Wednesday, January 21, 2015

ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು

(ಇದರ ಹಿಂದಿನೊಂದು ಭಾಗ ಇಲ್ಲಿದೆ)


ನರಜಾಲಗಳ ಗೊಂಡಾರಣ್ಯಗಳ ಗೂಢ ಗಹ್ವರಗಳಲಿ
ಅಮೂರ್ತ ಸಂಕೇತ ಅನಿರ್ವಾಚ್ಯ ವ್ಯಕ್ತಿವಿಶಿಷ್ಟಾನುಭವಗಳಲಿ
ಅರ್ಥರಾಹಿತ ಪೂರ್ಣತಾಭಾವ ಶೂನ್ಯಘಳಿಗೆಗಳಲ್ಲಿ
ಸನ್ನಿವೇಶವಿಲ್ಲದ ಹಿನ್ನೀರ್-ನಿರರ್ಥದಲಿ

ಹುದುಗಿಸಲಿ ನಿನ್ನನೆಲ್ಲಿ
ನನ್ನಲಿ
ನೀನಿರದುದೆಲ್ಲಿ
ನೆನಪುಗಳು ಮುತ್ತಿಕ್ಕಿ ಬರದುದೆಲ್ಲಿ

ಕೆದಕಲೇ ಸ್ಮೃತಿ
ಕೋಶಕೋಶಗಳಾಳಗಳಲಿ
ಹುದುಗಿ ಬಂದವುಗಳಲಿ
ಚರಿತ್ರೆಗಳ ಕಮಟು ಪುಟಗಳಲಿ
ಶಿರ ಹುದುಗುವ ಅವಮಾನಗಳದ್ಯಾವುದೋ ಒಣ ಉಸುಕಿನೂರೊಂದರಲಿ
ಹೃದಯವೇ
ಹುದುಗುವುದೇ ಉಷ್ಟ್ರಪಕ್ಷಿಯೋಪಾದಿಯಲಿ?


ಅಳಿಸಿದುದಕ್ಕಾಗಿ ನಿನ್ನಿಂದ ನೀ ನನ್ನ
ನಳಿಸ ಹೊರಟಿದುದು ನನ್ನೊಳಗಿನಾನಿನ್ನನಿದ
ರೊಳಳಿಸಿ
ಹೋಗುವುದು ನಾ ನನ್ನೊಳಗಿಂದ
ಲಿಂದಿದಾಗದೆಂದು ಧ್ವನಿಯೊಂದು ಹೊರಟಿದು
ದದುವೆ ನಾನ್ನೆನ್ನುವುದು ನೀನನ್ನುವುದಲ್ಲಿ ಚುಂಗೊಂದನಿಡುವುದು
ಹಿಡಿದದನು ಅಭಿಸರಿಪುದು ಅಭಿಸಾರಿಕೆಯತ್ತ
ಮರಳೋಣ ಮತ್ತೆಯರಳೋಣ
ಅರಳುಮರಳಂತಿರುವಲ್ಲಿಂದ ಮತ್ತೆ....

---------------------------------------------------------------------------------------------------------------
ಇದು ಮುಂದುವರಿದ ಪ್ರತಿಸ್ಪಂದನದ ಯಾದೃಚ್ಛಿಕ ಭಾಗ,
 "Eternal Sunshine of the Spotless Mind"
ಎಂಬ 'ಅನೇರ ನಿರೂಪಣೆ 'ಯ ಸಿನೆಮಾಗೆ ...

ಈ ಮುಂಚೆ ಇದರ 'ಶೀರ್ಶಿಖೆ'ಯನ್ನು 'ಅನಂಗಚಿತ್ತದ ಅವಿರತ ಹೊಳಹು' ಅಂತಿಟ್ಟುಕೊಂಡಿದ್ದು ಹೌದಾದರೂ...

'spotless' ಎಂಬುದರ ಅರ್ಥ 'ಕಲೆರಹಿತ' ಅಂತಾಗುತ್ತದೆಯೇ ಹೊರತಾಗಿ
'ಜಾಗ್ಗೆ-ಯಿಲ್ಲದ' (spot-less) ಅಂತಲೇನೂ ಬಳಕೆಯಲ್ಲಿಲ್ಲವಂತ ಜ್ಞಾನೋದಯವಾಯಿತಾದರೂ...

