Sunday, February 25, 2018

ವರ್ತನೆಯೊಳಾವರ್ತವರ್ತವರ್ತನಿಸಿ..

               ( ಆವೃತ್ತಿ  - ೧.೨೩)
--------------------------------------------------------


ನಗರಗಳೊಳಗೆ, ನಾಗರೀಕರೊಂದಿಗೆ ಬೆರೆಕೆ
ಯಾಗಿಹೋಗುತ್ತ ಬದುಕು, ಕಾಗೆ ಗೂಗೆ
ನಾಯಿ ಬೆಕ್ಕು ಮೈನ ಗುಬ್ಬಿಗಳಂತೆ

ಲತೆಯು ಪಾಂಗಿನಲ್ಲಿ ಗಂಟಿಯನ್ನಪ್ಪುತ್ತ ಸುತ್ತುತ್ತ ಬೆಳೆಯುತ್ತೆ
ಡ್ರಿಪ್ಪಿನ ತೊಟ್ಟಿಕ್ಕುವ ಲಯಕ್ಕೆ
ಮನ್ಸೂರೆ ಹಾಡತೊಡಗಿರುತ್ತಾರೆ ಪ್ರಜ್ನೆಯ
ಯಾವುದೋ ಪಾತಳಿಯಲ್ಲಿ, ಕೆಲವೇ ಚದುರದಂಗುಲಗಳಷ್ಟು ಮಣ್ಣಿಗೆ
ಅನುವಾಗುವಲ್ಲಿ, ಜೀವದಜಾಡು ಆ ಸಿಮೆಂಟುಸಾರಿಸಿದಂಗಳದಲ್ಲಿ
ಇನ್ನ್ನೂ ಮರವಾಗುವ ಹಾದಿಗುಂಟ ಒಂದು ನೇರಳೇ
ಗಿಡ, ಇರುವೆ ಜೇನುಹುಳ ಇಣಚಿಯಂತ ಒಂದು ಪರಿಸರ
-ವ್ಯವಸ್ಥೆಯಾಗಿರುತ್ತೆ, ಅಲ್ಲಿ, ಆ ಕಾಂಕ್ರೀಟುವನದಲ್ಲಿ
ಪಾರಿವಾಳವೊ ಗೂಡುಕಟ್ಟಿರುತ್ತೆ ಕಬ್ಬಿಣದ ಕಂಬಿಗಳಲ್ಲಿ
ಪಿಷ್ಟಿಗೊಬ್ಬರದುಂಬಿಸೋವಲ್ಲಿ ಹೊರಕಿರಿದ ಅಶ್ವತ್ಥವೊಂದರ
ಬ್ರಹ್ಮರೂಪಾಯ ಬೇರುಗಳ ವಿಲೋಮಚಲನೆ
ಅಥವಾ ಕಟ್ಟೋಣಗಳ ನಿರಂತರ ನಿರಚನೆ
ಪುನಾರಚನೆ

ಈ ಗೊಂದಲಪುರದಲ್ಲಿ ಪುರ-
ಸಂಚಲನವೊಂದಕ್ಕೀಡಾದಂತೆ ಟ್ರಾಫಿಕ್ಕು
ಹಾಗ್ಗೆ ತಗುಲ್ಹಾಕ್ಕೊಳ್ಳೊದೇ
ಸಿಕ್ಕು, ಕಾದುಕುದಿವಂತೆಯರ್ಥ
-ಹೀನತೆ, ಡಿಫ್ಯೂಸಾಗುತ್ತೆ ನಿಧಾನ
ಉಕ್ಕಿ ಚೆಲ್ಲುತ್ತೆ.

ಆ ನಿಲುಗಡೆಯಿಲ್ಲದ ನಿಲ್ದಾಣದಲಿ ನಮ್ಮ ನಿಲ್ಲದೋಡುವ ರೈಲಿಗೆ
ಋಜುವಾದ ಹಸಿರುನಿಶಾನೆ ಬೀಸುವ ಸ್ಟೇಷನ್ಮಾಸ್ತರ
ಹೀಗೆ  ನಮಗೆ ಕೋಳಿ ಕೂಗಿಯೇ ಬೆಳಗು ನಿಜದಲಿ
ಎಂದುಬಿಟ್ಟ ರೈಲಿಗೆ ಇಲಿಗಳ ಹಾದಿಹಿಡಿದೊಂದು ಇಣಚಿಯೂ ಬಂದು
ನಿಂದಲ್ಲಿ ಬಾಗಿಲವರೆಗೆ ಹೋದರೂ, ಬೋಗಿದಾಟದು.
ಏನಿದಾಟವು?
ಸೀಮೆಗಳು ಆಕ್ಸಿಡೆಂಟಲೇ ಆದರೂ ಯಾವತ್ತು, ಕಷ್ಟವೇ,
ಕಾಸ್ಟವೇ ಎನುವ  ಸೀಮೋಲ್ಲಂಘನಯಾನವು.

ಅಲ್ಲಿ ತುದಿ ದಿಗಂತದಿ ಹರಳುಗಟ್ಟಿದ ಘನಸಮುದ್ರದಲೊಂದೆಡೆ
ಸೆಲೆಯೊಡೆವ ಕಾಚಿದರುಣಮಧ್ಯಗವಿದಂತಃಸ್ಥಿತಿ
-ಗತಿ
ದಕ್ಕಿಸಿಕೊಳ್ಳುವಾಟಕ್ಕೆ ಓಂ ಸ್ವಸ್ತಿ.

ಅಥವಾ,

ಪ್ರಕೃತಿ-ಪುರುಷನಂತ ಸಿಮೆಟ್ರಿ
ಬ್ರೇಕಿಂಗ್ನಲ್ಲಿ ವೈಲೇಟಾದ ಚಾರ್ಜ-ಪಾರಿಟಿ
ಯನ್ನ ಕಾಲವೇ
ತಿರುಗಿ ಸರಿಪಡಿಸುತ್ತಂತೆ.


------------------------------------------------
ಈಗ್ಗೆ ನಾಲ್ಕೈದು ವರ್ಷಗಳಿಂದ ಬರೆಯುತ್ತ ಬಂದಿದ್ದು ..,
ಇನ್ನೂ ಮುಂದುವರಿಯಲಿಕ್ಕಿರುವಂಥದ್ದು.  

No comments:

Post a Comment