Wednesday, February 23, 2011

ಮಳೆ ಮಳೆ ಮಳೆ ಮಳೆ...

ಮಾರುತ ಪೀಡಿತ
ಸಾಗರನೊಡಲು
ಕದಡಲು ಮೂಡಿತು
ಮೋಡದ ಕಡಲು


ನೀರವ ತಾಳದೆ
ನಿರ್ವಾತದೀss
ನೀರಂವss ತಾ
ತಂದ! ನೀರ ವಾತ.
 
ವರ್ಷಳ ಬಗೆಯಲಿ
ರವಿ ಎದೆ ಬಗೆದ
ಬಗೆ ಬಗೆ ಬಣ್ಣದಿ
ಬಗೆದುದ ಒಗೆದ.
 
ಬಾನಲಿ ಭಾನು
ತೋರಿದ ತೂರಿದ
ತೀಡಿದ ತಿದ್ದಿದ
ಕಾಮದ ಬಿಲ್ಲ!


ಹನಿಹನಿ ಇನಿಯಲಿ
ಇನಿಯನ ಇಂಚರ
ಮಿಲನದ ಮುಂಚಿನ
ಕಾತರ ದಾತುರ


ಗಿರಿ-ವನ-ಗಹ್ವರ
ಮೇಘಳ ಮರ್ಮರ
ಅವಳೆದೆ ಗುಡಗುಡಿ
ಗುಡುಗುಡುಗುಡುಗುಡು..
 
ವಾತನ ಬಡಿತ
ಗಿರಿಗಳ ತಡೆತ
ತಪ್ಪಿತೋ ಹಿಡಿತ!
ಮೇಘಳ ತುಡಿತ
 
ಒಡನೆಯೆ ಒಡೆಯಲು
ಮೋಡದ ಮಾಡು
ಸಿಡಿ ಸಿಡಿ ಸಿಡಿಲು
ಸಿಡಿಲೋ ಸಿಡಿಲು
ಮಳೆ ಮಳೆ ಮಳೆ ಮಳೆ...


ಅಂಜಿಕೆಯಂಚು
ಮೀರಲು ಮಿಂಚು
ವರ್ಷಳ ಸ್ಪರ್ಶ
ವರ್ಷದ ಹರ್ಷ.

1 comment: