ್ರ ವಿಷಯ ಸ್ವಲ್ಪ ಬೇರೆಯೇ. ಆದರೆ ಕಥಿಸುವುದರ ಕುರಿತಾಗಿಯೇ ಇರುವ ನಮ್ಮದೊಂದು ಥಿಯರಿಯಿದೆ : ಯಾವುದೇ ಒಂದು ಸ್ಪುರಣೆಯು ಅದರ ಅಮೂರ್ತತೆಯಿಂದಾಚೆಗೆ ಕೆಳಪಟ್ಟು ರಕ್ತಮಾಂಸಗಳ ಜೀವಾಕೃತಿಯಾಗಿ - ಅನುಭಾವವಾಗಿ - ಬಂದಿಳಿಯುವುದರ ಹಿನ್ನೆಲೆಯಲ್ಲಿ ಅದನ್ನ ಹಾಗೆ ವಿಶಿಷ್ಟಗೊಳಿಸುವ - transcend ಮಾಡುವ ಒಂದು ಪರ್ಯಾವರಣ - context -ಇರುತ್ತೆ. ಆ ಒಂದು ಅನುಭಾವಕ್ಕೆ ಪಾತ್ರನಾದವನಿಗೆ ಮಾತ್ರವೇ ಆಪ್ತವಾದ ಒಂದು ಲೋಕದಲ್ಲಿ ಆ ಒಂದು ಸೃಜನಕ್ರಿಯೆಯು ಘಟಿಸಿರುತ್ತೆ. ಎಷ್ಟೋ ಬಾರಿ ಆ ಹಿನ್ನೆಲೆಗಳನ್ನ ಕಲೆಯಲ್ಲಿ ದಾಟಿಸುವ ಯತ್ನವಿರದೇ, ಅಥವಾ, ದಾಟಿಸುವ ಯತ್ನವಿದ್ದೂ ಅದು ಸೋತು, ಇಡೀ ಸೃಜಿತಹೃದಯವೇ 'ದಾಟದೇ' ಉಳಿದುಬಿಟ್ಟ ಆರೋಪಗಳಾಗುತ್ತವೆ. ಹೆತ್ತಿದ್ದು ಎಷ್ಟೇ abstract ಆಗಿದ್ದರೂ ಹೆತ್ತವರಿಗೆ ಅದು ರಕ್ತಮಾಂಸಗಳಿಂದ ಮೈವೆತ್ತ ಮುದ್ದ್ದುಕೂಸಾಗಿಯೇ ಕಾಣುತ್ತಿರುತ್ತೆ. ಆದರೆ ಅದರ ಕುರಿತು ಸರಿಯಾಗಿ ಅನುಭವ-ಪ್ರವೇಶಗಳಿಲ್ಲದಿದ್ದವರಿಗೆ - ಇದ್ದವರಿಗೂ ಕೂಡಾ ಕೆಲವೊಮ್ಮೆ - ಅದು ಬರೀ ನೀರಸ-ನಿರ್ಜೀವ ಬಡಬಡಿಕೆಗಳಾಗಿ ಕಂಡುಬರುವ ವಿದ್ಯಮಾನದೊಂದಿಗೆ ಕೃತಿ ಯಾ ಕೃತಿಕಾರ ಸೋತ ಆರೋಪಗಳು ಆಗಿ ಬರುತ್ತವೆ.

