ವಿಭ್ರಮ ತತ್ವ

ಹೂ ನೀನು
ಎಂಬುದು ಭ್ರಮೆಯೆ?
ಇರಬಹುದು;
ಭ್ರಮರ ಮಾತ್ರಾ ನಾ!
ಅಹುದಹುದು;
ಭ್ರಮರದ್ದು ಭ್ರಮೆ ಮಾತ್ರಾನಾ?
ಇರಲಿರಲಿ;

ಭ್ರಮೆಯು 'ಮಾತ್ರ'ನಾ?


******


ಹೂವಂತೆ ಕಂಗೊಳಿಸುತಿರುವ ನಿನ್ನ ಹೊರಾವರಣ ನಿಜದಲ್ಲಿ ಬರಿ ಭ್ರಮೆಯಾ?

ಅದು ಭ್ರಮೆ ಅಂತಲೇ ಆದರೂ..,
ನೀ ಹೂವೆಂದು ಭ್ರಮಿಸಿದ ಭ್ರಮರ.., -ಅದು ಮಾತ್ರಾ ನಾನೇ; ಅಲ್ವ?

ಇರ್ಲಿ,
ಈ ಭ್ರಮರದ್ದೆಲ್ಲಾ ಬರೀ ಭ್ರಮೆ ಮಾತ್ರವಾ?

ಅದೇ..,
ಆ 'ಭ್ರಮೆ' ಎಂಬುದಕ್ಕೆ 'ಮಾತ್ರಾ' ಎಂದು ವಿಶೇಷಣವಿಡೋದು ನ್ಯಾಯವಾ?
ಅದು ಬರೀತವಾ? ಕೇವಲವಾ? ಸಣ್ಣವಿಷಯವಾ? ಅಲ್ಪವಾ? ಮಾತ್ರಾನಾ????

...ಈ ತರಹದ ಪ್ರಶ್ನೆಗಳಿಂದಲೂ,
ಪ್ರಶ್ನಾತೀತವೆನಿಸುವ ಅನುಭವಗಳಿಂದಲೂ,
ವಿಭ್ರಮನಾಗಿರುವ ಪಾಡು ಎನ್ನದು...


********************************************************


ಕಾವ್ಯವೊಂದನ್ನೂ, ಅದಕೆ ಏನೋ ಒಂದು ಅರ್ಥವನ್ನೂ ಕಲ್ಪಿಸಿ ಬರೆದು ವರುಶವಾದ ನಂತರದ ಬೆಳವಣಿಗೆಗಳಿಂದ, ಈ ಕಾವ್ಯದಲ್ಲಿ ಹೊಸ ಅರ್ಥವನ್ನು ಹುಡುಕುವ, ಅಥವಾ ಇದಕ್ಕೆ ಹೊಸದಾಗಿ ಹೊಸ ಉದ್ದೇಶವೊಂದನ್ನು  ಆರೋಪಿಸುವ ಪ್ರಯತ್ನ.

(ಕಾವ್ಯರಸವನ್ನು ಅರ್ಥದಲ್ಲಿ ಕಟ್ಟಿ ಕೊಡುವುದು ರೇಜಿಗೆ ಹುಟ್ಟಿಸುವ ಕೆಲಸವೇ ಆದರೂ, ಇದು ಹೀಗೇ ಬಂದ ನನ್ನ ಮುದ್ದಿನ ಹೆಗ್ಗಣ, ಕ್ಷಮೆಯಿರಲಿ.)

ತತ್ವಶಾಸ್ತ್ರದಲ್ಲಿ 'ಅಂತಿಮ ಸತ್ಯ', 'ಅಂತಿಮ ಪ್ರಶ್ನೆ' ಎಂಬಂತಹ ಪರಿಕಲ್ಪನೆಗಳನ್ನು ಮಾಡಲು ಸಾಧ್ಯವಿದೆ.

 ನಮ್ಮ ನಮ್ಮ ನೆನಪುಗಳ ಲೋಕದಲ್ಲಿ   ಕಾರ್ಯ-ಕಾರಣ-ಸಂಬಂಧಗಳ  ವಿಶ್ಲೇಶಣೆಯನ್ನು  ನಡೆಸುತ್ತಾ ಹೋಗುವುದು... ಆಗ ಮೊದಮೊದಲಲ್ಲಿ  ಹಲವಾರು ಅನುಭವಗಳು - ಪ್ರಶ್ನೆಗಳು ಎದುರಾಗುತ್ತವೆ. ನಂತರ ಹಲವಾರು ಪ್ರಶ್ನೆಗಳಲ್ಲಿ ಸಂಬಂಧ/ಸಾಮ್ಯತೆಗಳು ಗೋಚರಿಸತೊಡಗುತ್ತವೆ. "ಆಯ್ದ ಕೆಲವನ್ನು ಮಾತ್ರಾ ಉತ್ತರಿಸಿದರೂ/ವಿವರಿಸಿದರೂ ಸಾಕು, ಎಲ್ಲವನ್ನೂ ಉತ್ತರಿಸಿದಂತೆ/ವಿವರಿಸಿದಂತೆ ಆಗುತ್ತದೆ" -ಎಂದೆನಿಸತೊಡಗುತ್ತದೆ.  ಹೀಗೆ, ಪ್ರಶ್ನೆಗಳ ಸಂಖ್ಯೆ ಕುಗ್ಗುತ್ತಾ ಹೋಗಿ.., ಕೊನೆಗೆ ಒಂದೇ ಒಂದು ಪ್ರಶ್ನೆ -- ಅಂತಿಮ ಪ್ರಶ್ನೆ-- ಯಲ್ಲಿ ಉಳಿದೆಲ್ಲವೂ ಐಕ್ಯವಾದಂತೆ ಅನಿಸುತ್ತದೆ.

