Wednesday, February 23, 2011

ಅದರರ್ಥಹೀನತೆ

ಆಕಾಶಬೀದಿಯಲಿ ವಿಹಗವಿಹಾರ
ತೂರಿ ತರಗೆಲೆಯಾಗಿ ತೇಲಿ ಪಟವಾಗಿ
ಮೀರ ಹೊರಟುದದು ಬದುಕೆಂದೆಯಾ...
ಹಾರಾಟವಿದು ಹೋರಾಟವೆಂದೆಯಾ.

ಬದುಕ ಹುಚ್ಚು ಹರಿವುಗಳಲಿ
ಅನೂಹ್ಯ ದೊರಕಲು ಕೊರಕಲುಗಳಲಿ
ಅಲೆ ಏರಿಳಿದು ಅಲೆದಲೆದು...
ಅಂತ ಶಾಂತೋದಧಿಯೆಂದೆಯಾ
ತಿರುಗಿ ಮೇಘದಿ ನಿಂದೆಯಾ...

ಬಚ್ಚ ಬಯಲಲಿ ತಿರುಗಾಟ
ಅದರರ್ಥಹೀನತೆ ಪರಮಾರ್ಥ
ಮರುಳಾದುದೇ ತಿರುಳೆಂದೆಯಾ...
ಇರುಳ ಮಬ್ಬುಗತ್ತಲಲಿ 
ಬರಿದೇ ಬತ್ತಲಾದೆಯಾ..?..

___ಗೆ

ನಡುರಾತ್ರಿಯ
ನಿಬಿಡ ಮೋಡಗಳ
ಬಡನಡುಗಳ ಬಳಸಿ..,
ಇಣುಕುತಿಹ ಚಂದ್ರ ನಾ
ನಿನ್ನೊಡಲಾಳ ಕೊಳದಲಿ


ಕ್ಷಣವಾಯ್ತು ದಿನವಾಯ್ತು
ವರುಷ ಎಷ್ಟಾಯಿತೆ ಚವತಿ
ಕ್ಷಣಕೇನು ದಿನಕೇನು
ಸವಿಯುವುದರಲಿ ಸವೆಯುವವು
ವರುಷ ಇಪ್ಪತ್ತೆರಡು
ಯುಗಕಳೆಯಲಿಲ್ಲ...


..ಹರುಷಿಸಲಾದರೋ ಹೊಸ
ನೆಪವೊಂದು ಬೇಕಲ್ಲ!
ಬದುಕಿನಲಿ ನವವರುಷ
ತೇಲಿ ಬರುತಿಹುದಲ್ಲ :)


..ನಿನ್ನ ಹೊಸ ಅಧ್ಯಾಕೆನ್ನ
               ಒಸಗೆಯ ಶುಭಾಶಯ..
 
|| ರಾತ್ರಿ ೧೨:೪೫ , ಆಗೋಸ್ತು ೨೦೦೭ ||

ಅಮಾವಾಸ್ಯೆ ---> ವಸಂತ


ಮೇಘಮಾಲೆಗಳಿಲ್ಲ
ಖಗವಿಹಗಗಳಿಲ್ಲ
ಇದ್ದರೂ ಕಾಣಲ್ಲ
ಕಂಡರೂ ಕಣ್ ಸೆಳೆಯಲ್ಲ
ಬೆಳಕು ಬರೀ ಚುಕ್ಕಿ

ರಾತ್ರಿಯಿದು ಅಮಾವಾಸ್ಯೆಯಲ್ವ?


ಜೀವನದೊಲವಿಲ್ಲ
ನಿರ್ಜೀವ ಜಗವೆಲ್ಲ
ಹೊರಗೇನೂ ಇಲ್ಲ
ಒಳಗೇನೂ ಇಲ್ಲ
ಶತ್ರು! -ಕಂಡಿದ್ದೆಲ್ಲ
ನಿನ್ನೊಳಿದು ಎನ್ನಮವಾಸ್ಯೆಯಲ್ವ?


ಮನ ಮೂಡಣದಿ ನಾ ಮೂಡಿ
ಸಪ್ತವರ್ಣಗಳ ಬೀರಿ
ಸುಪ್ತವರ್ಣಗಳ ನೀ ಹೊಮ್ಮರಳಿಸೆ
ಮೇಘಮಂದಾರಮಾಲೆ
ಖಗ ವಿಹಗ ಚುಕ್ಕಿ ಚಿತ್ತಾರ
ನಿಮ್ಮನಬನದೊಳೆಮ್ಮ ವಸಂತ!

ಶೂನ್ಯಘಟಿ

ಕ್ಷಣಮಾತ್ರದಲಿ ಖಾಲಿ...
ತನುಗಳೆದು ಮನಗಳೆದು
ಅಳಿದುಳಿದಿಹ ಖಾಲಿತನ
ತೋರುತಿಹ ತನವೇನು?