ಓದುಗನಿಗೆ ಇದನ್ನ ನೀಗಿಕೊಳ್ಳಲು "ಅರ್ಥವಾದ ಸಾಲುಗಳ ಬೆಳಕಲ್ಲಿ ಅರ್ಥವಾಗದ ಸಾಲುಗಳನ್ನ ಓದಿ" ಎನ್ನುವ ಎಕ್ಸಪರ್ಟ್ ವಿಮರ್ಶಕರ ಸಲಹೆ ಇದೆ. ಆದರೆ ಕೃತಿಕಾರ ಹ್ಯಾಗೆ 'ಇಂಪ್ರೋವೈಸ್' (ಹೆರುವವರ ನಿಘಂಟಿನಲ್ಲಿ ಹಾಗೊಂದು ಪದದ ಇರುವಿಕೆಯೇ ಬಹುಮಟ್ಟಿಗೆ ಸಂಶಯ!) ಮಾಡಿಕೊಳ್ಳಬಹುದು..? ಇಲ್ಲಿ ಹಿಂದೂಸ್ತಾನಿ ಕಛೇರಿ ಪದ್ದತಿ ಒದಗಿಬರಬಹುದು : ಮೊದಲು ಮಂದ್ರಾಲಾಪಗಳ ಆಸ್ಥಾಯಿ ಹಿಡಿದು ತನ್ಮೂಲಕ ಕೃತಿ ಆಗಿ ಬರಬೇಕಾದ context/ಪರ್ಯಾವರಣ/ಲೋಕವನ್ನು 'ಕಟ್ಟಿಕೊಡುವುದು'; ತದನಂತರ ಸ್ವಮನೋಧರ್ಮದ ವ್ಯಭಿಚಾರೀಭಾವಗಳ ಚಲನೆಗಳ ಹೊಳೆಯಿಸುವುದು.

--ಮಲಗುವ ಮುಂಚಿನ ತುಯ್ದಾಟಗಳ ಹೊತ್ತಲ್ಲಿ ಕಪೋಲದಲ್ಲಿ ಹಾಗೊಂದು ಥಿಯರಿಯ ಅಲೆಗಳು ಕೂಡಾ ಅಲೆದಾಡಿಕೊಂಡಿದ್ದವು.

*****

ನಮ್ಮ ಈ ಎಲ್ಲ ವೈಯಕ್ತಿಕ ಹಾರಾಟ ಹೋರಾಟಗಳ ಪ್ರಾಚೀನ ಅರ್ವಾಚೀನ ಪರಂಪರೆಯಲ್ಲಿ ಜೋಡಣೆಯಾಗುತ್ತ ಬರುವವು ನಮಗೆ ಬೀಳುವ ಕನಸುಗಳು. ಸುಪ್ತಮನಸ್ಸು ಜಾಗೃತಮನಸ್ಸನ್ನು ಡ್ರೈವ್ ಮಾಡುವುದು ಸಂಗತವಿರುವಂತೆಯೇ ಜಾಗೃತಮನಸ್ಸಿನ ವ್ಯಾಪ್ತಿಯ ವಿದ್ಯಮಾನಗಳು ಸುಪ್ತಮನಸ್ಸಿಗೆ ಇಂಧನ-ಸಂಸ್ಕಾರಗಳನ್ನ ಈಯುವುದು ಕೂಡಾ ಸಂಗತವೇ. ಹಾಗೆ ಸಂಸ್ಕಾರಿತರಾದ 'ಸುಪ್ತಮನಸ್ಸು' ಎನ್ನುವ alleged ನಾಟಕಕಾರರು ಸ್ವಪ್ನರಂಗಭೂಮಿಕೆಯಲ್ಲಿ ಅದ್ಭುತ ಕೃತಿಗಳನ್ನ ಆಡಿಸುತ್ತಿರುತ್ತಾರೆ. ಮೇಲ್ನೋಟಕ್ಕೆ ಅಸಂಗತ-ಅಸಂಬದ್ಧಗಳೇ ವಿಧಾನಪ್ರಧಾನವಾಗಿರುವಂತೆ ತೋರುವ ಇವುಗಳನ್ನ 'ಸ್ವಪ್ನಸಂಗತ'ವೆಂಬ ತರ್ಕ-ವಿಧಾನಾತ್ಮಕವಾಗಿಯೇ ಅರ್ಥೈಸೋಣವಾಗಬೇಕಾಗುತ್ತದೆ. ಬಹುವಾಗಿ ಎಚ್ಚರಾದ ನಿಮಿಷಗಳಲೇ ಮರೆವಿಗೀಡಾಗುವ ಈ ರಂಗಪ್ರಯೋಗಗಳ ಅಂಕಗಳನ್ನ ಆ ಕೂಡಲೇ ಮೆಲಕುಹಾಕುತ್ತ ಅನುಸಂಧಾನಿಸಿಕೊಳ್ಳಬೇಕಾಗುತ್ತದೆ. ಅಚಾನಕ್ಕನೆ ಎಚ್ಚರಾದಾಗ ಮರೆತುಹೋಗುವುದರೊಳಗಡೆಯೇ ಬರೆದು ಉಳಿಸಿಬಿಡೋಣವಂತ ಕೂತರೂ.. ಉದ್ಧ ಪೀಠಿಕೆಗಳ ಲಹರಿಯಲ್ಲಿ..  ಊಹೂಂ! ಸ್ವಪ್ನರಂಗದ ಲೇಟೆಸ್ಟ್ ನಾಟಕದ ಅದ್ಭುತಹೊಳಹುಗಳ ಲೇಟೆಸ್ಟ್ ಅಂಕಗಳು ಮರೆವಿನ ಪರದೆಯ ಮರೆಗೆ ಇನ್ನಿಲ್ಲದಂತೆ ಸರಿದೇ ಬಿಡುತ್ತವೆ.
*****