(ಉದಾ: ನಾನು ಯಾರು? / ಬದುಕಿಗೆ ಉದ್ದೇಶವಿದೆಯೇ? / ಬ್ರಹ್ಮ ಸ್ವರೂಪ? ಭಾಷೆಯು ಹೇಗೆ ಬಂದಿತು? Theory of everything / grand unification program ನ ಹಣೆಬರಹವೇನು? ..ಎಂಬಿತ್ಯಾದಿ ಪ್ರಶ್ನೆಗಳು 'ಅಂತಿಮ ಪ್ರಶ್ನೆ'ಯ ಪಟ್ಟಕ್ಕೆ ಸರಿಸಮಾನ ಅಭ್ಯರ್ಥಿಗಳೆನ್ನೋಣ.)

'ಅಂತಿಮಸತ್ಯ' ಎಂದರೆ ಅಂತಿಮಪ್ರಶ್ನೆಗೆ ನೀಡಬಹುದಾದ ಸಮಾಧಾನ/ಪರಿಹಾರ (solution). ('ಉತ್ತರ' ಎನ್ನುವುದು ಬೇರೆ, 'ಸಮಾಧಾನ'/'ಪರಿಹಾರ' ಎನ್ನುವುದು ಬೇರೆ. ಉದಾಹರಣೆಗೆ, ಉತ್ತರವಿಲ್ಲದ ಪ್ರಶ್ನೆಗೂ ಸಹ "ಉತ್ತರವಿಲ್ಲ" ಎಂಬುದು ಒಂದು 'ಸಮಾಧಾನ'/'ಪರಿಹಾರ'ವಾಗಬಹುದು.)

"ಒಂದಲ್ಲ, ಹಲವಾರು ಅಂತಿಮಪ್ರಶ್ನೆಗಳು ಮತ್ತೆ ಸರಳೀಕರಿಸಲಾಗದಂತೆ (irreducible) ಉಳಿದು, ಹಲವಾರು ಅಂತಿಮಸತ್ಯಗಳಾಗುವವೆಂಬ", "ಹಲವಾರು ಮೂಲಭೂತತತ್ವಗಳೆಂಬ" ದ್ವೈತ/ಬಹುತ್ವ ವಾದ-ಸಿದ್ಧಾಂತಗಳೂ ಇವೆ.


ತತ್ವಶಾಸ್ತ್ರವೆನ್ನುವುದು ಹೀಗೆ ಒಂದು ರೀತಿಯಲ್ಲಿ ಅಂತಿಮಪ್ರಶ್ನೆ-ಅಂತಿಮಸತ್ಯಗಳ ಅನ್ವೇಷಣೆಯೆನ್ನಬಹುದು.


"ಸತ್ಯ ನಿರಪೇಕ್ಷವಲ್ಲ,  ಅದು ದೇಶ-ಕಾಲ, ವ್ಯಕ್ತಿ-ಸಮಾಜಗಳನ್ನು ಅವಲಂಬಿಸಿರುವಂತದ್ದಾಗಿ ಅಂತಿಮ/ಸಾರ್ವತ್ರಿಕ ಸತ್ಯ ಎಂಬುದಿಲ್ಲ" -ಎನ್ನುವುದೂ ಒಂದು ವಿಚಾರಧಾರೆ.

"ತತ್ವಶಾಸ್ತ್ರವೆನ್ನುವುದು ಅಂತಿಮಪ್ರಶ್ನೆಯ ಸಮಾಧಾನವೂ ಅಲ್ಲ, ಅದು 'ಅದ'ನ್ನು ಮೂರ್ತ/ಅಮೂರ್ತ ರೂಪದಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಕುರಿತಾಗೂ ಇಲ್ಲ; ಅದು ವಾಸ್ತವದಲ್ಲಿ ಈ ದೊಡ್ಡ ದೊಡ್ಡ ಬಹು ಬುದ್ದಿವಂತಿಕೆಯ ಪ್ರಶ್ನೆ-ಪ್ರಕಲ್ಪನೆಗಳ ವಿನಾಷ!" ಎಂಬಂತಹಾ ವಿಚಾರಧಾರೆಗಳೂ (ಯು.ಜಿ.ಕೆ.) ಇವೆ.