ನೂರು ಭಾವಗಳ ತೂರಿ
ಮೊಗ ಶೂನ್ಯವ ಬೀರಿ
ಕಂಗಳ ನಿರ್ಭಾವುಕ ಭಾವ
ಚೀರುತಿಹುದು ಏನು?


ಪದಪಾತ್ರೆ ಸೋರಿ
ಬರಿದು ತಳದಲಿ
ಎರೆಡೂವರೆ ಅಕ್ಷರಗಳು
ಗೀರಿ ಹೋದುದು ಏನು?


ಅರ್ಥಪೂರ್ಣತೆಯಿಂದ
ಅರ್ಥ ಜಾರಿದ ಕ್ಷಣ
ಪೂರ್ಣ-ತಾ-ಭಾವ-
ಶೂನ್ಯ ಘಟಿಸಿತೇನು?


ಒಂದು ಎರಡಾದುದಂದು
ತಿರುಗದಂತೆ  ನಡೆದುದಂದು
ನಡುವೆ ವಿ-ಸರ್ಗ ಮೌನ
ತೊದಲುತಿಹುದು ಏನು?

ಕಾಳಿಂಗ

ಅಪಠ್ಯ ಪಥ ಪಥ್ಯವಾಗುತಿರೆ ಪಥಿಕ
ನ ಪದಪದದ ಪ್ರತಿ ಚಿಮ್ಮುವ ಪ್ರತೀ
ಪದ ಪಾದಪ್ರತಿಗಳಲಿ ಹೊಮ್ಮಿ
ಸುವ  ಸಹಸ್ರಾರ್ಥ ಹೆಡೆಗಳ ಪದಲಯ
ಬದ್ಧ ನರ್ತನದ ನಡುನಡುವೆ ಅಲ್ಲಲ್ಲಿ ಅಬದ್ಧ-ಪ್ರ
ಬುದ್ಧ ನೆನಪುಗಳ ಕೊಡ ತುಳುಕಿ ನಡು ಬಳುಕಿ ಉಳುಕಿ
ರೆ ಪಾದಪದ್ಮಂಗಳು ಬದ್ಧ
ಗಳ ಲಯ
ದಿ ಉಮ್ಮಳಿಸಿ
ಹ ನವಾಪಾರ್ಥ ಪ್ರತಿಪದ
ತಲದಿ ಕಾಳಿಂಗ!

ಮಳೆ ಮಳೆ ಮಳೆ ಮಳೆ...

ಮಾರುತ ಪೀಡಿತ
ಸಾಗರನೊಡಲು
ಕದಡಲು ಮೂಡಿತು
ಮೋಡದ ಕಡಲು


ನೀರವ ತಾಳದೆ
ನಿರ್ವಾತದೀss
ನೀರಂವss ತಾ
ತಂದ! ನೀರ ವಾತ.
 
ವರ್ಷಳ ಬಗೆಯಲಿ
ರವಿ ಎದೆ ಬಗೆದ
ಬಗೆ ಬಗೆ ಬಣ್ಣದಿ
ಬಗೆದುದ ಒಗೆದ.
 
ಬಾನಲಿ ಭಾನು
ತೋರಿದ ತೂರಿದ
ತೀಡಿದ ತಿದ್ದಿದ
ಕಾಮದ ಬಿಲ್ಲ!


ಹನಿಹನಿ ಇನಿಯಲಿ
ಇನಿಯನ ಇಂಚರ
ಮಿಲನದ ಮುಂಚಿನ
ಕಾತರ ದಾತುರ


ಗಿರಿ-ವನ-ಗಹ್ವರ
ಮೇಘಳ ಮರ್ಮರ
ಅವಳೆದೆ ಗುಡಗುಡಿ
ಗುಡುಗುಡುಗುಡುಗುಡು..
 
ವಾತನ ಬಡಿತ
ಗಿರಿಗಳ ತಡೆತ
ತಪ್ಪಿತೋ ಹಿಡಿತ!
ಮೇಘಳ ತುಡಿತ
 
ಒಡನೆಯೆ ಒಡೆಯಲು
ಮೋಡದ ಮಾಡು
ಸಿಡಿ ಸಿಡಿ ಸಿಡಿಲು
ಸಿಡಿಲೋ ಸಿಡಿಲು
ಮಳೆ ಮಳೆ ಮಳೆ ಮಳೆ...


ಅಂಜಿಕೆಯಂಚು
ಮೀರಲು ಮಿಂಚು
ವರ್ಷಳ ಸ್ಪರ್ಶ
ವರ್ಷದ ಹರ್ಷ.