ಅರ್ಥೈಸಿದಂತೆ ಕಾವ್ಯವಲ್ಲವೇ? ಅವರವರಿಗಾದದ್ದೂ ಅರ್ಥವಲ್ಲವೇ?
ಚಿತ್ತವು ಮಸ್ತಿಷ್ಕವೇ ಅಥವಾ ಇನ್ಯಾವುದೋ ಒಂದು ಜಾಗ್ಗೆಯಲ್ಲಿ ಇದೆ/ಇಲ್ಲ ಎನ್ನುವುದು ಎಂದಿಗೂ ಅನಿರ್ಧಾರಿತವಷ್ಟೇ?
ಎಂಬಿತ್ಯಾದಿ ಜಿಜ್ಞಾಸೆಗಳು ಉಳಿಯಿತಾಗಿಯಾದರೂ ...

ಪೋಪರ ಕವನವನ್ನೂ, ಕೌಫ್ಮನ್ನರ ಚಿತ್ರಪಟವನ್ನೂ ತುಲನಾತ್ಮಕವಾಗಿ ಗಮನದಲ್ಲಿರಿಸಿ...

"ನಿರ್ವಿಕಲ್ಪ ಚಿತ್ತದ ಚಿರಂತನ ಬೆಳಗು" ಅಂತಮುಂತಾಗಿ ಮುಂದಾದದ್ದು...
---------------------------------------------------------------------------------------------------------------

2 comments:

  1. ಇದು ಸುಲಭದಲ್ಲಿ ಅರ್ಥವಾಗುವ ಕವನವಲ್ಲ!

    ReplyDelete
    Replies
    1. ಸುಲಭಗ್ರಾಹ್ಯವಾಗಿಲ್ಲ ಅನ್ನೋದನ್ನ ಕನ್`ಫರ್ಮ್ ಮಾಡಿದ್ದಕ್ಕೆ ಧನ್ಯವಾದಗಳು. ಒಂದು ಆನೇರ (non-linear) ನಿರೂಪಣೆಯ ಸಿನೇಮಾಧರಿತವಾದ ಇದು (ಅದರಲ್ಲೂ ಹೀಗೆ ಸಾತತ್ಯವಿಲ್ಲದೇ ಬಿಡಿ ಬಿಡಿ ಭಾಗಗಳಲ್ಲಿ ಬರುತ್ತಿರುವಾಗ, ಇನ್ನೂ ಅಪೂರ್ಣವಾಗಿರುವಾಗ) ಸುಲಭಗ್ರಾಹ್ಯವಲ್ಲದಿರುವುದು ಅನಿರೀಕ್ಷಿತವೇನಲ್ಲ.

      ಇಲ್ಲಿ ನಾನು ಆ ಇಡೀ ಸಿನೇಮಾವನ್ನ ಕಾವ್ಯಖಂಡಗಳಲ್ಲಿ ನಿರ್ವಾಚಿಸಲು ಪ್ರಯತ್ನಿಸುತ್ತಿರುವೆ. ಮುಂದೊಮ್ಮೆ ಹಾಗೆ ಬರುತ್ತಿರುವ ಪ್ರತೀ ಖಂಡಗಳಿಗೂ ಸಂಧರ್ಭಸೂಚೀ ಕಿರುಪಠ್ಯಗಳನ್ನು ನೀಡಿ ಒಟ್ಟಿಗೆ ಸಂಕಲಿಸುವ ಆಲೋಚನೆಯಿದೆ.

      ಸಧ್ಯಕ್ಕೆ ಆ ಸಿನೇಮವನ್ನ ಒಬ್ಸೆಸ್ಸಿವ್ ಆಗಿ ಅಭ್ಯಸಿಸಿದವರಿಗಾದರೂ, ನಿಧಾನವಾಗಿಯಾದರೂ, ಈ ಖಂಡಕಾವ್ಯ (? ಹಾಗಂತ ಕರೆಯಬಹುದೇ? ಗೊತ್ತಿಲ್ಲ.) ವನ್ನ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತೆ ಅಂದುಕೊಳ್ಳುವೆ.

      ಸಧ್ಯಕ್ಕೆ ಸಾಧ್ಯವಿದ್ದರೆ ಆ ಯಾವುದೇ ವಿವರಣಾ ಪಠ್ಯಗಳ ಹಂಗಿಲ್ಲದೆ ನೇರವಾಗಿ ಆ ಸಿನೇಮಾ ನೋಡಿ; ಅದರ ಬಗ್ಗೆ ಅಂತರ್ಜಾಲದಲ್ಲಿ ಓದ ನೋಡಿ;,ಮತ್ತೊಮ್ಮೆ ಸಿನೇಮಾ ನೋಡಿ; ಆಮೇಲೆ ಈ ಕಾವ್ಯವನ್ನ ಗ್ರಹಿಸಲು ಯತ್ನಿಸಿ ನೋಡಿ ಅಂತ...

      Delete