Friday, January 31, 2014

ಇಜಾಝತ್ತು

ನನಗೋ
ದಿಗಿಲಿಕ್ಕಿಕೊಳ್ಳುತ್ತೆ
ದಶದಿಕ್ಕುಗಳಿಂದ ಕಾರ್
ಮುಗಿಲು ಢೀ ಹೊಡೆದು
ಮುತ್ತಿಕ್ಕುವಂತೆ ಎದೆ
ಬಿಚ್ಚಿ ಬಿರಿದು
ಕಿಲಕಿಲನೆ ಬಡಿಯುವಾ ಹೃದಯ
ಧಮನಿಗಳಲಿ ಧುಮ್ಮಿಕ್ಕುವ ನವ
ನವೋನ್ಮಾದದುಮ್ಮೇದಿಯ ನೆನೆ
ನೆನೆದಂತೆ ಹೀಗೆ
ನಡೆದು ಬಿಡುವುದೇ ಇದು
ನಡೆಯಬಾರದಿದ್ದಕ್ಕೆ  ತಡೆಯಿಲ್ಲವೇ..

    ***

ಮಾಯೆ!
ಎಂದೊಡನೆ ಕುಪ್ಪಳಿಸಿ
ಕಿರಿಚುತ್ತಾಳೆ ಉನ್ಮತ್ತ
ಕುಣಿಯುತ್ತಾಳೆ ಸ್ವಚ್ಛಂದ
ಬಿಗಿಯಲೆತ್ನಿಸುತ್ತೇನೆ ಹಿಡಿದು
ಸಡಿಲ ಜಾರುವ ಸ್ನಾಯುಗಳ
ದ್ವಂದ್ವಗಳಲಿ ಕಳವಳಿಸಿ
ಹೀಗೆ ಇದರೊಡನೆ ಏಗಿ
ಏಗಿ ನಡೆದಂತೆ ಕಾಲ
ತೇಗಿಯೂ ಬಿಡುವುದಾ ಹೇಗೆ?

    ***

ಈ ವಿಷಯೆ ನಶೆಯೇರಿದ ನಿಶೆ
ತಹತಹಿಸಿ ತಡಕಾಡುತ್ತೇನೆ
ಒಂದು ತೊಟ್ಟು
ಸುಧೆಗೆ,
ಸಿಕ್ಕೀತನ್ನುವದರಲ್ಲಿ ಶೀಶೆ
ಕೈಜಾರಿ ಉರುಳಿಬಿಡುತ್ತೆ
ಹಾ! ಮತ್ತೆ
ಸಿಕ್ಕಿ ಬಂದರೂ ಆಕಸ್ಮಿಕ
ಒಗ್ಗಿ ಬಂದರೂ ಸಹಜ
ಬಗ್ಗಿಸಿಕೊಂಡರೂ ಬೊಗಸೆಗೆ ತುಸು
ತುಸುವಾಗಿ ಸುಧೆ
ಸೋರಿ ಹೋಗುತ್ತೆ, ವಿವಶ,
ಇಜಾಝತ್ತ ಕಸಿಯುತ್ತ...

    ***

ಕಾಲದೊಡನೆ ದಾಪುಗಾ-
ಲೋಟದಿ ಸೋತು ಹೃದಯ
ನಿಂತೂ ಬಿಡುತ್ತೆ,
-ಹಾಗೊಮ್ಮೆ,
ತುಟಿಯಂಚಿನಲ್ಲಿ...

    ...__...

1 comment:

  1. ದೊರೆತರೂ ಇಜಾಜತ್ತು
    ಬೇಕು ಪುರಸೊತ್ತು!

    ReplyDelete