ಎಚ್ಚರಾಗೋದಕ್ಕೆ ಸ್ವಲ್ಪಮುಂಚೆ.. ಮನೆಯಲ್ಲಿ ತಟ್ಟೆಯಲ್ಲಿ ಅಮ್ಮ.. ಬಾಳೆಹಣ್ಣು ಪಾಯಸ ಬಡಿಸುತಿದ್ದಳು. ಏನೇನೋ ನೆನಪುಗಳು ಕಲಕಿ ಬಾಳೆಯ ತುದಿಯಲ್ಲಿ ದಕ್ಷಿಣೆಕಾಸುಗಳು ಪ್ರತ್ಯಕ್ಷವಾದವು. ಅಥವಾ ನಾನೇ ಅವುಗಳನ್ನ ಪ್ಯಾಂಟಿನ ಹಿಂದಿನ ಜೇಬಿನಿಂದ ತೆಗೆದಿಕ್ಕಿದೆ. "ಯಾವುದೋ ಪೂರ್ವಜನ್ಮದ ಧನ್ಯತೆಯ ಕ್ಷಣಗಳ ಋಣಭಾರದ ಸ್ಮರಣಿಕೆಗಳು ಇವು, ಅಮ್ಮ!" ಅಂತ ಏನೋ ಒಂದು ಅದ್ಭುತ ನಾಟಕೀಯ ಡೈಲಾಗು ಉದುರಿಸಿದೆ.


