Original Author:
Eva Haralambidis-Doherty
An amazing Recital scene:
https://youtu.be/JjdhgyLxkJo
From this Charlie Kaufman film:
I'm Thinking Of Ending Things (2020)
Warnings:
Pessimistic diss-out of everyday life...
Bit of misogyny, that too by a poetessa...
#scenic #cynic
ಮೂಳೆನಾಯಿ
ಮನೆಗೆ ಬರುವುದದು ಘೋರ
ನಾಯಿಗಳು ನಿಮ್ಮ ಮುಖ ನೆಕ್ಕಲೀ ಬಿಡಲಿ;
ನಿಮಗೊಂದು ಹೆಂಡತಿ ಇರಲಿ
ಇಲ್ಲವೇ ಹೆಂಡತಿಯಾಕಾರದೊಂದು ಒಂಟಿತನವಷ್ಟೇ ಕಾದಿರಲಿ.
ಮನೆಗೆ ಬರುವುದೆಂದರೆ ಕೆಟ್ಟ ಏಕಾಕಿತನವು,
ಹಾಗಾಗಿಯೇ ನೀವು ನೆನಸುವುದು
ಈಗಷ್ಟೇ ಬಿಟ್ಟು ಬಂದ ಜಾಗದಿಕ್ಕಟ್ಟಿನ
ವಾತಾವರಣದಂಥಾ ಒತ್ತಡವನು—
ನಲುಮೆಯಂದ,
ಏಕೆಂದರೆ ಎಲ್ಲವೂ ಹದಗೆಡುತ್ತೆ
ನೀವು ಮನೆ ಸೇರಿದಂತೆ.
ಯೋಚಿಸುವಿರಿ ನೀವು—
ಹುಲ್ಲುಗಂಟಿಗಳಿಗಂಟಿಕೊಂಡಿರೋ
ಕೀಟಗಳ ಬಗೆಗೆ,
ಹಾದಿಗಂಟಿಕೊಂಡಂತೆ ಸುದೀರ್ಘ
ಗಂಟೆಗಳ ಬಗೆಗೆ,
ಹಾದಿಬದಿ ಬಿದ್ದಿರೋ
ಸಹಾಯವಾಣಿಗಳ ಬಗೆಗೆ,
ಐಸ್‌ಕ್ರೀಮ್‌ಗಳ ಬಗೆಗೆ,
ಹಾಗೇ ಆ ಕೆಲ ವಿಚಿತ್ರ ಆಕಾರ ತಳೆದಿರೋ
ನೀರ್ಮೋಡಗಳ ಬಗೆಗೆ, ನೀರವಗಳ ಬಗೆಗೆ,
ಉತ್ಕಟವಾಗಿ——ಏಕೆಂದರೆ ನೀವು ಹಿಂಬರಲು ಬಯಸಿರಲಿಲ್ಲ.
ಮನೆಗೆ ಬರುವುದು
ಅಸಹನೀಯವಷ್ಟೇ.
ಮತ್ತೆ ಆ ಮನೆವಾತಾವರಣದ ನೀರವ ನಿರ್ಮೋಡಗಳು
ನೀಡುವುದು ಮತ್ತದೇ ಸರ್ವೇಸಾಮಾನ್ಯ ಜಾಡ್ಯ ಮಾತ್ರವೆ.
ಆ ಮೋಡಗಳು, ಅವುಗಳ ಸ್ವಭಾವವೇ ಹಾಗಿರುವಂತೆ
ವಾಸ್ತವದಲ್ಲಿ ಶಂಕೆ ಮೂಡಿಸುವಂತಹವು;
ತೆರಳುವಾಗ ನೀವು ಬಿಟ್ಟದ್ದಕ್ಕೂ ಮಿಕ್ಕಂತೆ
ಮತ್ಯಾವುದೋ ಪದಾರ್ಥಗಳಲ್ಲಿ ತಲೆದೋರುವಂತಹವು.
