ಗೋಪಾಲಕೃಷ್ಣ ಅಡಿಗರ 'ಭೂತ' ಕ್ಕೆ ಸಂವಾದಿ-ವಿವಾದಿಯಾಗಿ
"ಆವಿರ್ಭೂತ"
(The Emergent)
೧. 'ಭೂತ'ದೊಂದಿಗೆ ಒಂದು ಮರು-ಅನು'ವಾದಾ'ನುಸಂಧಾನ
೨. 'The Emergent' -- ಆಂಗ್ಲದಲ್ಲಿ 'ಆವಿರ್ಭೂತ'ವಾಗಿದ್ದು
ಹಾಡುವವು ಭವಿಷ್ಯತ್ತಿನೀಕಾಲದ ಕ್ವಾಂಟಂ ಲಿಪಿಗೂಢಗಳು:
ತೆರೆದ ನವಗುಹೆಯಂಚಿನ ಬೆಳಕಿಗೆನುವ ಬಳಸುದಾರಿ
ದಾಪುಗಾಲಿಟ್ಟು ಅಂಡೆತ್ತಿ ಓಡುವುದೇರಿ
ಲಲ್ಲೆಗರೆಯುವ ಕಡೆಗೋಲ ಬಡಿಯತ ಅವಡುಗಚ್ಚಿ
ಹಾಯುವುದೇ ಸಿಲಿಕಾನ್ ಕಣಿವೆಯ ಗಾಜ ಹೊದರೊಡೆದು.
*
ತೊಟ್ಟುಕಳಚಿದ ಕಿವಿಯುಲಿಯ ಬಳ್ಳಿ ಕಾರಿಡಾರಲಿ
ಬಾಲವಿಲ್ಲದಿಲಿ ಮಿಣುಗುವುದು.
ಬಿರ್ಬೆಳಕಲ್ಲಿ ಕಣ್ ಬಿಡಲು ತಡಕಾಡುವ ನನ್ನ
ಸೆಳೆವುದು ಮೆಲ್ಲನೊಂದು ಎಲ್ಲೀಡೀ ತೆರೆ:
ಹುಣ್ಣಿಮೆಗಲ್ಲಗುಳಿಗಳಿಂದೆದ್ದುನ್ಮತ್ತ ಪೊರೆಹರಿವ
ಕೃತಕಮತ್ತೆ ನೀರೆ?
ವರ್ತಮಾನವಾಹಿನಿಯ ತುಂಬ ಭವಿಷ್ಯತ್ತಿನ ಸುದ್ದಿ.
ನೀರ ಕೆಳಕ್ಕೇಳು ಮಡಿ, ಮೇಲೆ ಹದಿನೇಳೆಂಟು ಮಹಡಿ ಜಹಜು ಲಕ್ಸುರಿ.
ಆಗ್ಗಾಗ್ಗೆ ಬೊಬ್ಬಿರಿದು ಖನಿಜಮಿಶ್ರಣವೆರಚುವ
ಜನಗಮನ ಮುಸುಕಿದ ಬಿಸಿನೀರಬುಗ್ಗೆ.
*
ಗ್ಯಾಜೆಟ್ಟು ಮುಚ್ಚಿದರು -
ಕಿವಿಗಡಚಿಕ್ಕುವ ಕಂಕಾಲಹಾಲುಗಳಲಿ
ಬ್ರೆಕ್ತಾಳ ಕೂಲುಸನ್ನೆ ಮುಲುಕುವ ಎತ್ತಿದ ತೋಳುಗಳ ಪರಿಷೆ.
ಮೇಲ್ಪದರಗಳಲ್ಲಿ ಕುಂತ ಧೂಳುಗಳಲ್ಲಿ ಸಂತತ
ಹೊಬ್ಬಿ ಹೊಮ್ಮುವ ಶಿಲೀಂಧ್ರ ಬೀಜಾಣು ಜಾಲ.
ಕಾಳಮಿಂಬಲೆಯ ಪರದೆಮುರಿಮರೆಯಲ್ಲಿ
ಮಾಲು ಹೆಕ್ಕುವ ಮಿಡುಕುಮೊನೆ ತೋರುಕ, - ಇವು
ಹೊಂದಿವೆ ಒಳಾಂಗಣದ ತಣ್ಣನೆಯ ವೆಲ್ವೆಟ್ಟು ನುಣಿ ಹೊದರ.
ನೀರುನೆಲೆ ಇಲ್ಲದವರಾಗುವರು ಪುತ್ರಪ್ರಪೌತ್ರಿಯರು.
ಧೂಳ್ಮರಳುಗಾಳಿ ಹೊಂಜಿ ದಕ್ಕಲಿಕ್ಕೆ ನೆಲವೂ ತೋರದಂತಾಗುವರು.
ಬಚಾಯಿಸುವ, ಸುಸ್ಥಿರಗೊಳಿಸುವ ದಿಕ್ಕ ಬಲ್ಲೆ, ಆದರೂ ದಾರಿ ಮರೆತೆ;
ಬರಿದೇ ತಿರುಗಿಸುತಿದ್ದೇನೆ ಹೀಗೆ ಚಾಲಕದಂಡ.
ಸ್ವಹಿತವ ನೆಚ್ಚಿ ಅಧೋಬುದ್ಧಿಯಾದೆವೋ;
ಇನ್ನಾದರೂ ತೈಲನಿಕ್ಷೇಪ, ಅದಿರುಗಳಿಗಗೆವುದ ನಿಯಂತ್ರಿಸಬೇಕು.
ತುಳಿವಾಗ್ಗೆ ಮೊದಲು ವಾಸನೆಯ ಹಸಿಮಣ್ಣು;
ಚುಮುಕಿಸಿದರೆ ಅಷ್ಟಿಷ್ಟು ಬೀಜದುಂಡೆಗಳ
ಬೆಳದೀತು ಸಹಜ ಹಸಿರು.
ಹದಗೆಡಿಸದೇ ಪಡೆದುದನರಗಿಸಿ ಮರಳಿಸುವ ಬದ್ದತೆಯ
ಇನ್ನಾದರೂ ಬಹುವೇ ಕೃತಿಯಲ್ಲಿಳಿಸಬೇಕು;
ಕಡಿವ ಸುಡುವ ಬಡಿವಾರವಿಲ್ಲದೇ ಪ್ರಕೃತಿದೇವತೆಯೊಪ್ಪುವ ನೆಲಮೂಲ ತಿಳಿವು.
ಬಾಯೊಳಗಿಳಿವುದು ಬೀರು, ಮೇಲಕ್ಕೆ ಹೊಗೆಸುರುಳಿ;
ಭೂಮಿಯುದ್ದಗಲ ಇವುಗಳ ನಿಷ್ಕಾರುಣ ವ್ಯಾಧಿ;
ಬಿರುಬಯಲ ಬಿಳುಚುಮೋಡಪಿಂಡಗಳಂಚಿಗೆ ಬೆಳ್ಳಿಯಯೋಡೈಡ ಪುಡಿ ಮಿಂಚು;
ದಶನಿಮಿಷಗಳಲಾಗುವೀ-ಮಾರ್ಕೆಟ್ಟ ಡೆಲೆವರಿ;
ಕರ್ಣಪಿಶಾಚಿ ಗುಡುಗಾಟ, ಇನ್ಪ್ಲೂಯೆನ್ಸರುಗಳ ಕಾಟ;
ಆವಿರ್ಭೂತವು ಸತ್ಯೋತ್ತರ ವರ್ತಮಾನ.
ಆಗೆದುತ್ತ ಭೂಮಿಕೆ ಎಗ್ಗಿಲ್ಲದ ದತ್ತಾಂಶ ಸಂಚಯನ;
ಕ್ಲಿಕ್-ಬೇಯ್ಟು ಲೈಕುಗಳ ಕ್ರಿಪ್ಟೋ ನಂದನವನ;
ವರ್ಚುಯಲ್ವಾಸ್ತವ ಬುರುಜುಗಳ ಉಕ್ಕಿನ ತಳಪಾಯ.
ಮೂಲ 'ಭೂತ': https://ruthumana.com/2018/03/22/2-translations-a-k-ramanujan
ಆಂಗ್ಲ 'ಆವಿರ್ಭೂತ': https://blurberan.blogspot.com/2025/03/emUrgent.html
...............................................................................................................................................
ಪುನರಾವಿರ್ಭೂತ ಪರ್ಯಾಯಾಂತ್ಯ:
ಬಾಯೊಳಗಣ ಪಸೆ ಕೊಳ್ಳಿ ನುಂಗಿ
ನೆಲದಗಲ ಹವಾಗುಣ ನಾಟಕ ಬೀದಿ
ಬಿಳುಚುಮೋಡಪಿಂಡಗಳಂಚಿಗೆ ಬೆಳ್ಳಿಯಯೋಡೈಡ ಪುಡಿ ಮಿಂಚಿ
ದಶನಿಮಿಷಗಳಲಾಗಿಬಿಡುವೀ-ಮಾರ್ಕೆಟ್ಟ ಡೆಲೆವರಿ
ಯಾಂಕರುಗಳೇ ಗುಡುಗಾಡಲಿ ಇನ್`ಪ್ಲುಯೆನ್ಸರುಗಳೆ ಕಾಡಲಿ
ಆವಿರ್ಭೂತವು ಸತ್ಯೋತ್ತರ ವರ್ತಮಾನವೆನ್ನಿ
ದತ್ತಾಂಶ ಸಂಚಯನಕೆಗ್ಗಿಲ್ಲ ಅಗೆದುತ್ತ ಈ-ವೇದಿಕೆಗೆ ಬನ್ನಿ
ಕ್ರಿಪ್ಟೋ ನಂದನವನ, ಲೈಕಿಸಿ ಕ್ಲಿಕ್ಕುಬೆಯ್ಟುಗಳ ಚಂದಾದಾರರಾಗಿ
ವರ್ಚುಯಲ್ವಾಸ್ತವ ಬುರುಜುಗಳ ಹೊಮ್ಮರಳ ತಳಪಾಯ ಕಾಣಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