*****

ಅಲ್ಲಿನ ಸ್ಮರಣೆಯ ಪ್ರಕಾರ ಆ ದಕ್ಷಿಣೆ-ಕಾಸುಗಳ ಮೂಲದಲ್ಲಿ ಮನದುಂಬುವಂತೆ ಊಟವಿಕ್ಕಿದವರು ಪೂರ್ಣಿ-ಹರಿಣಿಯರು! ಎಷ್ಟು ಹಳೆಯ ಸ್ಮರಣೆ! ಇದು ಕನಸೊಂದರ ಚರಿತ್ರೆಯಾ? ಅಥವಾ ಜಾಗೃತಾವಸ್ತೆಯ ನನ್ನ ಚರಿತ್ರೆಯಲ್ಲಿನ ವಿದ್ಯಮಾನಗಳ ಸ್ವಪ್ನ ರೂಪಕವಾ?? "ಏನೋ ಒಂದು ತೊಟ್ಟು ಪ್ರೀತಿ ವಿಶ್ವಾಸಕ್ಕೆ ಹಂಬಲಿಸುವ ಹೈರಾಣು ಮನಕ್ಕೆ ಹಾಗೆ ನಿಜಕ್ಕೂ ಪ್ರೀತಿ-ವಿಶ್ವಾಸಗಳು ಸಿಕ್ಕಿದ ದಾಖಲೆ ನಿಜಚರಿತ್ರೆಯಲ್ಲಿದ್ದರೆ ಅದು ಅವರಲ್ಲಿ ಮಾತ್ರವಿರಬೇಕು" ಅಂಥ ಇದನ್ನು ವ್ಯಾಖ್ಯಾನಿಸಲಾ? ಈಗ ಜಾಗೃತನಾದವನು ನಿಜಚರಿತ್ರೆಯನ್ನ ತಡಕಾಡಿನೋಡಿದರೆ ಸರಿಯಾಗಿ ಅಂಥಾ ಯಾವ ಘಟನೆಯೂ ನೆನಪಿಗೆ ಸಿಲುಕುತ್ತಿಲ್ಲವಲ್ಲಾ? ಈ ದಕ್ಷಿಣೆಕಾಸುಗಳ ಮೂಲವೆಲ್ಲಿ ಹಾಗಾದರೆ? ಮತ್ತೆ ಇಲ್ಲಿ ಇನ್ನೊಂದು ಗಮ್ಮತ್ತೆಂದರೆ, ಪ್ರೀತಿ ವಿಶ್ವಾಸಗಳ ಕ್ಷೇತ್ರದ ಇತರ ಅಭ್ಯರ್ಥಿಗಳಾರೂ ಸ್ವಪ್ನಲೋಕದಲ್ಲಿ - ನೇರವಾಗಿ ಬರುವುದು ಬೇಡ - ಸಂಕೇತ/ಸೂಚ್ಯವಾಗಿಯೋ, ವಿಸ್ಮೃತಿಗೀಡಾಗುತ್ತಿರುವ ಸ್ಮರಣೆಯಾಗಿಯೋ, ಇಲ್ಲಾ ಕನಸಾಗಿಯಾದರೂ ಹೊಕ್ಕು ಬಳಸಾಡಿದ ಯಾವುದೇ "ದಾಖಲೆ" ಇಲ್ಲವಲ್ಲ!

*****

ಇದರ ಹಿಂದೆ ಇನ್ನೂ ಕೆಲವು ಅಂಕಗಳಿದ್ದವು. ಎಚ್ಚರಾಗುವ ವೇಳೆ ಒಟ್ಟಾರೆ ಅದ್ಭುತ ನಾಟಕವೊಂದಾದ ಸಂತೃಪ್ತಿಯಿತ್ತು. ಈಗ ನೆನಪಿಗೆ ಅಲ್ಪಸ್ವಲ್ಪ ಸಿಲುಕಿದ ಕೊನೆಯ ಅಂಕದಿಂದ ಕೆಲವು ಅಂಶಗಳು ಹೊಳೆದು ಕಾಣುತ್ತಿವೆ:
  • ಈ ಸ್ವಪ್ನರಂಗಪ್ರಯೋಗಗಳು ಕೆಲವೊಮ್ಮೆ ಏಕಪಾತ್ರಾಭಿನಯದ ಥರ. ಪ್ರತಿಯೊಂದು ಪಾತ್ರಗಳಲ್ಲಿ ನಾನೇ ಪರಕಾಯ ಪ್ರವೇಶಿಸಿದಂತಿರುವುದರ - ಪ್ರತೀ ಜೋಡಿ ಕಣ್ಣುಗಳ ಮುಖಾಂತರ ನಾನೇ ನೋಡುತ್ತಿರುವಂತಿರುವುದರ - ಜೊತೆಜೊತೆಗೆ ಎಲ್ಲರನ್ನೂ ಒಟ್ಟಂದದ ಮಟ್ಟದಲ್ಲಿ ನೋಡುವ ಅಸ್ಪಷ್ಟ ಇರುವಿಕೆಯ ಪ್ರೇಕ್ಷಕ ಸಾಕ್ಷಿಯೂ ನಾನೇ! ('ಇನ್ಸೆಪ್ಷನ್' ಪ್ರೇರಣೆ?)
  • ನನ್ನತನ ತುಸು ಹೆಚ್ಚಾಗೇ ಇರುವ ಪಾತ್ರಗಳಿಗೆ (ಅಂದರೆ ಯಾರಲ್ಲಿ ಬಹುವಾಗಿ ನನ್ನನ್ನು ನಾನೇ ಕಾಣುತ್ತೇನೋ ಆ ಪಾತ್ರಗಳು) ಅವುಗಳದ್ದೇ ಆದ ಸ್ವಪ್ನಚರಿತ್ರೆಗಳಿರುವುದು ('ಲೂಸಿಡ್ ಡ್ರೀಮಿಂಗ್'ನ ನೆರಳು?).., ಅಷ್ಟೇ ಏಕೆ, ಕನಸಿನೊಳಗೆ ಕನಸುಗಥೆ-ಕನಸುನಾಟಕಗಳು ಕೂಡಾ! ('ಲೂಸಿಯಾ' ಪ್ರಭಾವ?)