ನೀವು ಕೂಡ ತುಂಡರಸಿದ್ದು
ಬೇರೊಂದು ಮೋಡಮುಸುಕಿನ ಬಟ್ಟೆಯಿಂದ,
ಹಿಮ್ಮರಳಿಸಿದ್ದು,
ಮಿಕ್ಕುಳಿಸಿದಂತಾದದ್ದು,
ಬೆಳದಿಂಗಳಿಂದ ಅಪಸಂಧಿಗೀಡಾದದ್ದು,
ಮರಳಲು ಅಸಂತುಷ್ಟವಿದ್ದದ್ದು,
ತಪ್ಪು ಎಡೆಗಳಲ್ಲೆ ಬಿಗಿತ ತಪ್ಪಿದ್ದು,
ಹೊಲಿಗೆ ಕಾಣುವ ನಿಕೃಷ್ಟ ಬಟ್ಟೆಗಳ ಜೊತೆ,
ಗಲೀಜು ಒರಸೋ ಬಟ್ಟೆ, ಧರಿಸಿದಂಥದ್ದು.
ಮನೆಗೆ ಬರುವಿರಿ ನೀವು
ಚಂದ್ರಯಾನಿ, ಪರಕೀಯ;
ಭೂಮ್ಯ ಗುರುತ್ವದೆಳೆತ
ಈಗ ಪುನಃ ದುಪ್ಪಟ್ಟಾದ ಶ್ರಮ,
ಎಳೆಯುತ್ತಾ ನಿಮ್ಮ ಶೂ ಲೇಸುಗಳನ್ನ
ಮತ್ತು ನಿಮ್ಮ ಮೈದೋಳುಗಳನ್ನ,
ಆಳಕೊರೆದ ಸಾಲುಗಳಾದಂತೆ
ನಿಮ್ಮ ಹಣೆ ಸುಕ್ಕುಗಂಟಿಕ್ಕಿದೆ.
ಮನೆಗೆ ಬರುವಿರಿ ನೀವಿನ್ನಷ್ಟು ಆಳಕಂಡಂತೆ
ತಳಮುಟ್ಟಿದ ಬಾವಿ ಜಬ್ಬಾಗಿ
ಬೆಸೆದುಕೊಂದಂತೆ ನಾಳೆಗೊಂದೆಳೆ...
ಏನಾದರಾಗಲಿ...
ಏಕಪ್ರಕಾರದ ದಿನಗಳ ದಾಳಿಗೆ ನಿಟ್ಟುಸಿರು ಬಿಡುವಿರಿ.
ಯಾರೂ ಮಾಡಬಹುದೇನೋ... ಕೆಲವೊಮ್ಮೆ...
ಬಿಡಿ...
ಏನಾದರಾಗಲಿ...
ನೀವು ಮರಳಿದ್ದೀರಿ.
ಸೂರ್ಯನೇರಿಳಿವ
ದಣಿದ ಬೆಲೆವಣ್ಣಂತೆ,
ಹವೆಯು ಜಡವು
ಮುರಿದ ಕೀಲಂತೆ,
ವಯಸ್ಸಾಗುತಿದೆ ನಿಮಗಷ್ಟೆ
ಇದೆಲ್ಲದರ ನಡುವೆ.
ಚಲಿಸುವುದಿನ್ನೇನಿಲ್ಲ ನಿಮ್ಮ
ದೇಹದುಪ್ಪಿನ ಕಡಲುಬ್ಬರದ ಹೊರತೂ.
ನಿಮ್ಮ ದೃಷ್ಟಿ ಮಸುಕಾಗುತ್ತೆ.
ಒಯ್ಯುವಿರಿ ನಿಮ್ಮ ಜೊತೆ ನಿಮ್ಮ ಹವೆಯನ್ನು,
ಆ ಬೃಹನ್ನೀಲಿ ತಿಮಿಂಗಿಲ,
ಒಂದಸ್ಥಿಗತ್ತಲೆ.
ನೀವು ಹಿಂದಿರುಗಿ ಬರುತ್ತೀರಿ
ಕ್ಷ-ಕಿರಣ ದೃಷ್ಟಿಯೊಂದಿಗೆ.
ಹಸಿವೊಂದು ಮೈವೆತ್ತಿದಂತಾಗಿ ನಿಮ್ಮ ಕಂಗಳು.
ನೀವು ಮನೆಗೆ ಬಂದಿದ್ದೀರಿ ನಿಮ್ಮ ರೂಪಾಂತರೀ ವರಗಳೊಂದಿಗೆ
ಅಸ್ಥಿಹಂದರದ ಗೃಹವೊಂದಕ್ಕೆ.
ನಿಮಗೆ ಕಾಣಿಸುವುದೆಲ್ಲವೀಗ,
ಸಂಪೂರ್ಣವಾಗಿ, ಮೂಳೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