ಆದೆಲ್ಲಾ ಏನೇ ಆಗಿರಲಿ, ನನ್ನ ಅನುಭವ ಹೀಗಿದೆ:

ದೈನಂದಿನ ಜೀವನದಲ್ಲಿನ ಯಾವುದೇ ಒಂದು ಸಾಧಾರಣ ಪ್ರಶ್ನೆ ತೆಗೆದುಕೊಳ್ಳಿ. ಮತ್ತು ಪ್ರಶ್ನೆಯ ಕುರಿತಾಗಿ ಪ್ರಶ್ನಿಸುತ್ತಾ ಹೋಗಿ.  

ಉದಾ: 
>"ಕಾಫಿ ಆಯ್ತಾ?" 
>> "ಕಾಫಿ" ಎಂದರೇನು? ; "ಆಗುವುದು" ಎಂದರೇನು? 
>>> ಯಾವ ನೆಲೆಗಟ್ಟಿನಲ್ಲಿ ಏನಾದರೂ ಇರಲು / 'ಆಗಲು' - 'ಸಂಭವಿಸಲು' ಸಾಧ್ಯ? (ontological ಪ್ರಶ್ನೆ);
>>> ಆಗಿದ್ದು /ಸಂಭವಿಸಿದ್ದು  ಅದು ಹೇಗೆ ತಿಳಿಯುತ್ತದೆ? (epistemological ಪ್ರಶ್ನೆ ) ;
>>>ಸಾಧ್ಯ/ಅಸಾಧ್ಯಗಳ ಸಿಂಧುತ್ವ ಹೇಗೆ ನಿರ್ಧಾರವಾಗುತ್ತೆ? (logics, ತರ್ಕ/ನೈಯ್ಯಾವೈಶೇಶಿಕ..) ;
>>>ಯಾವ ಯಾವುದಕ್ಕೆ 'ಆಗಲು' ಸಾಧ್ಯವಿದೆ? (catagorical  ಪ್ರಶ್ನೆ );
.... ಇತ್ಯಾದಿ.  

ಇದು ಒಂದು ರೀತಿಯಲ್ಲಿ ನಿರಚನಾ(deconstruction) ವಾದಕ್ರಮ, ನಿಷ್ಪತ್ತಿಯ  (etymology ) ಸೀಮೋಲ್ಲಂಘನಯಾನ. 

ತರ್ಕವ್ಯವಸ್ಥೆಯ ಮಜಲುಗಳನ್ನ (order of logic) ಏರಿಸುತ್ತ  ಹೋಗುವ ಈ ಪ್ರಶ್ನೆಗಳ ಸರಣಿಯು ಅಸ್ಪಷ್ಟವಾಗಿಯಾದರೂ ನಿಮ್ಮ ನೆಚ್ಚಿನ ಅಂತಿಮ ಪ್ರಶ್ನೆಯಲ್ಲಿ ಕೊನೆಗೊಳ್ಳುವಂತೆ ವಾದಿಸಲು ಸಾಧ್ಯವಿದೆ. (ವ್ಯುತ್ಪತ್ತಿಯೊಂದಿದ್ದರಾಯಿತಷ್ಟೇ!) --ಪ್ರಸ್ತುತ ಕಾವ್ಯದಲ್ಲೂ ನಾನು ಅದನ್ನೇ ಮಾಡಿದ್ದೇನೆ ಎಂದು (ಈಗ, ಬರೆದು ವರುಶವಾದಮೇಲೆ) ಅನಿಸುತ್ತಿದೆಯೆಂದು ಹೇಳಲು ಇಷ್ಟೆಲ್ಲಾ ಪೀಠಿಕೆ ದೊಂಬರಾಟ ನಡೆಸಬೇಕಾಯಿತು.

-----------------------------------------------------------------------------------------------------------------------------
ಕಂಡದು ನಾನು ಅಂದುಕೊಂಡಿದುದಾ ಎಂಬ ಪ್ರಶ್ನೆಯ ಹಿಡಿದು, ಪ್ರಶ್ನೆಯ ಕುರಿತಾಗಿಯೇ ಪ್ರಶ್ನೆ ಮಾಡುತ್ತಾ, ಬರಬಹುದಾದ ಉತ್ತರಗಳನ್ನೂ ಮರುಪ್ರಶ್ನಿಸುತ್ತಾ, ಕೊನೆಯಲ್ಲಿ ಭ್ರಮೆ-ವಾಸ್ತವಗಳ ಪರಿಕಲ್ಪನೆಯನ್ನೇ ಪ್ರಶ್ನಿಸಿ; ಭ್ರಮೆಯೇ ವಾಸ್ತವ ಏಕಾಗಿರಬಾರದು? ವಾಸ್ತವವೂ ಒಂದು ಭ್ರಮೆಯೇಕಲ್ಲ? -ಎಂದೆಲ್ಲಾ ಪ್ರಶ್ನಿಸುತ್ತಾ.., ಎರಡರಲ್ಲೂ 'ನಿಜ'ಕ್ಕೂ ಭೇಧವಿದೆಯೇ ಎಂಬಲ್ಲಿಗೆ ಕವನ ನಿಲ್ಲಿಸಿದ್ದೇನೆ ಎಂದೆನಿಸುತ್ತಿದೆ.

No comments:

Post a Comment