  • ಯಾವುದೂ ಸ್ವಯಂಭುವಲ್ಲ - ನಿರ್ವಾತದಲ್ಲಿ ಸೃಷ್ಟಿಕ್ರಿಯೆ ಜರುಗುವುದು ಸಾಧ್ಯವಿಲ್ಲ. ಪರ್ಯಾವರಣದ ಅಣು-ರೇಣು-ತೃಣ-ಕಾಷ್ಟಗಳೇ ರೂಪಾಂತರಗೊಳ್ಳುತ್ತ ಒಟ್ಟಂದವೆಂಬುದು ಹುಟ್ಟುಗಟ್ಟುವುದು. --ಇದು ಸುಪ್ತಮನದ ಸ್ವಪ್ನರಂಗಭೂಮಿಕೆಗೂ ಅನ್ವಯ. ಅಲ್ಲಿನ ಮೂಲಧಾತುಗಳು ಅಂತ ಭಾಸವಾಗುವವು ಕೂಡ ನಿಜಜೀವನದ ಸಧ್ಯದಿಂದ ಜಾತವಾಗಿರುವವು (ಹಾಗಿದ್ದಾಗಿಯೂ ಸಹ ಅಲ್ಲಿ ವಿಲಕ್ಷಣ ಸ್ಪಾಂಟೇನಿಟಿಗಳೇ ರಾರಾಜಿಸುವವು!). ನನ್ನಲ್ಲಿ ಬಂದು ಒಂದು ವಾರವಿದ್ದು ಹೋದ ಅಮ್ಮ, ಅರೆಹೊಟ್ಟೆಯಲ್ಲಿ ಮಲಗುವಾಗ ಕೊನೆಯಲ್ಲಿ ತಿಂದ ಬಾಳೆಹಣ್ಣು, ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಹಾಗೇ ಉಳಿದು ಅಣೆಯುತ್ತಿದ್ದ ಚಿಲ್ಲರೆಕಾಸು ಮತ್ತು ವಯೋಸಹಜ ಹಂಬಲಗಳು! --ಇವೇ ತಾನೇ ಆ ಕೊನೇ ಅಂಕದ ಘಟಕಾಂಶಗಳು?!

    *****

    ಅಮ್ಮ ಆ ದಕ್ಷಿಣೆ ಕಾಸನ್ನ ತೆಗೆದು ಅಪ್ಪನ ಕ್ಯಾಷ್-ಡ್ರಾ ಗೋ ತನ್ನ ಡಬ್ಬಿಗೋ ಸೇರಿಸುತ್ತೀನಂದಳು. ಈ 'ವಿನಿಯೋಗ'ಕ್ಕೆ  'ಹೂಂ' ಅಂದೆ.

    --_--

Monday, March 3, 2014

ओ माझी रे.. / ಅಂಬಿಗನೇ.. / O majhi re..

ಅಂಬಿಗನೇ,
ಎನ್ನಯ ತೀರ
ನದಿಯ ಈ ಧಾರೆಯು

ದಡದಗುಂಟ ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಕಾಗದದ ದೋಣಿಗಳಿಗೆ
ಎಲ್ಲೂ ತೀರವಿರೋದಿಲ್ಲವು...
ಅಂಬಿಗನೇ,
ಯಾವೊಂದು ತೀರ
ವದು ತೀರ
ಕ್ಕೆ ಸೇರಿಬರುವುದೋ
ಅದು, ಎನ್ನಯ ತೀರವು..

ನೀರಿನೊಳಗೆ ಹರಿಯುತಿಹವು ಹಲವು ದಂಡೆ
ಒಡೆದಂಥವು;
ಬೀದಿಗಳಲಿ ಸಿಗುತಲಿಹವು ಸಕಲ ಆಸರೆ
ತಪ್ಪಿದಂಥವು
ಅಂಬಿಗನೇ,
ಆಸರೆಯೊಂದು ನಡುನೀರಲ್ಲಿ
ಸಿಗುವುದಾದರೆ ಅದು,
ಎನ್ನಯ ಆಸರೆಯು




ಮೂಲ :
ಗುಲ್ಜಾರ್ ವಿರಚಿತ,
ಖೂಬ್'ಸೂರತ್ (೧೯೭೫) ಚಲನಚಿತ್ರದಲ್ಲಿನ
"ಓ ಮಾಝಿ ರೇ.."   ಗೀತೆ :

O Maanjhi Re
Apna Kinara
Nadiya Ki Dhara Hai

Saahilon Pe Behenewale
Kabhi Suna To Hoga Kahi
Kagazon Ki Kashtiyon Ka
Kahi Kinara Hota Nahi
O Maanjhi Re
Koi Kinara
Jo Kinare Se Mile Woh
Apna Kinara Hai

Paniyon Mein Bah Rahe hain
Kayee Kinare
Toote Huye
Raaston Mein Mil Gaye Hain
Sabhi Saharein
Choote Huye
O Maanjhi Re
Koi Sahara
Majdhare Mein Mile toh
Apna Sahara Hai...

------------------------------------------------------------------------------------------------------------

ಇನ್ನೊಂದು ಪ್ರಯತ್ನ:

ಓ ಅಂಬಿಗನೇ,
ಎನ್ನಯಾ ದಡವು 
ನದಿಯ ಈ ಹರಿವು

ಪಾತ್ರಗಳಲಿ  ಹರಿಯುವವರೇ
ಎಲ್ಲೋ ಕೇಳಿದ್ದುಂಟಲ್ಲವೋ?
ಪತ್ರಗಳಾ ದೋಣಿಗಳಿಗೆ
ಎಲ್ಲೂ ಪಾರವಿರೋದಿಲ್ಲವು...
ಓ ಅಂಬಿಗನೇ,
ಯಾವೊಂದು ಪಾರ
ವದು ಪಾರದೀ
ಸೇರಿಬರುವುದೋ
ಅದು, ಎನ್ನಯಾ ಪಾರವು..

ಜಲಗಳಲ್ಲಿ ಗಮಿಸುತಿಹವು ದಂಡೆ ಹಲವು
ಛಿದ್ರಗೊಂಡು  ;
ಬೀದಿಗಳಲಿ ಕಲೆತುಹೋಗಿವೆ ಆಸರೆ ಸಕಲವೂ 
ಕಳಚಿಕೊಂಡು ;
ಓ ಅಂಬಿಗನೇ,
ಯಾವುದೊ ಒಂದಾಸರೆ ಮಧ್ಯಧಾರೆ
ಯಲಿ  ಸಿಕ್ಕರೆ
ಅದು, ಎನ್ನಯಾ ಆಸರೆಯು