Thursday, January 30, 2014

ಮಹಾಪ್ರಸ್ಥಾನ...

ಇಲ್ಲವಾದಾಗ
ಕಾಲು
ಎಳೆದುಕೊಂಡು ಹೊರಟ
ಉಸುಕಿನೂರಲ್ಲಂತೂ ಆ ಹೊಸ
ನಸು ನಸುಕಲ್ಲೂ  ಒಣ ಕನಸುಗಳ ಇತಿ ದಿಗ್ 
ದಿಗಂತವೇ ದಿಗಂತ ...
ಹಾ! ಮಳೆಯಿಲ್ಲ ಮೋಡಗಳ
ನೆರಳೇ ಇಲ್ಲ ಇದಕೆ
ಎಲ್ಲಿಯಂತವಂತ ಹುಡುಕಿ
ಕೊಳ್ಳೋಣವಂತ, ಕೊಲ್ಲೋಣವಂತ... 

                  ****

ನಿತ್ಯ ಹರಿದ್ವರ್ಣ ನೋಡಿ ನೋಡಿ
ನೋಡುವಲ್ಲಿ ದೃಷ್ಟಿ
ಪಾಳುಬಿದ್ದು  ಚಾಳೀಸಾಗಿ
ಯಾ ಬೋರಾಗಿ  ತಲೆಚಿಟ್ಹಿಡಿದ್ಹೋಗಿ
ಮರಳಿದ್ದಲ್ಲಿ ಬಿರುಬಿಸಿಲಲ್ಲಿ  ಬರಿ ಹುರುಳು
ಹುರಿದರಳಿಸುವುದೆಂದು
ಬಂದೆವು, ನಾವು  ಬಂದೇವು...

                  ****

ಯಾವೂರುಕೇರಿಯ ಯಾವಾರೆಯೋಣಿಯಲಿ
ಎಲ್ಲಿ ಶ್ವಾನವೊ, ನಮ್ಮದಿದೆಂತ ಮಹಾ
ಪ್ರಸ್ಥಾನವೊ...

2 comments:

  1. ಎಲ್ಲರ ಮಹಾಪ್ರಸ್ಥಾನವೂ ಇಷ್ಟೇ!

    ReplyDelete
  2. ಕಾವ್ಯ ಕೇವಲ ಭಾವಪರವಾದದ್ದು ಮಾತ್ರವಾಗಿರುವುದಿಲ್ಲ, ಅದು ಬದುಕಿನ ದರ್ಶನವನ್ನ ನೀಡಬೇಕು ಎಂಬುದು ಒಂದು ನಿಲುವು. ಆ ಒಂದು ನಿಲುವನ್ನ ಇಟ್ಟುಕೊಂಡಾಗ "ಒಂದೇ" ದರ್ಶನವನ್ನ ಹಲವು ಆಯಾಮಗಳಲ್ಲಿ, ವಿವಿದ ಸೂಕ್ಷ್ಮಗಳನ್ನು ತೆರೆದಿಡುತ್ತ ಸಾಗುತ್ತಿರುತ್ತೆ. ನನಗೆ ಕಂಡಂತೆ ನವ್ಯರು ಭಾವವನ್ನು ದಾಟಿ ದರ್ಶನಗಳನ್ನು ಕಟ್ಟಿಕೊಡುತ್ತೇವೆ ಎಂದು ಹೊರಟಾಗ ಮಾಡಿದ್ದು ಇದನ್ನೆ. ಆದರೆ ಅವರ ಮಿತಿಯೆಂದರೆ ಅವರು ಒಂದೇ ದರ್ಶನವನ್ನ "ಕಟ್ಟಿ" ಕೊಡಲು ಪ್ರಯತ್ನಿಸಿದ್ದು.

    ನಿಮ್ಮ ಹಲವು ಕವಿತೆಗಳನ್ನ ಮುಖ್ಯವಾಗಿ "ಮಹಾಪ್ರಸ್ಥಾನ"ವನ್ನು ನೋಡಿದಾಗಲಂತೂ ನನಗೆ ಮೇಲಿನ ವಿವರಣೆಯನ್ನೆ ನೀಡಬೇಕೆನಿಸಿತು. ಕೆಲವು ಕವಿತೆಗಳನ್ನು ಹೊರತುಪಡಿಸಿ ಹಲವು ಕವಿತೆಗಳಲ್ಲಿ ಹೊಮ್ಮುತ್ತಿರುವುದು ದ್ವಂದ್ವದಿಂದ ಕೂಡಿದ ಮನುಷ್ಯನ ಆಂತರಿಕ ಹೊಡೆದಾಟಗಳು, ಬದುಕಿನ ನಿರರ್ಥಕತೆಯ ಶೋಧನೆ. ನೋಡಿ ಅಡಿಗರು, ರಾಮಚಂದ್ರ ಶರ್ಮ, ಎಲಿಯೇಟ್, ಅನಂತಮೂರ್ತಿ, ಹೀಗೆ ಹಲವರು ಮಾಡಿದ್ದು ಇದನ್ನೆ. ಹಾಗಂತ ತಾವು ಅವರು ಹೇಳಿದ್ದನ್ನೇ ಹೇಳುತ್ತಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಬದಲಾಗಿ ಒಟ್ಟು ಹೊಸ ಅರ್ಥಗಳನ್ನು ದರ್ಶನಗಳನ್ನು ನೀಡಲು ಸೋಲುತ್ತಿದೆ ಎಂದು ಹೇಳುತ್ತಿದ್ದೇನೆ. "ಏಳು ಸುತ್ತಿನ ಕೋಟೆ", "ಹಿಮಗಿರಿಯ ಕಂದರ", ಇವೇ ನೆನೆಪಾಗುತ್ತೆ ಮೇಲಿನದನ್ನು ಓದುತ್ತಿದ್ದರೆ. ಹೊಸ ನೋಟಕ್ಕೆ ನೋಡುವ ಹೊಸ ವಿದಾನವೆ ಬೇಕು. ಇರುವ ಎಲ್ಲಾ ಕ್ರಮಗಳನ್ನು ಪೂರ್ತಿ ತೊರೆದು ನೋಡುವ ದೈರ್ಯವೂ ಬೇಕು. ಬೇರೆ ಬೇರೆ ಹಲವು ವಸ್ತುಗಳನ್ನ ಹುಡುಕಿ. ಜೀರ್ಣಿಸಿಕೊಂಡು ಬರೆಯಿರಿ.

    ಮೇಲಿನ ಅಬಿಪ್ರಾಯಗಳು ನನ್ನ ಮಿತಿಯೂ ಆಗಿರಬಹುದು. ಒಟ್ಟಿನಲ್ಲಿ ತಮ್ಮ ಕವಿತೆ ಚಿಂತನೆಗೆ ಹಚ್ಚಿತು.
    ಧನ್ಯವಾದಗಳೊಂದಿಗೆ

    ಅರವಿಂದ



    ReplyDelete